ಕನ್ನಡ ಸಾಹಿತ್ಯದಲ್ಲಿ ಇತ್ತೀಚೆಗೆ ವೈವಿಧ್ಯಮಯ ಬೆಳವಣಿಗೆ

KannadaprabhaNewsNetwork |  
Published : Jul 01, 2024, 01:50 AM IST
೩೦ಎಚ್‌ವಿಆರ್೧ | Kannada Prabha

ಸಾರಾಂಶ

ಕನ್ನಡ ಸಾಹಿತ್ಯದಲ್ಲಿ ಇತ್ತೀಚೆಗೆ ವೈವಿಧ್ಯಮಯ ಬೆಳವಣಿಗೆ ಆಗುತ್ತಿರುವ ಸಂದರ್ಭದಲ್ಲಿ ಜನಸ್ನೇಹಿಯಾಗಿರುವ ಪೊಲೀಸ್ ಇಲಾಖೆ ಸಿಬ್ಬಂದಿಯೂ ಸಾಹಿತ್ಯ ಲೋಕ ಪ್ರವೇಶಿಸುತ್ತಿರುವುದು ಅಭಿನಂದನೀಯ ಸಂಗತಿ ಎಂದು ಸಾಹಿತಿ ಸತೀಶ ಕುಲಕರ್ಣಿ ಅಭಿಪ್ರಾಯ ಪಟ್ಟರು.

ಹಾವೇರಿ: ಕನ್ನಡ ಸಾಹಿತ್ಯದಲ್ಲಿ ಇತ್ತೀಚೆಗೆ ವೈವಿಧ್ಯಮಯ ಬೆಳವಣಿಗೆ ಆಗುತ್ತಿರುವ ಸಂದರ್ಭದಲ್ಲಿ ಜನಸ್ನೇಹಿಯಾಗಿರುವ ಪೊಲೀಸ್ ಇಲಾಖೆ ಸಿಬ್ಬಂದಿಯೂ ಸಾಹಿತ್ಯ ಲೋಕ ಪ್ರವೇಶಿಸುತ್ತಿರುವುದು ಅಭಿನಂದನೀಯ ಸಂಗತಿ ಎಂದು ಸಾಹಿತಿ ಸತೀಶ ಕುಲಕರ್ಣಿ ಅಭಿಪ್ರಾಯ ಪಟ್ಟರು. ನಗರದ ಭಗತ್ ಸಿಂಗ್ ಪಿ.ಯು. ಕಾಲೇಜು ಹಾಗೂ ಸಾಹಿತಿ ಕಲಾವಿದರ ಬಳಗದ ಆಶ್ರಯದಲ್ಲಿ ಜರುಗಿದ ಕವಿ ಷಣ್ಮುಖ ಹೊಂಬಳಿ ಅವರ ಪಿಸುಮಾತು ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಜನರ ಮಧ್ಯೆ ಇದ್ದವರು ಮಾತ್ರ ಕಾವ್ಯ ಬರೆಯಬಹುದು. ಮನಸ್ಸನ್ನು ಅರಳಿಸಲು ಮತ್ತು ಸಾಂಸ್ಕೃತಿಕ ದೀಪ ಉರಿಸಲು ಕಾವ್ಯ ಅತಿ ಮಹತ್ವದ್ದು. ಗಝಲ್, ಚುಟುಕು ಬರಹ, ಹೊಸ ಕಾವ್ಯ ಸಾಹಿತ್ಯಕ ಬದಲಾವಣೆ ಮೂಲಕ ನಮ್ಮೆಲ್ಲರ ಪ್ರೀತಿಗೆ ಪಾತ್ರವಾಗಿದೆ. ಕವಿ ಷಣ್ಮುಖ ಹೊಂಬಳಿ ಅವರ ಪಿಸುಮಾತು ಕವನ ಸಂಕಲನ ಸಂಚಲನ ಮೂಡಿಸಲಿ. ಉದಯೋನ್ಮುಖ ಬರಹಗಾರರಿಗೆ ಪ್ರೇರಣೆ ನೀಡಲಿ ಎಂದು ಹಾರೈಸಿದರು.ಪುಸ್ತಕ ಪರಿಚಯಿಸಿ ಮಾತನಾಡಿದ ಡಾ.ಮಹಾದೇವಿ ಕಣವಿ, ಪಿಸುಮಾತು ಕವನ ಸಂಕಲನದಲ್ಲಿ ಸ್ವಸ್ಥ ಸಮಾಜಕ್ಕೆ ಅಗತ್ಯವಿರುವ ಸ್ಪಷ್ಟ ಸಂದೇಶವಿದೆ. ಲಾಠಿ ಹಿಡಿದು ಸಮಾಜ ತಿದ್ದುವ ವೃತ್ತಿಯಲ್ಲಿದ್ದು, ಮನಸ್ಸಿನ ಭಾವನೆಗಳನ್ನು ಒಳಗೊಂಡ ಸಾಹಿತ್ಯದ ಮೂಲಕವೂ ಸುಧಾರಿಸಬಹುದು ಎಂಬುದನ್ನು ಅರಿತಿದ್ದಾರೆ. ಅಪರಾಧ ಲೋಕದಲ್ಲಿ ಆಪ್ತಭಾವ ಮೂಡಿಸುವ ಯತ್ನ ಮಾಡಿದ್ದಾರೆ. ಕವಿ ತನ್ನೊಳಗಿನ ಮಾತುಗಳನ್ನು ಇಲ್ಲಿ ಹೊರ ಹಾಕಿದ್ದಾರೆ ಎಂದರು.ದಾವಣಗೆರೆ ಡಿವೈಎಸ್‌ಪಿ ಪ್ರಕಾಶ ಪಿ.ಬಿ. ಮಾತನಾಡಿ, ಕವನ ಸಂಕಲನ ಬಿಡುಗಡೆ ಪ್ರತಿ ಕವಿಗೆ ಭಾವನಾತ್ಮಕ ಮತ್ತು ಸಾರ್ಥಕ ಕ್ಷಣ. ಶರೀಫ, ಕನಕ, ಸರ್ವಜ್ಞರ ಮೂಲಕ ವಿಶ್ವಮಾನವ ಕಲ್ಪನೆ ನೀಡಿರುವ ಹಾವೇರಿ ಮಣ್ಣಿನಲ್ಲಿ ಕಾವ್ಯ ಸಾರ ಅಡಗಿದೆ. ಕಾವ್ಯ ಸಮಾಜಕ್ಕೆ ಮಾರ್ಮಿಕ ಸಂದೇಶ ನೀಡುತ್ತದೆ. ಪಿಸುಮಾತು ಕವನ ಸಂಕಲನದಲ್ಲಿ ಪ್ರೀತಿಯ ಒರತೆ ಕಾಣಬಹುದು. ಕವಿ ಷಣ್ಮುಖ ಹೊಂಬಳಿ ವೃತ್ತಿಯಲ್ಲಿ ಪೊಲೀಸ್, ಪ್ರವೃತ್ತಿಯಲ್ಲಿ ಪೊಯೆಟ್ ಆಗಿರುವುದು ಶ್ಲಾಘನೀಯ ಎಂದರು.ಹಾವೇರಿ ಡಿವೈಎಸ್‌ಪಿ ನಿಸ್ಸೀಮಪ್ಪ ಹನಕನಹಳ್ಳಿ, ಆರ್‌ಪಿಐ ಶಂಕರಗೌಡ ಪಾಟೀಲ, ಕವಿ ಷಣ್ಮುಖ ಹೊಂಬಳಿ, ಸಾಕ್ಷ್ಯಚಿತ್ರ ನಿರ್ದೇಶಕ ಗೂಳಪ್ಪ ಅರಳಿಕಟ್ಟಿ ಮಾತನಾಡಿದರು.ಭಗತ್ ಸಿಂಗ್ ಪಿಯು ಕಾಲೇಜು ಸಂಸ್ಥಾಪಕ ಸತೀಶ ಎಂ.ಬಿ. ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಕಲಾವಿದರ ಬಳಗದ ಕರಿಯಪ್ಪ ಹಂಚಿನಮನಿ, ಸಿ.ಎಸ್. ಮರಳಿಹಳ್ಳಿ, ಎಸ್.ಆರ್. ಹಿರೇಮಠ, ಪಿ.ಸಿ. ಹಿರೇಮಠ, ಸುಭಾಷ್ ನಿಂಬಣ್ಣವರ, ಜಿ.ಎಂ. ಓಂಕಾರಣ್ಣವರ, ಹನುಮಂತಸಿಂಗ್ ರಜಪೂತ, ನೇತ್ರಾವತಿ ಅಂಗಡಿ, ಅನಿತಾ ಮಂಜುನಾಥ, ಶೇಖರ ಭಜಂತ್ರಿ ಉಪಸ್ಥಿತರಿದ್ದರು.ಪೃಥ್ವಿರಾಜ್ ಬೆಟಗೇರಿ ನಿರೂಪಿಸಿದರು. ಶಿವಯೋಗಿ ಚರಂತಿಮಠ ಸ್ವಾಗತಿಸಿದರು. ಸೋಮನಾಥ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!