ಕನ್ನಡಪ್ರಭ ವಾರ್ತೆ ಬಳ್ಳಾರಿ
ಒಳ ಮೀಸಲಾತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಆ. 16ರ ಸಚಿವ ಸಂಪುಟ ಸಭೆಯಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳದೇ ಹೋದರೆ ಆ. 18ರಂದು ಸರ್ಕಾರದ ವಿರುದ್ಧ ದಂಗೆ ಏಳುತ್ತೇವೆ. ಅಸಹಕಾರ ಚಳವಳಿ ನಡೆಸುತ್ತೇವೆ. ಈ ಬಾರಿ ನಮ್ಮ ತಾಕತ್ತು ಏನೆಂಬುದನ್ನು ತೋರಿಸುತ್ತೇವೆ ಎಂದು ಕರ್ನಾಟಕ ಮಾದಿಗ ಮತ್ತು ಉಪ ಜಾತಿಗಳ ಸಂಘಟನೆಗಳ ಒಕ್ಕೂಟದ ರಾಜ್ಯ ಪ್ರಧಾನ ಸಂಚಾಲಕ ಎಚ್.ಹನುಮಂತಪ್ಪ ಎಚ್ಚರಿಕೆ ನೀಡಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 3 ದಶಕಗಳಿಂದ ಒಳ ಮೀಸಲಾತಿಗಾಗಿ ಹೋರಾಟ ನಡೆಯುತ್ತಿದೆ. ಚುನಾವಣೆ ಸಮಯದಲ್ಲಿ ಒಳ ಮೀಸಲಾತಿ ಜಾರಿಗೆ ಕ್ರಮ ವಹಿಸುವುದಾಗಿ ಹೇಳುವ ಕಾಂಗ್ರೆಸ್ ಸರ್ಕಾರ ಬಳಿಕ ಮರೆತುಬಿಡುತ್ತದೆ. ಶೋಷಿತ ಸಮುದಾಯಗಳ ಯಾವುದೇ ಕಾಳಜಿ ಇರದ ಈ ಸರ್ಕಾರದ ವಿರುದ್ಧ ಹೋರಾಟವನ್ನು ತೀವ್ರಗೊಳಿಸುವ ನಿಲುವು ತೆಗೆದುಕೊಂಡಿದ್ದೇವೆ. ಆ. 16ರವರೆಗೆ ಕಾದು ನೋಡುತ್ತಿದ್ದೇವೆ. ಸಚಿವ ಸಂಪುಟದಲ್ಲಿ ಸಭೆಯಲ್ಲಿ ನ್ಯಾ. ನಾಗಮೋಹನದಾಸ್ ಅವರ ವರದಿ ಜಾರಿಗೆ ಮುಂದಾಗಬೇಕು. ಇಲ್ಲವಾದರೆ ತೀವ್ರತರ ಹೋರಾಟಕ್ಕೆ ಧುಮುಕುತ್ತೇವೆ. ಮಾದಿಗ ಸಮುದಾಯದ ಹಿರಿಯ ಹೋರಾಟಗಾರ ಮಂದಕೃಷ್ಣ ಮಾದಿಗ ಹೋರಾಟದಲ್ಲಿ ಭಾಗವಹಿಸಲಿದ್ದು, ಈ ಬಾರಿ ನಮ್ಮ ತಾಕತ್ತು ಏನೆಂಬುದನ್ನು ತೋರಿಸುತ್ತೇವೆ. ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಬರೀ ಬಾಯಿ ಮಾತಿನಲ್ಲಿ ದಲಿತ ಕಾಳಜಿ ತೋರಿಸುತ್ತಾರೆಯೇ ವಿನಃ, ಕಾರ್ಯರೂಪದಲ್ಲಿ ಕಂಡು ಬಂದಿಲ್ಲ. ಕಾಂಗ್ರೆಸ್‌ನ ಚುನಾವಣೆ ಪ್ರಣಾಳಿಕೆಯಲ್ಲಿ ಒಳ ಮೀಸಲಾತಿ ಜಾರಿಗೊಳಿಸಲಾಗುವುದು ಎಂದು ಹೇಳುವ ಸಿದ್ದರಾಮಯ್ಯ ಅವರು ಬಳಿಕ ಅಸ್ಪೃಶ್ಯ ಸಮುದಾಯದ ಬಗ್ಗೆ ನಿರ್ಲಕ್ಷ್ಯ ತೋರಿಸುತ್ತಾರೆ. ಕಾಂಗ್ರೆಸ್ ನಾಯಕರಿಗೆ ಅಸ್ಪೃಶ್ಯ ಸಮುದಾಯಗಳ ಮತಗಳು ಬೇಕೇ ಹೊರತು, ನಮ್ಮ ಸಮಾಜವನ್ನು ಮುನ್ನಲೆಗೆ ತರುವ ಯಾವ ಕಾಳಜಿ ಕಂಡು ಬರುವುದಿಲ್ಲ. ಮುಖ್ಯಮಂತ್ರಿಗೆ ದಲಿತರ ಬಗ್ಗೆ ಕಾಳಜಿ ಇದ್ದಿದ್ದರೆ ಪರಿಶಿಷ್ಟ ಜಾತಿ ಸಮುದಾಯಕ್ಕೆ ಮೀಸಲಾಗಿರುವ ಎಸ್‌ಸಿಎಸ್ಪಿ, ಟಿಎಸ್ಪಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡುತ್ತಿರಲಿಲ್ಲ ಎಂದು ಟೀಕಿಸಿದರಲ್ಲದೆ, ಒಳ ಮೀಸಲಾತಿಯನ್ನು ವಿರೋಧಿಸುವವರ ಒತ್ತಡಕ್ಕೆ ಮಣಿದು ಸಿಎಂ ಸಿದ್ಧರಾಮಯ್ಯ ಅವರು ಅಸ್ಪೃಶ್ಯ ಸಮಾಜಕ್ಕೆ ಅನ್ಯಾಯ ಮಾಡುತ್ತಿದ್ದಾರೆ. ಆದರೆ, ಈ ಬಾರಿ ಹೋರಾಟವನ್ನು ತೀವ್ರಗೊಳಿಸುವ ನಿರ್ಧಾರಕ್ಕೆ ಬಂದಿದ್ದೇವೆ. ಆ.16ರ ಸಚಿವ ಸಂಪುಟ ಸಭೆಯ ನಿರ್ಧಾರವನ್ನು ಕಾದು ನೋಡುತ್ತೇವೆ ಎಂದು ತಿಳಿಸಿದರು.ಒಕ್ಕೂಟದ ಮುಖಂಡರಾದ ಎ.ಕೆ. ಹುಲುಗಪ್ಪ, ಎ.ಈಶ್ವರಪ್ಪ, ಸಿ.ಸೋಮಶೇಖರ್, ತಿಪ್ಪೇಸ್ವಾಮಿ, ರುದ್ರಪ್ಪ, ವಸಂತಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.