ಅನ್ಯಗ್ರಾಮದ ಕಾರ್ಯಕರ್ತೆ ನೇಮಕ, ನಂದಿಪುರ ಗ್ರಾಮಸ್ಥರಿಂದ ಬಹಿಷ್ಕಾರ

KannadaprabhaNewsNetwork |  
Published : Oct 04, 2025, 12:00 AM IST
ಮುಂಡಗೋಡ: ಸ್ಥಳಿರಲ್ಲದವರನ್ನು ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ನೇಮಕ ಮಾಡಿದ ಕಾರಣಕ್ಕೆ ಆಕ್ರೋಶಗೊಂಡ ತಾಲೂಕಿನ ನಂದಿಪುರ ಗ್ರಾಮಸ್ಥರು ತಮ್ಮ ಮಕ್ಕಳನ್ನು ಅಂಗನವಾಡಿಗೆ ಕಳಿಸದೇ ಬಹಿಷ್ಕಾರವನ್ನು ಮುಂದುವರೆಸಿದ್ದಾರೆ. | Kannada Prabha

ಸಾರಾಂಶ

ಸ್ಥಳೀರಲ್ಲದವರನ್ನು ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ನೇಮಕ ಮಾಡಿದ ಕಾರಣಕ್ಕೆ ಆಕ್ರೋಶಗೊಂಡ ಮುಂಡಗೋಡ ತಾಲೂಕಿನ ನಂದಿಪುರ ಗ್ರಾಮಸ್ಥರು ತಮ್ಮ ಮಕ್ಕಳನ್ನು ಅಂಗನವಾಡಿಗೆ ಕಳುಹಿಸದೇ ಬಹಿಷ್ಕಾರ ಮುಂದುವರಿಸಿದ್ದಾರೆ.

ಸಂತೋಷ ದೈವಜ್ಞ

ಮುಂಡಗೋಡ: ಸ್ಥಳೀರಲ್ಲದವರನ್ನು ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ನೇಮಕ ಮಾಡಿದ ಕಾರಣಕ್ಕೆ ಆಕ್ರೋಶಗೊಂಡ ತಾಲೂಕಿನ ನಂದಿಪುರ ಗ್ರಾಮಸ್ಥರು ತಮ್ಮ ಮಕ್ಕಳನ್ನು ಅಂಗನವಾಡಿಗೆ ಕಳುಹಿಸದೇ ಬಹಿಷ್ಕಾರ ಮುಂದುವರಿಸಿದ್ದಾರೆ.

ಹೀಗಾಗಿ ಸುಮಾರು ೮ ದಿನಗಳಿಂದ ನಂದಿಪುರ ಗ್ರಾಮದ ಅಂಗನವಾಡಿ ಕೇಂದ್ರ ಮಕ್ಕಳಿಲ್ಲದೇ ಬಿಕೋ ಎನ್ನುತ್ತಿರುವುದು ಒಂದು ಕಡೆಯಾದರೆ, ಇಲಾಖೆ ಹಾಗೂ ಪಾಲಕರ ಜಿದ್ದಿಗೆ ಮಕ್ಕಳು ಶಿಕ್ಷಣ ವಂಚಿತರಾಗುತ್ತಿದ್ದಾರೆ.

ನಂದಿಪುರದ ಅಂಗನವಾಡಿಯಲ್ಲಿ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಕಾರ್ಯಕರ್ತೆ ನಿವೃತ್ತಿ ಹೊಂದಿದ್ದು, ಖಾಲಿಯಾದ ಹುದ್ದೆಗೆ ಬೇರೆಯವರನ್ನು ನೇಮಿಸಲಾಗಿದೆ. ಗ್ರಾಮದಿಂದ ಸುಮಾರು ಆರು ಕಿಲೋಮೀಟರ್‌ ದೂರವಿರುವ ಮಹಿಳೆಯೊಬ್ಬರಿಗೆ ಅಂಗನವಾಡಿ ಕಾರ್ಯಕರ್ತೆಯ ಹುದ್ದೆ ನೀಡಲಾಗಿದೆ. ಗ್ರಾಮದಲ್ಲಿಯೇ ಸಾಕಷ್ಟು ಅರ್ಹ ಅಭ್ಯರ್ಥಿಗಳಿದ್ದರೂ ಸ್ಥಳೀಯರಿಗೆ ಹುದ್ದೆ ನೀಡದೆ ಬೇರೆ ಗ್ರಾಮದ ಮಹಿಳೆಯನ್ನು ನೇಮಕ ಮಾಡಲಾಗಿದೆ ಎಂದು ಆಕ್ರೋಶಗೊಂಡ ಗ್ರಾಮಸ್ಥರು, ಅಂಗನವಾಡಿಗೆ ತಮ್ಮ ಮಕ್ಕಳನ್ನು ಕಳುಹಿಸುತ್ತಿಲ್ಲ.

ಸುಮಾರು ೨೫ ಮಕ್ಕಳು ಅಂಗನವಾಡಿ ಕೇಂದ್ರದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಆದರೆ ಈಗ ಒಬ್ಬರೂ ಅಂಗನವಾಡಿಗೆ ಬರುತ್ತಿಲ್ಲ. ಒಂದು ವಾರದಿಂದ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಮನೆ ಮನೆಗೆ ತೆರಳಿ ಮಕ್ಕಳನ್ನು ಅಂಗನವಾಡಿಗೆ ಕಳುಹಿಸುವಂತೆ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದು, ಪ್ರಯೋಜನವಾಗುತ್ತಿಲ್ಲ.

ಇದೆಲ್ಲ ಬೆಳವಣಿಗೆಯ ನಡುವೆ ಇನ್ನೊಂದು ಹೆಜ್ಜೆ ಮುಂದೆ ಹೋಗಿರುವ ಗ್ರಾಮಸ್ಥರು, ತಾವೇ ಹಣ ಕೂಡಿಸಿ ಗ್ರಾಮದಲ್ಲಿಯೇ ಒಬ್ಬ ಶಿಕ್ಷಕರನ್ನು ನೇಮಿಸಿ, ಮಕ್ಕಳಿಗೆ ಅಂಗನವಾಡಿ ತೆರೆಯುವ ಚಿಂತನೆ ನಡೆಸಿದ್ದಾರೆ. ಇದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಈಗಾಗಲೇ ಇಲಾಖೆ ಅಧಿಕಾರಿಗಳು ಒಂದು ಬಾರಿ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಗ್ರಾಮಸ್ಥರ ಮನವೋಲಿಸಿ ಮಕ್ಕಳನ್ನು ಅಂಗನವಾಡಿಗೆ ಕಳುಹಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಆದರೆ ಅದಕ್ಕೆ ಜಗ್ಗದ ಗ್ರಾಮಸ್ಥರು, ಗ್ರಾಮದವರನ್ನೇ ನೇಮಕ ಮಾಡುವಂತೆ ಪಟ್ಟು ಹಿಡಿದು ಪ್ರತಿಭಟನೆ ಮುಂದುವರಿಸಿದ್ದಾರೆ.

ತಕ್ಷಣ ಇಲಾಖೆಯ ಮೇಲಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ, ಸಮಸ್ಯೆ ಪರಿಹರಿಸಿ, ಮಕ್ಕಳ ಹಿತದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಪ್ರಜ್ಞಾವಂತ ನಾಗರಿಕರ ಆಗ್ರಹವಾಗಿದೆ.

ಏನೂ ಮಾಡಲು ಸಾಧ್ಯವಿಲ್ಲ: ಸರ್ಕಾರದ ಆದೇಶದಂತೆ ೩ ಕಿಮೀ ವ್ಯಾಪ್ತಿಯೊಳಗಿನ ಸಹಾಯಕಿಯರಿಗೆ ಪದೋನ್ನತಿ ನೀಡಿ ನಂದಿಪುರಕ್ಕೆ ನೇಮಕ ಮಾಡಲಾಗಿದೆ. ಇದರಲ್ಲಿ ಯಾವುದೋ ಲೋಪದೋಷ ನಡೆದಿಲ್ಲ. ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಪಾಲಕರ ಮನವೊಲಿಸುವ ಪ್ರಯತ್ನ ನಡೆಸಲಾಗಿದೆ. ಇದನ್ನು ಬಿಟ್ಟು ಬೇರೆ ಏನು ಮಾಡಲು ಸಾಧ್ಯವಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ರೂಪಾ ಅಂಗಡಿ ಹೇಳಿದರು. ಶಾಲೆ ತೆರೆಯುತ್ತೇವೆ: ಅಂಗನವಾಡಿ ಕಾರ್ಯಕರ್ತೆ ನೇಮಕ ಮಾಡುವಲ್ಲಿ ಲೋಪವಾಗಿದೆ. ತಕ್ಷಣ ಜಿಲ್ಲಾಧಿಕಾರಿ ಮಧ್ಯಪ್ರವೇಶಿಸಿ ಸ್ಥಳೀಯರಿಗೆ ಆದ್ಯತೆ ನೀಡಬೇಕು. ಮತ್ತೊಮ್ಮೆ ಅರ್ಜಿ ಆಹ್ವಾನಿಸಿ, ಮರುನೇಮಕ ಮಾಡಬೇಕು. ಇಲ್ಲದಿದ್ದರೆ ಗ್ರಾಮಸ್ಥರೆಲ್ಲ ಸೇರಿ ಮಕ್ಕಳಿಗಾಗಿ ಬೇರೆ ಶಾಲೆ ತೆರೆಯುತ್ತೇವೆ ಎಂದು ಗ್ರಾಮಸ್ಥ ನಾಗರಾಜ ವಡ್ಡರ ಹೇಳಿದರು.

PREV

Recommended Stories

ಬೆಡ್‌ರೂಮಲ್ಲಿ ರಹಸ್ಯ ಕ್ಯಾಮೆರಾ: ಲೈಂಗಿಕಕ್ರಿಯೆ ಚಿತ್ರೀಕರಿಸಿ ದೌರ್ಜನ್ಯ
ಕಾವೇರಿ ಆರತಿ ನಿಲ್ಲಿಸಲ್ಲ: ಡಿಸಿಎಂ