ಕುಂದೂರು ಮಠದಲ್ಲಿ ಪುನರ್‌ ನಿರ್ಮಾಣಗೊಂಡ ದೇವಾಲಯಗಳ ಲೋಕಾರ್ಪಣೆ

KannadaprabhaNewsNetwork |  
Published : Dec 07, 2024, 12:32 AM IST
6ಎಚ್ಎಸ್ಎನ್5 : ಚನ್ನರಾಯಪಟ್ಟಣ ತಾಲ್ಲೂಕಿನ ಶ್ರೀ ಕುಂದೂರು ಆದಿಚುಂಚನಗಿರಿ ಮಹಾಸಂಸ್ಥಾನ ಮಠದಿಂದ ಪುನರ್ ನಿರ್ಮಾಣಗೊಂಡ ದೇವಾಲಯಗಳ ಕಳಶಾಭಿ?ಕ ನೆರವೇರಿಸಿದ ನಿರ್ಮಲನಂದನಾಥ ಶ್ರೀಗಳು, ಇವರೊಂದಿಗೆ ಶ್ರೀ ಶಂಭುನಾಥ ಸ್ವಾಮೀಜಿ ಮತ್ತು ಶ್ರೀ ಶಿವಪುತ್ರನಾಥ ಸ್ವಾಮೀಜಿ ಇದ್ದರು. | Kannada Prabha

ಸಾರಾಂಶ

ಚನ್ನರಾಯಪಟ್ಟಣ ತಾಲೂಕಿನ ದಂಡಿಗನಹಳ್ಳಿ ಹೋಬಳಿಯಲ್ಲಿನ ಶ್ರೀ ಕುಂದೂರು ಆದಿಚುಂಚನಗಿರಿ ಮಹಾಸಂಸ್ಥಾನ ಮಠದಿಂದ ಕುಂದೂರು ಗ್ರಾಮದ ಆದಿದೇವತೆಗಳಾದ ಶ್ರೀ ವಿಶ್ವನಾಥ ಸ್ವಾಮಿ ಮತ್ತು ಶ್ರೀ ರಂಗನಾಥಸ್ವಾಮಿ ಮತ್ತು ಪರಿವಾರ ದೇವತೆಗಳ ಪುನರ್ ನಿರ್ಮಾಣಗೊಂಡ ದೇವಾಲಯಗಳ ಲೋಕಾರ್ಪಣೆ ಕಾರ್ಯ ಹಾಗೂ ಕುಂಭಾಭಿಷೇಕ ಮತ್ತು ಧರ್ಮಧ್ವಜ ಸ್ಥಾಪನೆಯೊಂದಿಗೆ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು. ಶ್ರದ್ಧೆ, ಜ್ಞಾನದಿಂದ ಕೂಡಿರುವ ಮನಸನ್ನು ಮಲೀನವಾಗದಂತೆ ನೋಡಿಕೊಳ್ಳಲು ದೇವರ ಆರಾಧನೆ ಮುಖ್ಯವಾಗುತ್ತದೆ ಎಂದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಯಾವ ವ್ಯಕ್ತಿಯ ಮನಸ್ಸು ಶ್ರದ್ಧೆ, ಜ್ಞಾನದಿಂದ ಕೂಡಿರುತ್ತದೆಯೂ ಅಂತಹ ವ್ಯಕ್ತಿಗೆ ಯಾವ ವರದ ಅವಶ್ಯಕತೆಯಿರುವುದಿಲ್ಲ. ದೇವರು ಕೊಟ್ಟಿರುವ ಮನಸ್ಸನ್ನು ಶುದ್ಧಿಯಾಗಿಟ್ಟುಕೊಳ್ಳುವುದೇ ಭಗವಂತ ಕರುಣಿಸುವ ಮಹಾನ್ ಪ್ರಸಾದ ಎಂದು ಶ್ರೀ ಆದಿಚುಂಚನಗಿರಿ ಮಠದ ಪೀಠಾಧಿಪತಿ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಭಕ್ತಸಮೂಹಕ್ಕೆ ಸಂದೇಶ ನೀಡಿದರು.

ತಾಲೂಕಿನ ದಂಡಿಗನಹಳ್ಳಿ ಹೋಬಳಿಯಲ್ಲಿನ ಶ್ರೀ ಕುಂದೂರು ಆದಿಚುಂಚನಗಿರಿ ಮಹಾಸಂಸ್ಥಾನ ಮಠದಿಂದ ಕುಂದೂರು ಗ್ರಾಮದ ಆದಿದೇವತೆಗಳಾದ ಶ್ರೀ ವಿಶ್ವನಾಥ ಸ್ವಾಮಿ ಮತ್ತು ಶ್ರೀ ರಂಗನಾಥಸ್ವಾಮಿ ಮತ್ತು ಪರಿವಾರ ದೇವತೆಗಳ ಪುನರ್ ನಿರ್ಮಾಣಗೊಂಡ ದೇವಾಲಯಗಳ ಲೋಕಾರ್ಪಣೆ ಕಾರ್ಯ ಹಾಗೂ ಕುಂಭಾಭಿಷೇಕ ಮತ್ತು ಧರ್ಮಧ್ವಜ ಸ್ಥಾಪನೆಯೊಂದಿಗೆ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು. ನಂತರ ನೆರೆದಿದ್ದ ಭಕ್ತರಿಗೆ ಆಶೀರ್ವಚನ ನೀಡಿದ ಶ್ರೀಗಳು, ದೇವತಾಕಾರ್ಯಗಳ ಆಚರಣೆಯೊಂದಿಗೆ ಗುರು ಹಿರಿಯರನ್ನು ಭಕ್ತಿಭಾವದಿಂದ ಕಾಣುವುದರಿಂದ ಶ್ರದ್ಧೆಯುಂಟಾಗುತ್ತದೆ. ಶ್ರದ್ಧೆಯಿಂದ ಜ್ಞಾನ ಲಭಿಸುತ್ತದೆ. ಶ್ರದ್ಧೆ, ಜ್ಞಾನದಿಂದ ಕೂಡಿರುವ ಮನಸನ್ನು ಮಲೀನವಾಗದಂತೆ ನೋಡಿಕೊಳ್ಳಲು ದೇವರ ಆರಾಧನೆ ಮುಖ್ಯವಾಗುತ್ತದೆ ಎಂದರು.

ಮನುಷ್ಯ ಜನ್ಮ ಅತ್ಯುತ್ತಮವಾಗಿದ್ದು ಪುಣ್ಯ ಕಾರ್ಯಗಳನ್ನು ಮಾಡುವುದರಿಂದ ವ್ಯಕ್ತಿಯಾದವನು ದೇವರ ಸ್ಥಾನ ತುಂಬಬಹುದು, ನಿಸ್ವಾರ್ಥ ಸೇವೆಯಿಂದ ಬದುಕು ಪ್ರಾರಂಭವಾಗಿ ಯಾವ ಅಪೇಕ್ಷೆ ಇಟ್ಟುಕೊಳ್ಳದೇ ಮಠದ ಮೂಲಕ, ಸ್ವಾಮೀಜಿಗಳ ಮೂಲಕ ಸೇವೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದ ಅವರು, ನಮ್ಮ ಪೂರ್ವಜರು ಸೇರಿ ಪ್ರಾರಂಭಿಸಿದ ಶ್ರೀಕ್ಷೇತ್ರದ ಎಲ್ಲ ದೇವಸ್ಥಾನಗಳ ಪುನರ್‌ ನಿರ್ಮಾಣ ಕಾರ್ಯವನ್ನು ಶ್ರೀಮಠವೂ ಮಾಡುತ್ತಿದೆ. ಇಂದು ಪ್ರಾತಃಕಾಲದಲ್ಲಿ ವಿಶ್ವನಾಥ ಮತ್ತು ರಂಗನಾಥಸ್ವಾಮಿ ಮತ್ತು ಪರಿವಾರ ದೇವಾಲಯಗಳ ಜೀರ್ಣೋದ್ಧಾರ ಕಾರ್ಯ ನಡೆಸಲಾಗಿದೆ. ಕುಂದೂರು ಸುತ್ತಮುತ್ತಲ ಜನ ಶ್ರದ್ಧೆ, ಭಕ್ತಿಯಿಂದ ನಡೆದುಕೊಳ್ಳುತ್ತಿರುವುದರಿಂದ ಕ್ಷೇತ್ರದ ಅಧಿದೇವತೆಗಳು ನಿಮ್ಮನ್ನು ಕಾಯುವ ಕೆಲಸ ಮಾಡುತ್ತಾರೆ ಎಂದರು.

ದೇವಾಲಯಗಳ ಲೋಕಾರ್ಪಣೆ ಕಾರ್ಯದ ಹಿನ್ನೆಲೆಯಲ್ಲಿ ಬೆಳಗ್ಗೆ ಮಠದ ಆವರಣದಲ್ಲಿ ಪ್ರತಿಷ್ಠಾ ಹೋಮ ನಡೆಸಲಾಯಿತು, ನಿರ್ಮಲನಂದನಾಥ ಶ್ರೀಗಳು ಪೂರ್ಣಾಹುತಿ ಸಲ್ಲಿಕೆ ಮಾಡಿ ಮೊದಲಿಗೆ ವಿಶ್ವನಾಥ ಸ್ವಾಮಿ ದೇವಾಲಯದಲ್ಲಿ ಗಣಪತಿಗೆ ಅಭಿಷೇಕ ನೆರವೇರಿಸಿ, ತರುವಾಯ ಪಾರ್ವತಿ ದೇವಿ, ಈಶ್ವರನಿಗೆ ಅಭಿಷೇಕ ಸಲ್ಲಿಕೆ ಮಾಡಿದರು. ಮುಂಭಾಗದಲ್ಲಿ ಪ್ರತಿಷ್ಠಾಪಿಸಲಾಗಿರುವ ನಂದಿಗೆ ಅಭಿಷೇಕದೊಂದಿಗೆ ಪೂಜೆ ಸಲ್ಲಿಕೆ ಮಾಡಿದರು. ಇದರೊಂದಿಗೆ ಪಕ್ಕದ ಶ್ರೀ ರಂಗನಾಥಸ್ವಾಮಿಯ ದೇವಾಲಯದಲ್ಲಿ ರಂಗನಾಥ, ಮಹಾಲಕ್ಷ್ಮಿ ಮತ್ತು ಸತ್ಯನಾರಾಯಣಸ್ವಾಮಿಗೆ ಅಭಿಷೇಕ ನೆರವೇರಿಸಿ, ಪೂಜೆ ಸಲ್ಲಿಸಿದರು. ಮುಖ್ಯದ್ವಾರ ಸೇರಿದಂತೆ ಎಲ್ಲ ದೇವಾಲಯಗಳಿಗೆ ಕುಂಭಾಭಿಷೇಕ, ಕಳಶಾಭಿಷೇಕ ನೆರವೇರಿಸಿ ಮಠದ ಮುಂಭಾಗದಲ್ಲಿ ನಿರ್ಮಿಸಲಾಗಿದ್ದ ಧ್ವಜ ಸ್ಥಂಭದಲ್ಲಿ ಧರ್ಮಧ್ವಜ ಸ್ಥಾಪನೆ ಮಾಡಿದರು.

ದೇವಾಲಯಗಳ ಲೋಕಾರ್ಪಣೆ ಕಾರ್ಯದ ಪೂಜಾ ವಿಧಿವಿಧಾನಗಳನ್ನು ಮೈಸೂರಿನಿಂದ ಆಗಮಿಸಿದ ೨೦ ಮಂದಿಯ ಪುರೋಹಿತರ ತಂಡ ನೆರವೇರಿಸಿಕೊಟ್ಟರು.

ಶ್ರೀಮಠದ ಕಾರ್ಯದರ್ಶಿ ಶ್ರೀ ಶಂಭುನಾಥ ಸ್ವಾಮೀಜಿ, ಆದಿಹಳ್ಳಿ, ಕಬ್ಬಳಿ ಕ್ಷೇತ್ರದ ಶ್ರಿ ಶಿವಪುತ್ರನಾಥ ಸ್ವಾಮೀಜಿ, ವಿಧಾನಪರಿಷತ್‌ ಸದಸ್ಯ ಡಾ.ಸೂರಜ್‌ ರೇವಣ್ಣ, ಸಾಯಿಮಂದಿರದ ಗುರುಮೂರ್ತಿ ಗುರೂಜಿ, ಗ್ರಾ.ಪಂ.ಅಧ್ಯಕ್ಷ ಡಿ.ಎಲ್.ಮಧು, ಮುಖಂಡರಾದ ಮೂಡನಹಳ್ಳಿ ಚಂದ್ರಣ್ಣ, ರಾಜಣ್ಣ, ಕೇಶವೇಗೌಡ, ಕೃಷ್ಣೇಗೌಡ ಸೇರಿ ಗ್ರಾಮಸ್ಥರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ