ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಬಂಡಾಯ ಸಾಹಿತ್ಯ ಸಂಘಟನೆಯ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ಬಂಡಾಯ ಸಾಹಿತ್ಯ: ಹೊಸ ತಲೆಮಾರು’ ಅಭಿಯಾನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವಿಚಾರ ಸಂಕಿರಣ ಹಾಗೂ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿ, ಬಂಡಾಯ ಸಾಹಿತ್ಯದ ಚರಿತ್ರೆಯಲ್ಲಿ ವಿವಿಧ ಕಾಲಘಟ್ಟದ ಬರವಣಿಗೆಗಳನ್ನು ಒಂದೇ ಕಡೆ ಡಾಕ್ಯುಮೆಂಟ್ ಮಾಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಕಥೆಗಳು, ಕವಿತೆಗಳು, ವಿಮರ್ಶೆ ಹಾಗೂ ವೈಚಾರಿಕ ಲೇಖನಗಳನ್ನೊಳಗೊಂಡ ವಿಶಿಷ್ಟ ಸಂಪುಟಗಳನ್ನು ತರುವ ಯೋಜನೆಯ ಬೀಜರೂಪ ಚಿತ್ರದುರ್ಗದಲ್ಲೇ ಮೊಳಕೆಯೊಡೆದಿದೆ. ಈ ಐತಿಹಾಸಿಕ ನಿರ್ಧಾರವನ್ನು ಶೀಘ್ರದಲ್ಲೇ ಕಾರ್ಯರೂಪಕ್ಕೆ ತರಲಾಗುವುದು ಎಂದರು.
ಬಂಡಾಯ ಸಾಹಿತ್ಯ ಸಂಘಟನೆಯ ಕಾರ್ಯಕ್ರಮಗಳಲ್ಲಿ ಹಿರಿಯರು ಮಾರ್ಗದರ್ಶಕರಾಗಿ ಇರಬೇಕೇ ಹೊರತು, ವಿಷಯ ಮಂಡನೆ ಮತ್ತು ವೇದಿಕೆಯ ಮುಂಚೂಣಿಯಲ್ಲಿ ಹೊಸ ತಲೆಮಾರಿನವರಿಗೆ ಹೆಚ್ಚಿನ ಅವಕಾಶ ನೀಡಬೇಕು ಎಂಬ ನಿರ್ಣಾಯಕ ತೀರ್ಮಾನವನ್ನು ನಾವು ಬೆಂಗಳೂರಿನ ಸಭೆಯಲ್ಲಿ ತೆಗೆದುಕೊಂಡಿದ್ದೆವು. ಅದರಂತೆ ಈ ಯುವಕರಲ್ಲಿ ಬರೆಯುವ ಉತ್ಸಾಹ ಮೂಡಿಸಬೇಕಿದೆ. ಚೀನಾದಲ್ಲಿ ಮಾವೋತ್ಸೆ ತುಂಗ್ ಅವರ ಚಳವಳಿ ಹುಟ್ಟಿದ್ದು ಕೇವಲ ನಾಲ್ಕು ಜನ ಲೈಬ್ರರಿಯಲ್ಲಿ ಕುಳಿತು ಮಾತನಾಡಿದ್ದರಿಂದಲೇ ಎಂಬುದನ್ನು ನೆನಪಿಟ್ಟುಕೊಂಡು ನಾವು ನಿರಾಶಾವಾದಿಗಳಾಗದೆ ಕೆಲಸ ಮಾಡಬೇಕು ಎಂದರು.ಬಂಡಾಯ ಸಾಹಿತ್ಯ ಸಂಘಟನೆ ಕೇವಲ ಸಾಹಿತ್ಯಕ್ಕೆ ಸೀಮಿತವಾಗದೆ, ರಾಜ್ಯದ ಪ್ರಮುಖ ಜನಚಳವಳಿಗಳಾದ ರೈತ ಚಳವಳಿ, ದಲಿತ ಚಳವಳಿ, ಕಾರ್ಮಿಕ ಮತ್ತು ಮಹಿಳಾ ಚಳವಳಿಗಳ ಜೊತೆ ಸಹಯಾತ್ರಿಯಾಗಿ ಕೆಲಸ ಮಾಡಿದೆ. ಈ ಚಳವಳಿಗಳೇ ನಮ್ಮ ಮನಸ್ಸನ್ನು ಹಸನುಗೊಳಿಸಿ ಬೆಳೆಸಿವೆ. ಸಾಹಿತ್ಯ ಕ್ಷೇತ್ರದಲ್ಲಿ ಎಡ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳನ್ನು ವಿಸ್ತರಿಸುವ ಆಶಯದೊಂದಿಗೆ 1979ರಲ್ಲಿ ಜನ್ಮತಾಳಿದ ಈ ಸಂಘಟನೆ, ಇವತ್ತಿನವರೆಗೆ ಅಂದರೆ ಕಳೆದ 47 ವರ್ಷಗಳಿಂದ ಒಡೆಯದೇ, ಎಲ್ಲರನ್ನೂ ಒಳಗೊಳ್ಳುತ್ತ ಜೀವಂತವಾಗಿ ಮುನ್ನಡೆದಿರುವುದು ಹೆಮ್ಮೆಯ ವಿಷಯ ಎಂದರು.
ಸೃಜನಶೀಲತೆ ಎಂಬುದು ದುಷ್ಟ ಸರ್ಕಾರಗಳಿದ್ದಾಗ ಮೌನವಾಗಿರದೆ, ಸಮೀಪ ಮತ್ತು ದೂರದ ಸಂಬಂಧಗಳನ್ನು ಏಕಕಾಲಕ್ಕೆ ಕಾಯ್ದುಕೊಳ್ಳುತ್ತ ಪ್ರಭುತ್ವದ ಮಿತಿಗಳನ್ನು ಬೆತ್ತಲೆ ಮಾಡಬೇಕು. ಇತಿಹಾಸದುದ್ದಕ್ಕೂ ಕನ್ನಡ ಸಾಹಿತ್ಯ ಈ ಕೆಲಸವನ್ನು ಯಶಸ್ವಿಯಾಗಿ ಮಾಡಿಕೊಂಡು ಬಂದಿದೆ ಎಂದರು.