ಕನ್ನಡಪ್ರಭ ವಾರ್ತೆ ಮೈಸೂರುಜಮೀನು ಸೇರಿದಂತೆ ಮತ್ತಿತರ ಸವಲತ್ತುಗಳನ್ನು ಪಡೆಯಲು ಸೇನೆಗೆ ಸೇರುವಾಗ ನೀಡುವ ಮೂಲ ವಿಳಾಸ, ನಿವೃತ್ತಿ ಆಗುವಾಗ ಇರುವ ವಿಳಾಸದಲ್ಲಿ ಒಂದನ್ನು ಪರಿಗಣಿಸುವಂತೆ, ಎರಡು ವಿಳಾಸ ಪರಿಗಣಿಸುವ ಕಾಯ್ದೆಗೆ ಅಗತ್ಯ ತಿದ್ದುಪಡಿ ಮಾಡಲು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಜಿಲ್ಲಾಡಳಿತ ಭರವಸೆ ನೀಡಿದೆ.ಜಿಪಂ ಸಭಾಂಗಣದಲ್ಲಿ ಸೈನಿಕರ ಕಲ್ಯಾಣ ಮತ್ತು ಪುನವರ್ಸತಿ ಇಲಾಖೆ ವತಿಯಿಂದ ಸೋಮವಾರ ನಡೆದ ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಯ ಮಾಜಿ ಸೈನಿಕರು ಹಾಗೂ ಅವಲಂಬಿತರ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಅವರು, ಮಾಜಿ ಸೈನಿಕರ ಹಲವಾರು ಸಮಸ್ಯೆಗಳನ್ನು ಆಲಿಸಿದದರು.ಮಾಜಿ ಸೈನಿಕ ಉಮೇಶ್ ಮಾತನಾಡಿ, ನಾನು ಸೇನೆಗೆ ಸೇರಿದಾಗ ಸೇವಾ ಪುಸ್ತಕದಲ್ಲಿ ಮಡಿಕೇರಿ ಜಿಲ್ಲೆ ನಮೂದಾಗಿದೆ. ಈಗ ಮೈಸೂರಿನಲ್ಲಿ 20 ವರ್ಷಗಳಿಂದ ವಾಸಿಸುತ್ತಿದ್ದೇನೆ. ಈಗ ಅರ್ಜಿ ಸಲ್ಲಿಸಿದರೆ ಮಡಿಕೇರಿ ಜಿಲ್ಲೆಯಲ್ಲಿ ಸಲ್ಲಿಸುವಂತೆ ಹೇಳುತ್ತಾರೆ. ಹೀಗಾಗಿ, ಎರಡು ವಿಳಾಸದ ದಾಖಲೆಗಳನ್ನು ಪರಿಗಣಿಸುವಂತೆ ಮಾಡಬೇಕು ಎಂದು ಕೋರಿದರು.ನಿವೃತ್ತ ಸೈನಿಕರ ಸಂಘದ ದಿವಾಕರ್ ಮಾತನಾಡಿ, ಸೇನೆಗೆ ಸೇರುವಾಗ 624 ಮಾಜಿ ಸೈನಿಕರು ಮಡಿಕೇರಿ ಜಿಲ್ಲೆಯಲ್ಲಿ ದಾಖಲೆಗಳಲ್ಲಿ ಮೂಲ ವಿಳಾಸ ನೀಡಿದ್ದು, ಈಗ ನಿವೃತ್ತಿಯಾದ ಮೇಲೆ 300 ಮಂದಿ ಮೈಸೂರಿನಲ್ಲಿ ಎಲ್ಲಾ ದಾಖಲೆಗಳನ್ನು ಹೊಂದಿದ್ದಾರೆ. ಆದರೆ, ಸವಲತ್ತುಗಳನ್ನು ಪಡೆಯಲು ಅರ್ಜಿ ಸಲ್ಲಿಸಿದರೆ ಮಡಿಕೇರಿ ಜಿಲ್ಲೆಗೆ ಸಲ್ಲಿಸುವಂತೆ ಹಿಂಬರಹ ಕೊಡುತ್ತಿರುವ ಪರಿಣಾಮ ಸಮಸ್ಯೆಯಾಗಿದೆ. ಮೈಸೂರು, ಕೊಡಗು ಜಿಲ್ಲೆಯಲ್ಲಿ ಈ ಸಮಸ್ಯೆ ಇಲ್ಲ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಇರುವ ಕಾರಣ ಕಾಯ್ದೆಗೆ ತಿದ್ದುಪಡಿ ತರಬೇಕು. ಸರ್ಕಾರಕ್ಕೆ ಈಗಾಗಲೇ ಮನವಿ ಪತ್ರವನ್ನು ಸಲ್ಲಿಸಲಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜು ಅವರು, ಸೇವಾ ಪುಸ್ತಕದಲ್ಲಿ ನೀಡಿರುವ ವಿಳಾಸವನ್ನು ನಿವೃತ್ತಿಯಾದಾಗ ಪರಿಗಣಿಸುವುದು. ಒಂದು ವೇಳೆ ನಿವೃತ್ತಿಯಾಗುವಾಗ ಇರುವ ವಿಳಾಸವನ್ನು ಮೂಲ ವಿಳಾಸಕ್ಕೆ ಬದಲಿಸಿಕೊಳ್ಳಲು ಅವಕಾಶ ಕೊಡಲು ಕಾಯ್ದೆಗೆ ಅಗತ್ಯವಿರುವ ತಿದ್ದುಪಡಿ ತರಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಭರವಸೆ ನೀಡಿದರು.ಮೂಲ ವಿಳಾಸವನ್ನು ಬದಲಿಸಿಕೊಳ್ಳುವ ಅಥವಾ ಹಾಲಿ ಇರುವ ವಿಳಾಸ ಪರಿಗಣಿಸುವಂತೆ ಅವಕಾಶ ನೀಡುವಂತೆ ಸರ್ಕಾರದ ಗಮನಕ್ಕೆ ತರಲಾಗುವುದು. ಇಂತಹ ಸಮಸ್ಯೆಗಳನ್ನು ಎದುರಿಸುತ್ತಿರುವ ಎಲ್ಲರ ದಾಖಲೆಗಳನ್ನು ಪಡೆದು ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಮಾತನಾಡಿ, ಜಿಲ್ಲೆಯ ಎಲ್ಲಾ ಇಲಾಖೆಗಳ ಸಮನ್ವಯದೊಂದಿಗೆ ಮಾಜಿ ಸೈನಿಕರು ಹಾಗೂ ಅವರ ಅವಲಂಬಿತರ ಕುಂದುಕೊರತೆಗಳನ್ನು ಪರಿಹರಿಸಲಾಗುವುದು. ಇನ್ನೂ ಮುಂದೆಯೂ ಮಾಜಿ ಸೈನಿಕರ ಸಮಸ್ಯೆಗಳನ್ನು ಪ್ರಥಮ ಆದ್ಯತೆಯಾಗಿ ಪರಿಹರಿಸಲಾಗುವುದು ಎಂದರು.ತಮ್ಮ ಹಂತದಲ್ಲಿ ಪ್ರತಿ ತಿಂಗಳು ಮಾಜಿ ಸೈನಿಕರ ಕುಂದು ಕೊರತೆಗಳ ಸಭೆ ನಡೆಸಿ ಪರಿಹರಿಸುವಂತೆ ಈ ಸಂಬಂಧ ವರದಿ ನೀಡುವಂತೆ ಉಪ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪ ನಿರ್ದೆಶಕರಿಗೆ ಸೂಚಿಸಿದರು.ಮೈಸೂರು ಅಭಿವೃದ್ದಿ ಪ್ರಾಧಿಕಾರದ ಆಯುಕ್ತ ಕೆ.ಆರ್. ರಕ್ಷಿತ್, ಸೈನಿಕರ ಕಲ್ಯಾಣ ಮತ್ತು ಪುನವರ್ಸತಿ ಇಲಾಖೆ ಉಪ ನಿರ್ದೇಶಕ ಮಂಜುನಾಥ್ ರೆಡ್ಡಿ, ಅಧೀಕ್ಷಕ ಜಗದೀಶ್, ವೆಲ್ ಫೇರ್ ಆರ್ಗನೈಸೇಷನ್ ಡಿ. ವಿಜಯಕುಮಾರ್ ಮೊದಲಾದವರು ಇದ್ದರು.