ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭೂರಿ ಭೋಜನ

KannadaprabhaNewsNetwork | Published : Dec 7, 2024 12:32 AM

ಸಾರಾಂಶ

ಬೆಳಗಿನ ಉಪಹಾರ, ಮಧ್ಯಾಹ್ನದ ಊಟ, ಸಂಜೆಯ ಸ್ನ್ಯಾಕ್ಸ್, ರಾತ್ರಿ ಊಟದ ವ್ಯವಸ್ಥೆ ಮಾಡಲಾಗಿದೆ. 350 ಜನ ಬಾಣಸಿಗರು 900 ಜನ ಬಡಿಸುವವರು ಮತ್ತು ಅಡಿಗೆ ಸ್ವಚ್ಚತೆಗೆ ಸಂಬಂಧಿಸಿದಂತಹ ಕಾರ್ಮಿಕರು ಮೂರು ದಿನಗಳ ನಿರಂತರ ಕೆಲಸವನ್ನು ಮಾಡಲಿದ್ದಾರೆ ಹಾಗೂ ರುಚಿ ಶುಚಿಯಾದಂತಹ ಉಟವನ್ನು ಸಿದ್ದಪಡಿಸಲು ಸೂಚನೆ ನೀಡಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಡಿಸೆಂಬರ್ 20, 21, 22ರಂದು ಮೂರು ದಿನಗಳ ಕಾಲ ಮಂಡ್ಯದಲ್ಲಿ ಜರುಗಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡದ ಕಂಪಿನೊಂದಿಗೆ ನಾಲಿಗೆಗೂ ರುಚಿ ರುಚಿಯಾದ ಭೂರಿ ಭೋಜನದ ವ್ಯವಸ್ಥೆ ಮಾಡಲಾಗುತ್ತಿದೆ. ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಶೈಲಿಯಲ್ಲಿ ಬಗೆಗಿನ ತಿಂಡಿ, ತಿನಿಸಿನಿಂದ ಕೂಡಿದ ಊಟದ ವ್ಯವಸ್ಥೆಗೆ ಸಿದ್ಧತೆ ಕಾರ್ಯಗಳು ಭರದಿಂದ ಸಾಗುತ್ತಿವೆ.

ಸಮ್ಮೇಳನಕ್ಕೆ ಆಗಮಿಸುವ ಗಣ್ಯವ್ಯಕ್ತಿಗಳು, ನೋಂದಾಯಿತ ಪ್ರತಿನಿಧಿಗಳು, ಸಾರ್ವಜನಿಕರು, ಸ್ವಯಂ ಸೇವಕರು, ಮಾಧ್ಯಮ ಪ್ರತಿನಿಧಿಗಳು, ಪೊಲೀಸ್ ಸಿಬ್ಬಂದಿ ಸೇರಿದಂತೆ ಅಂದಾಜು ಮೂರು ಲಕ್ಷಕ್ಕೂ ಅಧಿಕ ಜನರಿಗೆ ಊಟದ ವ್ಯವಸ್ಥೆ ಮಾಡಲಾಗುತ್ತಿದ್ದು ಇದಕ್ಕಾಗಿ ನಾಲ್ಕು ಪ್ರತ್ಯೇಕ ಸ್ಥಳಗಳಲ್ಲಿ ಅಂದಾಜು 300 ಕೌಂಟರ್ ಗಳ ವ್ಯವಸ್ಥೆ ಮಾಡಲಾಗುತ್ತಿದೆ.

ಬೆಳಗಿನ ಉಪಹಾರ, ಮಧ್ಯಾಹ್ನದ ಊಟ, ಸಂಜೆಯ ಸ್ನ್ಯಾಕ್ಸ್, ರಾತ್ರಿ ಊಟದ ವ್ಯವಸ್ಥೆ ಮಾಡಲಾಗಿದೆ. 350 ಜನ ಬಾಣಸಿಗರು 900 ಜನ ಬಡಿಸುವವರು ಮತ್ತು ಅಡಿಗೆ ಸ್ವಚ್ಚತೆಗೆ ಸಂಬಂಧಿಸಿದಂತಹ ಕಾರ್ಮಿಕರು ಮೂರು ದಿನಗಳ ನಿರಂತರ ಕೆಲಸವನ್ನು ಮಾಡಲಿದ್ದಾರೆ ಹಾಗೂ ರುಚಿ ಶುಚಿಯಾದಂತಹ ಉಟವನ್ನು ಸಿದ್ದಪಡಿಸಲು ಸೂಚನೆ ನೀಡಲಾಗಿದೆ.

ಕೌಂಟರ್ ಗಳ ನಿರ್ವಹಣೆ, ಉಸ್ತುವಾರಿ ಸಂಬಂಧ ಪ್ರತಿ ಕೌಂಟರ್ ಗೆ ಒಬ್ಬರು ಎಸ್ ಡಿ ಎ ದರ್ಜೆ ಸಿಬ್ಬಂದಿ, ಪ್ರತಿ 5 ಕೌಂಟರ್ ಗೆ ಸಿ ಗ್ರೂಪ್ ನ ಅಧಿಕಾರಿಯಂತೆ 60 ಜನ ಪಿಡಿಒಗಳು ಹಾಗೂ ಪ್ರತಿ 50 ಕೌಂಟರ್ ಗೆ ಎಡಿ ಮಿಡ್ಡೆ ಮಿಲ್ಸ್ ಅಧಿಕಾರಿಗಳು, ಪ್ರತಿ 100 ಕೌಂಟರ್ ಗೆ 3 ಜನ ಜಿಲ್ಲಾ ಮಟ್ಟದ ಅಧಿಕಾರಿಯಂತೆ ನೇಮಿಸಲಾಗಿದೆ. ಇವರ ಜೊತೆಗೆ ಪ್ರತಿ ಕೌಂಟರ್ ಗೆ ಒಬ್ಬರಂತೆ ಸ್ವಯಂ ಸೇವಕರನ್ನು ಬಳಕೆ ಮಾಡಿಕೊಳ್ಳಲು ಉದ್ದೇಶಿಸಲಾಗಿದ್ದು, ಅಂದಾಜು 400 ಜನ ಸ್ವಯಂ ಸೇವಕರನ್ನು ವಿವಿಧ ಅಡುಗೆ ಸಿದ್ದತಾ ವಿಭಾಗಗಳಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಮೂರು ಆಹಾರ ಉಪ ಸಮಿತಿಗಳನ್ನು ನೇಮಿಸಲಾಗಿದ್ದು ಈ ಸಮಿತಿ ಆಹಾರ ವ್ಯವಸ್ಥೆಯ ನಿಗಾ ವಹಿಸಲಿದೆ.

ಸಮ್ಮೇಳನಕ್ಕೆ ಆಗಮಿಸುವ ಗಣ್ಯರು, ಪ್ರತಿನಿಧಿಗಳು, ಜನಸಾಮಾನ್ಯರಿಗೆಲ್ಲಾ ಒಂದೇ ರೀತಿಯ ಊಟದ ವ್ಯವಸ್ಥೆ ಮಾಡಲಾಗಿದೆ. ಜನದಟ್ಟಣೆ ತಪ್ಪಿಸಲು ಗಣ್ಯರು, ಅತಿ ಗಣ್ಯರು ಮತ್ತು ಸಮಿತಿಯ ಸದಸ್ಯರು, ಮಾಧ್ಯಮದವರು, ಪೊಲೀಸರು ಮತ್ತು ಸಾರ್ವಜನಿಕರಿಗೆ ಪ್ರತ್ಯೇಕ ಕೌಂಟರ್ ವ್ಯವಸ್ಥೆ ಮಾಡಲಾಗಿದೆ. ಮಹಿಳೆಯರು, ವಿಶೇಷಚೇತನರು, ವೃದ್ಧರಿಗೆ ಅಗತ್ಯತೆಗೆ ತಕ್ಕಂತೆ ಪ್ರತ್ಯೇಕ ಕೌಂಟರ್ ವ್ಯವಸ್ಥೆ ಮಾಡಲಾಗಿದೆ.

ಆಹಾರ ಗುಣಮಟ್ಟ ಪರೀಕ್ಷೆ:

ಸಮ್ಮೇಳನದಲ್ಲಿ ರುಚಿ, ಶುಚಿಯಾದ ಊಟದ ವ್ಯವಸ್ಥೆ ಸವಾಲಿನ ಕೆಲಸವಾಗಿದ್ದರೂ ಇದರಲ್ಲಿ ಯಾವುದೇ ರಾಜೀ ಇಲ್ಲದೇ ಉತ್ತಮ ದರ್ಜೆಯ ಗುಣಮಟ್ಟದ ಪಧಾರ್ಥಗಳನ್ನು ಅಡುಗೆ ಸಿದ್ದಪಡಿಸಲು ಏಜೆನ್ಸಿಗೆ ಮಾನದಂಡಗಳ ಕರಾರನ್ನು ನೀಡಲಾಗಿದೆ. ಅದರಂತೆ ಎಜೆನ್ಸಿಯು ಗುಣಮಟ್ಟದ ಆಹಾರ ಪಧಾರ್ಥಗಳನ್ನೇ ಬಳಸುತ್ತಾರೆ. ಗುಣಮಟ್ಟವನ್ನು ಪರಿಕ್ಷೀಸಲು ಆಹಾರ ಸುರಕ್ಷತ ಅಧಿಕಾರಿಗಳು ಮತ್ತು ಆಹಾರ ಇಲಾಖೆಯ ಅಧಿಕಾರಿಗಳು ಮೂರು ದಿನ ನಿರಂತರ ತಪಾಸಣೆ ಮತ್ತು ಪರೀಕ್ಷೆ ಮಾಡಿದ ನಂತರವೇ ಆಹಾರವನ್ನು ಊಣಬಡಿಸಲು ಕ್ರಮವಹಿಸಲಾಗುವುದು.

ಪ್ಲಾಸ್ಟಿಕ್ ಮುಕ್ತ:

ಪ್ಲಾಸ್ಟಿಕ್ ಮುಕ್ತ ಸಾಹಿತ್ಯ ಸಮ್ಮೇಳನ ನಡೆಸಲು ತೀರ್ಮಾನ ಮಾಡಲಾಗಿರುವುದರಿಂದ ಅರ್ಧ ಲೀಟರ್ ನ ಪ್ಲಾಸ್ಟಿಕ್ ಬಾಟಲ್ ಗಳನ್ನ ಬಳಸಲಾಗುತ್ತಿಲ್ಲ. ನೀರನ್ನು ಪ್ರತಿ ನಿತ್ಯ ತಜ್ಙರು ಪರೀಕ್ಷೆಗೆ ಒಳಪಡಿಸಿದ ನೀರನ್ನ ಪ್ರತಿ 5 ಕೌಂಟರ್ ಗೆ 5 ಪ್ರತ್ಯೇಕ 20 ಲೀಟರ್ ಬಾಟಲ್ ಗಳಲ್ಲಿ ತುಂಬಿಸಿ ಪೇಪರ್ ಗ್ಲಾಸ್ ಗಳನ್ನು ಬಳಕೆ ಮಾಡಲಾಗುತ್ತಿದೆ. ಪ್ರತ್ಯೇಕ ಕುಡಿಯುವ ನೀರಿನ ಸಮಿತಿ ಈ ಕೆಲಸವನ್ನು ನಿರ್ವಹಿಸಲಾಗುತ್ತಿದೆ.

ಲಕ್ಷಾಂತರ ಸಂಖ್ಯೆಯಲ್ಲಿ ಜನರಿಗೆ ಊಟದ ವ್ಯವಸ್ಥೆ ಮಾಡುವುದರ ಜೊತೆಗೆ ತ್ಯಾಜ್ಯ ವಿಲೇವಾರಿಗೂ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ತ್ಯಾಜ್ಯ ವಿಲೇವಾರಿ ಸಂಬಂಧ ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳ ತ್ಯಾಜ್ಯ ವಿಲೇವಾರಿ ವಾಹನಗಳು ಮತ್ತು ಸಿಬ್ಬಂದಿಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಸಮ್ಮೇಳನದಲ್ಲಿ ಊಟದ ಮೆನು: ಏನೇನಿದೆ...?

ಸಾಹಿತ್ಯ ಸಮ್ಮೇಳನದಲ್ಲಿ ಚರ್ಚೆ, ಗೋಷ್ಠಿ ಭರಾಟೆಗಳ ಜೊತೆಗೆ ಊಟದ ಭರಾಟೆ ಕೂಡ ಜೋರಾಗಿದೆ. ಬಾಯಿ ಚಪ್ಪರಿಸುವಂತಹ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಶುಚಿ, ರುಚಿಯಿಂದ ಕೂಡಿದ ಬಗೆಬಗೆಯ ಭೋಜನವನ್ನು ಸಾಹಿತ್ಯ ಪ್ರೇಮಿಗಳಿಗೆ ಉಣಬಡಿಸಲು ಭರ್ಜರಿ ಊಟದ ಮೆನು ಸಿದ್ಧಪಡಿಸಲಾಗಿದೆ.

ಡಿ.20: ಬೆಳಗಿನ ತಿಂಡಿಗೆ ತಟ್ಟೆ ಇಡ್ಲಿ, ವಡೆ, ಚಟ್ನಿ, ಸಾಂಬರ್, ಉಪ್ಮ, ಮೈಸೂರು ಪಾಕ್ ಮಧ್ಯಾಹ್ನದ ಊಟಕ್ಕೆ ಖಾಯಿ ಹೋಳಿಗೆ, ತುಪ್ಪ, ಜೋಳದ ರೊಟ್ಟಿ, ಬದನೆಯಕಾಯಿ ಎಣ್ಣೆಗಾಯಿ, ಚಟ್ನಿ ಪುಡಿ, ಮೆಂತ್ಯ ಬಾತ್, ಅನ್ನ, ಮೊಳಕೆ ಕಾಳು ಸಾಂಬಾರ್, ಮೊಸರು, ಬಾಳೆಹಣ್ಣು, ಉಪ್ಪು, ಕೋಸಂಬರಿ, ಉಪ್ಪಿನಕಾಯಿ, ಹಪ್ಪಳ, ಸಲಾಡ್ ಇರಲಿದೆ. ರಾತ್ರಿ ಊಟಕ್ಕೆ ಪೂರಿ ಸಾಗು, ಮೈಸೂರು ಪಾಕ್, ಅವರೆಕಾಳು ಬಾತು, ರಾಯಿತ, ಮೊಸರು, ಬಾಳೆಹಣ್ಣು, ಉಪ್ಪು, ಕೋಸಂಬರಿ, ಉಪ್ಪಿನಕಾಯಿ, ಹಪ್ಪಳ, ಪಲ್ಯ, ಸಲಾಡ್ ಒಳಗೊಂಡಿರಲಿದೆ.

ಡಿ.21: ಬೆಳಗಿನ ತಿಂಡಿಗೆ ರಾಗಿ ದೋಸೆ, ಸಿಹಿ ಪೊಂಗಲ್, ಖಾರ್ ಪೊಂಗಲ್ ಇರಲಿದೆ. ಮಧ್ಯಾಹ್ನದ ಊಟಕ್ಕೆ ಅಕ್ಕಿ ರೊಟ್ಟಿ, ಮಿಶ್ರ ತರಕಾರಿ ಪಲ್ಯ, ವೆಜ್ ಪಲಾವ್ ರಾಯಿತ, ಅನ್ನ, ಚಿತ್ತಕದ ಬೇಳೆ ಸಾಂಬಾರ್, ಲಾಡು, ಉಪ್ಪು, ಕೋಸಂಬರಿ, ಉಪ್ಪಿನಕಾಯಿ, ಹಪ್ಪಳ, ಸಲಾಡ್ ಇರಲಿದೆ. ರಾತ್ರಿ ಊಟಕ್ಕೆ ಚಪಾತಿ, ಸಾಗು, ಗೀರೈಸ್, ಕುರ್ಮ, ಡ್ರೈ ಜಾಮೂನು, ಅನ್ನ, ತರಕಾರಿ ಸಾಂಬಾರ್, ಉಪ್ಪು, ಮೊಸರು, ಬಾಳೆಹಣ್ಣು, ಕೋಸಂಬರಿ, ಉಪ್ಪಿನಕಾಯಿ, ಹಪ್ಪಳ, ಸಲಾಡ್ ಇರಲಿದೆ.

ಡಿ.22: ಬೆಳಗಿನ ತಿಂಡಿಗೆ ದೋಸೆ ಚಟ್ನಿ, ಟಮೋಟ ಬಾತ್, ಕ್ಯಾರೆಟ್ ಹಲ್ವ ಇರಲಿದೆ. ಮಧ್ಯಾಹ್ನದ ಊಟಕ್ಕೆ ಬಿಳಿ ಹೊಳಿಗೆ, ಸಾಗೂ, ಜೀರಾ ರೈಸ್ ಪಪ್ಪು, ಬಾದೂಷ, ಮುದ್ದೆ, ಅನ್ನ, ಸೊಪ್ಪಿನ ಸಾಂಬರ್, ಮೊಸರು, ಬಾಳೆಹಣ್ಣು, ಉಪ್ಪು, ಕೋಸಂಬರಿ, ಉಪ್ಪಿನಕಾಯಿ, ಹಪ್ಪಳ, ಸಲಾಡ್ ಇರಲಿದೆ. ರಾತ್ರಿ ಊಟಕ್ಕೆ ಮೆಂತ್ಯ ಬಾತ್, ರಾಯಿತ, ಕೊಬ್ಬರಿ, ಮಿಠಾಯಿ, ಅನ್ನ, ರಸಂ, ಮೊಸರು, ಬಾಳೆಹಣ್ಣು, ಉಪ್ಪು, ಕೋಸಂಬರಿ, ಪಲ್ಯ, ಉಪ್ಪಿನಕಾಯಿ, ಹಪ್ಪಳ ಸಲಾಡ್ ಒಳಗೊಂಡಿರಲಿದೆ.

‘ಸಾಹಿತ್ಯ ಸಮ್ಮೇಳನದಲ್ಲಿ ಚರ್ಚೆ, ಗೋಷ್ಠಿಗಳು ಕಲಾವಿದರಿಗೆ ಎಷ್ಟು ಪ್ರಾಮುಖ್ಯತೆ ನೀಡಲಾಗುತ್ತದೋ ಊಟಕ್ಕೂ ಅಷ್ಟೇ ಪ್ರಾಮುಖ್ಯತೆ ನೀಡಲಾಗಿದೆ. ಗೋಷ್ಠಿಗಳಲ್ಲಿ ಕನ್ನಡದ ಘಮಲಿದ್ದರೆ ಊಟದಲ್ಲಿ ಉತ್ತರ ಕರ್ನಾಟಕ ಶೈಲಿಯ ಭೋಜನದ ಘಮಲಿರಲಿದೆ. ಬಗೆಬಗೆಯ ರುಚಿಯಾದ ಶುಚಿಯಿಂದ ಕೂಡಿದ ಊಟದ ವ್ಯವಸ್ಥೆ ಮಾಡಲಾಗಿದೆ. ಊಟದ ವಿಚಾರದಲ್ಲಿ ಯಾವುದೇ ರಾಜೀ ಇಲ್ಲ. ಬಂದವರೆಲ್ಲರಿಗೂ ಊಟೋಪಚಾರದ ಆತಿಥ್ಯ ನೀಡಲಾಗುತ್ತದೆ.’

-ರಮೇಶ್ ಬಾಬು ಬಂಡೀಸಿದ್ದೇಗೌಡ, ಶಾಸಕರು ಹಾಗೂ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಹಾರ ಸಮಿತಿ ಅಧ್ಯಕ್ಷರು

Share this article