ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
೬ ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯವಿರುವ ಬ್ಯಾರೇಜ್‌ನಲ್ಲಿ ಸದ್ಯ ೩.೨೩ ಟಿಎಂಸಿಯಷ್ಟು ನೀರಿನ ಸಂಗ್ರಹವಿದ್ದು, ೫೨೪ ಮೀಟರ್ ನೀರಿನ ಮಟ್ಟವಿದೆ. ಒಳಹರಿವಿನ ಪ್ರಮಾಣ ಹೆಚ್ಚಾಗಲಿರುವ ಕಾರಣ ೨೨ ಗೇಟ್‌ಗಳನ್ನು ಹೊಂದಿರುವ ಬ್ಯಾರೇಜ್‌ನಿಂದ ೧೦ ಗೇಟ್‌ಗಳ ಮೂಲಕ ನೀರು ಹೊರಕ್ಕೆ ಬಿಡಲಾಗುತ್ತಿದೆ.
ಕಳೆದೊಂದು ದಶಕದಲ್ಲಿಯೇ ಮೇ ಕೊನೆಯ ವಾರದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಮಹಾರಾಷ್ಟ್ರದಿಂದ ನೀರು ಹರಿದು ಬಂದಿರುವುದು ದಾಖಲೆಯಾಗಿದೆ. ಸಾಮಾನ್ಯವಾಗಿ ಜೂನ್ ಕೊನೆಯ ವಾರದಲ್ಲಿ ಈ ಪ್ರಮಾಣದ ನೀರು ಹರಿದು ಬರುತ್ತಿತ್ತು. ಆದರೀಗ ಮುಂಗಾರು ತಿಂಗಳು ಮುಂಚೆಯೇ ಹರಿದು ಬರುವ ನೀರಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಬೆಳೆ ನಿರೀಕ್ಷೆಯಲ್ಲಿದ್ದ ನದಿ ತಟದಲ್ಲಿನ ರೈತರ ಬೆಳೆ ನೀರಿನಲ್ಲಿ ಮುಳುಗಿ ಹೋಗಿ ಅಪಾರ ಪ್ರಮಾಣದ ಹಾನಿಯಾಗಿದೆ.