ಸೋಮರಡ್ಡಿ ಅಳವಂಡಿ
ಕೊಪ್ಪಳ:ಅಲ್ಲಾನಗರ, ಹಿರೇಬಗನಾಳ ಸುತ್ತಮುತ್ತಲ ಪ್ರದೇಶದಲ್ಲಿರುವ ಕಾರ್ಖಾನೆಗಳನ್ನು ಹಂತ-ಹಂತವಾಗಿ ಗೊತ್ತುಪಡಿಸಿ, ಬಫರ್ ಜೋನ್ ಇರುವ ಕೈಗಾರಿಕಾ ಪ್ರದೇಶಕ್ಕೆ ಸ್ಥಳಾಂತರ ಮಾಡಬೇಕು.
ಇದು, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ತನ್ನ ಸಮಿತಿಯ ಮೂಲಕ ಕೊಪ್ಪಳ ಬಳಿ ಕಾರ್ಖಾನೆಗಳ ಕ್ಲಸ್ಟರ್ ಸುತ್ತಮುತ್ತಲ ಪ್ರದೇಶದಲ್ಲಿ ಅಧ್ಯಯನ ಮಾಡಿ ಸಲ್ಲಿಸಿರುವ ವರದಿಯಲ್ಲಿ ಮಾಡಲಾಗಿರುವ ದೀರ್ಘಾವಧಿ ಶಿಫಾರಸುಗಳಲ್ಲಿ 10ನೆಯದು.ಈ ಕುರಿತು ಕೆಐಎಡಿಬಿಯೊಂದಿಗೆ ಜಿಲ್ಲಾಡಳಿತ ಸಮಾಲೋಚನೆ ನಡೆಸಿ ಸಾಕಷ್ಟು ಬಫರ್ ಜೋನ್ ಇರುವ ಕೈಗಾರಿಕಾ ಪ್ರದೇಶ ಸ್ಥಾಪಿಸುವ ಕುರಿತು ಗಂಭೀರವಾಗಿ ಚಿಂತನೆ ನಡೆಸಬೇಕು. ಸುತ್ತಮುತ್ತಲ ಪ್ರದೇಶದಲ್ಲಿನ ಹಳ್ಳಿಗಳಲ್ಲಿನ ಮಾಲಿನ್ಯ ಸಮಸ್ಯೆ ತಪ್ಪಿಸಲು ಅಲ್ಲಾನಗರ, ಹಿರೇಬಗನಾಳ ಬಳಿ ಇರುವ ಕಾರ್ಖಾನೆ ಗೊತ್ತುಪಡಿಸಿದ ಕೈಗಾರಿಕಾ ಪ್ರದೇಶಗಳಿಗೆ ಹಂತ-ಹಂತವಾಗಿ ಸ್ಥಳಾಂತರ ಮಾಡಬೇಕು ಎಂದು ಶಿಫಾರಸು ಮಾಡಿದೆ.
ಕೈಗಾರಿಕೆಯಿಂದ ಕೃಷಿ ಉತ್ಪಾದನೆಯ ಮೇಲೆಯೂ ಪೆಟ್ಟು ಬಿದ್ದಿದೆ. ಜೋಳ, ಭತ್ತ, ಕೆಂಪಕ್ಕಿ ಸೇರಿದಂತೆ ಕೃಷಿ ಬೆಳೆಗಳ ಉತ್ಪಾದನೆಯೂ ಗಣನೀಯವಾಗಿ ಇಳಿಕೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕೈಗಾರಿಕೆಗಳಿಂದ ಹೊರಬರುವ ಧೂಳಿನಿಂದ ಮಣ್ಣಿನ ಸೂಕ್ಷ್ಮಜೀವಿ ಚಟುವಟಿಕೆ ಪ್ರತಿಬಂಧಿಸಿರುವುದರಿಂದ ಕೈಗಾರಿಕೆಗಳ ಪಕ್ಕದಲ್ಲಿಯ ಹೊಲಗಳಲ್ಲಿನ ಬೆಳೆ ಇಳುವರಿ ಕುಸಿತ ಕಂಡಿದೆ. ಈ ಕುರಿತು ರೈತರಿಂದ ಕುಂದು-ಕೊರತೆ ಸ್ವೀಕಾರ ಮಾಡಿದಾಗ್ಯೂ ರಾಜ್ಯ ಕೃಷಿ ಇಲಾಖೆಯಿಂದ ಈ ಕುರಿತು ಪೋಷಕಗಳ ಸ್ಥಿತಿ-ಗತಿಯ ವರದಿ ಹಂಚಿಕೆ ಮಾಡಿಕೊಳ್ಳದೆ ಇರುವುದು ಕಂಡು ಬಂದಿದೆ.ತಪಾಸಣೆಯ ವೇಳೆಯಲ್ಲಿ ಹೊಲಗಳಿಗೆ ಭೇಟಿ ನೀಡಿದಾಗ ಬೆಳೆಗಳ ಮೇಲೆ ಧೂಳು ಶೇಖರಣೆಯಾಗಿರುವುದು ಕಂಡು ಬಂದಿತು. ಕೈಗಾರಿಕೆಗಳು ಇರುವುದರಿಂದ ಭಾರಿ ವಾಹನಗಳ ಸಂಚಾರವೂ ಇರುವುದು ಸಹ ಅದರ ಹೊಗೆ ಮತ್ತು ಧೂಳು ಪರಿಣಾಮವನ್ನುಂಟು ಮಾಡಿದೆ. ಕಪ್ಪು ಹೊಗೆ ವ್ಯಾಪಕವಾಗಿ ಹರಡಿಕೊಂಡಿರುವುದು ಕಂಡು ಬಂದಿದ್ದು, ಈ ಕುರಿತು ಮಾಲಿನ್ಯದ ಮಟ್ಟ ತಿಳಿಯಲು ಅಧ್ಯಯನಗಳ ಅಗತ್ಯವಿದೆ. ಕಾರ್ಖಾನೆ ವ್ಯಾಪ್ತಿಯ 5 ಕಿಮೀ ಕೆಟ್ಟ ಸನ್ನಿವೇಶದಲ್ಲಿನ ಅಧ್ಯಯನವಾಗಬೇಕು. ಹೊಗೆ ಹೊರಸೂಸುವ ಸಾಧನಗಳ ಯಾವುದೇ ಉದ್ದೇಶಪೂರ್ವಕ ಬೈಪಾಸ್ ವರದಿ ಮಾಡಲು ಕೈಗಾರಿಕಾ ಘಟಕಗಳಿಗೆ ರಾತ್ರಿ ಗಸ್ತು ನಡೆಸಲು ಜಿಲ್ಲಾಡಳಿತದೊಂದಿಗೆ ಸ್ಥಳೀಯರನ್ನೊಳಗೊಂಡ ಸಮನ್ವಯ ಸಮಿತಿ ರಚಿಸಬೇಕು. ಈ ಮೂಲಕ ಫಿಲ್ಟರ್ ಮಾಡದೆ ಹೊಗೆ ಹೊರ ಸೂಸುವುದರ ಮೇಲೆ ನಿಗಾ ಇಡಲು ಕ್ರಮವಹಿಸಲು ಅನುಕೂಲವಾಗುತ್ತದೆ. ಕಾರ್ಖಾನೆಯವರು ಅಂತರ್ಜಲ ಹಾನಿಯ ಕುರಿತು ಅಂತರ್ಜಲ ಪ್ರಾಧಿಕಾರದ ಪರವಾನಗಿ ಪಡೆಯಬೇಕು. ಇದನ್ನು ಕಡ್ಡಾಯಗೊಳಿಸಬೇಕು.
ಹೊಸ ಕಾರ್ಖಾನೆ ಸ್ಥಾಪನೆ ಎಷ್ಟು ಸರಿ?:ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವೇ ಅಲ್ಲಾನಗರ ಮತ್ತು ಹಿರೇಬಗನಾಳ ಗ್ರಾಮದ ಬಳಿ ಇರುವ ಕಾರ್ಖಾನೆಗಳನ್ನು ಹಂತ ಹಂತವಾಗಿ ಬಫರ್ ಜೋನ್ ಇರುವ ಕೈಗಾರಿಕಾ ಪ್ರದೇಶಕ್ಕೆ ಸ್ಥಳಾಂತರ ಮಾಡುವಂತೆ ಶಿಫಾರಸು ಮಾಡುವ ವೇಳೆಯಲ್ಲಿ ಕೊಪ್ಪಳ ಜಿಲ್ಲಾ ಕೇಂದ್ರಕ್ಕೆ ಮತ್ತು ಹತ್ತಾರು ಗ್ರಾಮಗಳಿಗೆ ಹೊಂದಿಕೊಂಡು ಬಿಎಸ್‌ಪಿಎಲ್ ಕಾರ್ಖಾನೆ ಸ್ಥಾಪಿಸುವುದು ಎಷ್ಟು ಸರಿ? ಈಗಿರುವ ಕಾರ್ಖಾನೆಗಳನ್ನೇ ಸ್ಥಳಾಂತರ ಮಾಡುವಂತೆ ಶಿಫಾರಸು ಮಾಡಿರುವಾಗ ಹೊಸ ಕಾರ್ಖಾನೆಯ ಸ್ಥಾಪನೆ ಎಷ್ಟು ಸೂಕ್ತ ಎನ್ನುವುದನ್ನು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು.
ವರದಿ ಅನುಷ್ಠಾನವಾಗಲಿ:ಕೇಂದ್ರ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ವಿಜ್ಞಾನಿಗಳನ್ನೊಳಗೊಂಡ ಸಮಿತಿಯೇ ಮಾಡಿರುವ ಶಿಫಾರಸುಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಅನುಷ್ಠಾನ ಮಾಡುವ ಮೂಲಕ ಕೊಪ್ಪಳ ಹಾಗೂ ಸುತ್ತಮುತ್ತಲ ಗ್ರಾಮಗಳ ಹಿತ ಕಾಯಬೇಕಾಗಿದೆ. ಈ ದಿಸೆಯಲ್ಲಿ ತುರ್ತಾಗಿ ಅಧ್ಯಯನ ಸಮಿತಿಯ ವರದಿ ಅನುಷ್ಠಾನ ಮಾಡಬೇಕಾಗಿದೆ.