- ಸಸಿಗಳ ನೆಟ್ಟು ಪರಿಸರ ಜಾಗೃತಿ ಕಾರ್ಯಕ್ರಮ - - - ಮಲೇಬೆನ್ನೂರು: ಇಲ್ಲಿಗೆ ಸಮೀಪದ ನಂದಿತಾವರೆ ಬಸವೇಶ್ವರ ಪ್ರೌಢಶಾಲೆ ಮತ್ತು ಕುಂಬಳೂರಿನ ಬಸವ ಗುರುಕುಲದಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ ನಡೆಯಿತು. ಎರಡೂ ಶಾಲೆಗಳ ಆವರಣದಲ್ಲಿ ೨೦೦ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಯಿತು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸಂಘಟನಾ ಕಾರ್ಯದರ್ಶಿ ಸದಾನಂದ ಮಾತನಾಡಿ, ಸೃಷ್ಠಿಯ ಮೂಲಗಳಾದ ವಾಯು, ಪೃಥ್ವಿ, ಜಲ, ಸೂರ್ಯ, ಆಕಾಶ ಇವುಗಳೆಲ್ಲ ನಮ್ಮ ಪ್ರಕೃತಿಯಾಗಿದ್ದು, ಅವುಗಳ ಮಹತ್ವ ಅರಿಯಬೇಕು. ಪ್ರಕೃತಿ ಸಂಪತ್ತನ್ನು ಹಾನಿ ಮಾಡದೇ ಬದುಕಬೇಕು. ಪ್ರಕೃತಿಯೇ ಇಲ್ಲದಿದ್ದರೆ ಮಾನವ ಕುಲವೇ ಇರುವುದಿಲ್ಲ. ಹರಿಯುವ ನದಿಗೆ ಯಾವುದೇ ಗಲೀಜು ವಸ್ತುಗಳನ್ನು ಹಾಕದೇ, ಪ್ರಾಣಿ-ಪಕ್ಷಿಗಳಿಗೆ ತೊಂದರೆ ನೀಡದೇ ಕಾಪಾಡಬೇಕು ಎಂದು ತಿಳಿಸಿದರು.ನಿವೃತ್ತ ಉಪಾಧ್ಯಾಯ ಕೆ.ಸಿರಸಾಚಾರ್ ಮಾತನಾಡಿ, ಹಸಿರಿದ್ದರೆ ಉಸಿರು ಎಂದು ದಿನವೂ ಸ್ಮರಿಸಬೇಕು. ಆ ಮೂಲಕ ನೆಟ್ಟಿರುವ ಸಸಿಗಳನ್ನು ವೃಕ್ಷಗಳಾಗುವಂತೆ ಪೋಷಣೆ ಮಾಡಬೇಕಿದೆ. ವಿಜ್ಞಾನಿ ಜಗದೀಶ್ ಚಂದ್ರ ಬೋಸ್ ಅವರು ಸಸಿಗಳಿಗೂ ಜೀವ ಇದೆ ಎಂಬುದು ನಿರೂಪಿಸಿದರು ಎಂದರು.
ಕೃಷಿ ಅಧಿಕಾರಿ ಮನೋಹರ್ ಮಾತನಾಡಿ, ಸಸಿಗಳನ್ನು ಬೆಳೆಸಿದರೆ ಪಕ್ಷಿಗಳ ಉಳಿವು, ಕಾಡು ಉಳಿದರೆ ಪ್ರಾಣಿಗಳು ಉಳಿವು ಸಾಧ್ಯವಿದೆ. ಕಾಡಿದ್ದರೆ ಮಳೆ, ಬೆಳೆ ಇರಲು ಸಾಧ್ಯ. ಉತ್ತಮ ಆಮ್ಲಜನಕವೂ ಮಾನವನಿಗೆ ದೊರಕುತ್ತದೆ ಎಂದರು.ಬಸವ ಗುರುಕುಲ ವಿದ್ಯಾಸಂಸ್ಥೆ ಪದಾಧಿಕಾರಿಗಳಾದ ಡಿ ರವೀಂದ್ರ, ಹನುಮಂತಪ್ಪ, ನಾಗರಾಜಪ್ಪ ಹಾಜರಿದ್ದರು. ಮುಖಂಡರಾದ ಎಚ್.ಶಂಭುಲಿಂಗಪ್ಪ, ಕಿರಣ್, ತೀರ್ಥಪ್ಪ, ಶಿಕ್ಷಕರಾದ ಬಿ. ಗುಂಡಣ್ಣವರ್, ಗಿರೀಶ್ ಗಂಟೇರ, ಮನೋಹರ್, ಎ.ಬಿ.ಹನುಮಂತಪ್ಪ, ಸಿದ್ಧಾರ್ಥ್, ಸೇವಾ ಪ್ರತಿನಿಧಿ ರೇಖಾ ಮಾತನಾಡಿದರು.
ಸಮಾರಂಭದಲ್ಲಿ ಸಸಿಗಳನ್ನು ವಿತರಿಸಲಾಯಿತು. ಚೈತ್ರ, ಸಿಂಚನಾ ಸಂಗಡಿಗರು ಪರಿಸರ ಗೀತೆ ಹಾಡಿದರು.- - - -ಚಿತ್ರ೧:
ಮಲೇಬೆನ್ನೂರು ಸಮೀಪದ ನಂದಿತಾವರೆ ಬಸವೇಶ್ವರ ಪ್ರೌಢಶಾಲೆ ಮತ್ತು ಕುಂಬಳೂರಿನ ಬಸವ ಗುರುಕುಲದಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ ಅಂಗವಾಗಿ ಶಾಲೆಗಳ ಆವರಣದಲ್ಲಿ ೨೦೦ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು, ನೀರೆರೆಯಲಾಯಿತು.