ಹೊಸಕೋಟೆ: ರಾಜ್ಯದಲ್ಲಿ ಇಂಧನ ಇಲಾಖೆಯಲ್ಲಿ ಈಗಾಗಲೇ 3000 ಲೈನ್‌ಮ್ಯಾನ್‌ಗಳ ಹುದ್ದೆಯನ್ನು ನೇಮಕಾತಿ ಮಾಡಲಾಗಿದ್ದು ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಇನ್ನೂ ೩೦೦೦ ಲೈನ್‌ಮ್ಯಾನ್‌ಗಳ ನೇಮಕಾತಿಯನ್ನು ಶೀಘ್ರವೇ ಮಾಡಲಾಗುವುದು ಎಂದು ಇಂಧನ ಸಚಿವ ಕೆಜೆ ಜಾರ್ಜ್ ತಿಳಿಸಿದರು.
ತಾಲೂಕಿನ ಯಲಚಹಳ್ಳಿ ಗ್ರಾಮದಲ್ಲಿ ಪಿಎಂ ಕುಸುಮ್ ಸಿ ಯೋಜನೆಯಡಿ ನಿರ್ಮಿಸಿರುವ ಸೌರಶಕ್ತಿ ಘಟಕಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಾವಗಡದಲ್ಲಿ 10 ಸಾವಿರ ಎಕರೆಯಲ್ಲಿ ೨ ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಸೋಲಾರ್ ಪಾರ್ಕ್ ನಿರ್ಮಿಸಿದ್ದು, ಏಷ್ಯದಲ್ಲಿಯೇ ಅತಿ ದೊಡ್ಡ ಸೋಲಾರ್ ಪಾರ್ಕ್ ಎಂಬ ಹೆಗ್ಗಳಿಕೆ ಪಡೆದಿದೆ. ರಾಜ್ಯದಲ್ಲಿ ಅನಿಯಮಿತ ವಿದ್ಯುತ್ ಸರಬರಾಜು ಮಾಡುವ ಉದ್ದೇಶದಿಂದ 120 ವಿದ್ಯುತ್ ಉಪಕೇಂದ್ರ ನಿರ್ಮಿಸಲು ಸರ್ಕಾರ ಮುಂದಾಗಿದೆ. ಪ್ರಮುಖವಾಗಿ ಹೊಸಕೋಟೆ ಈಗ ಬೆಂಗಳೂರಿಗೆ ಹೆಬ್ಬಾಗಿಲಾಗಿದೆ. ಅದರಂತೆ ನಗರಕ್ಕೆ ಭೂಗತ ಕೇಬಲ್ ಅಳವಡಿಕೆಗೆ ಶಾಸಕ ಶರತ್ ಬಚ್ಚೆಗೌಡರು ಮನವಿ ಮಾಡಿದ ತಕ್ಷಣ 120 ಕೋಟಿ ಅನುದಾನ ಕೊಟ್ಟಿದ್ದೇನೆ ಎಂದರು.ಈ ಘಟಕದಲ್ಲಿ 7.3 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಆಗಲಿದ್ದು, ತಾಲೂಕಿನ ನಂದಗುಡಿ ಹೋಬಳಿಯ ಮುಗಬಾಳ ಗ್ರಾಪಂ ಒಟ್ಟು ೩೩ ಗ್ರಾಮಗಳ ೧,೩೮೩ ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಪೂರೈಕೆಯಾಗಲಿದೆ. ಕೃಷಿ ಪಂಪ್‌ಸೆಟ್‌ಗಳಿಗೆ ಹಗಲಿನ ವೇಳೆಯೇ ಸಮರ್ಪಕ ವಿದ್ಯುತ್ ಪೂರೈಸಲು ನೆರವಾಗುವ ಫೀಡರ್ ಮಟ್ಟದ ಸೌರೀಕರಣ ಯೋಜನೆಯಾದ ಕುಸುಮ್- ಸಿಗೆ ವೇಗ ನೀಡಿ ಶಕ್ತಿ ತುಂಬಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ. ಈ ಯೋಜನೆಯಿಂದ ರೈತರಿಗೆ 7 ಗಂಟೆ ವಿದ್ಯುತ್ ನೀಡಲು ಸಾಧ್ಯವಾಗಲಿದೆ. ಯಲಚಹಳ್ಳಿಯ ಈ ಸೌರ ಘಟಕದಿಂದ ಒಟ್ಟು 4 ಕೃಷಿ ಫೀಡರ್‌ಗಳು ಸೋಲಾರ್ ವಿದ್ಯುತ್ ವಿತರಣೆ ಜಾಲವಾಗಿ ಬದಲಾಗಲಿದೆ, " ಎಂದರು.
ಕುಸುಮ್ ಸಿ ಯೋಜನೆಯಡಿ ಪ್ರತಿ ಎಕರೆ ಭೂಮಿಗೆ 25 ಸಾವಿರ ಖಾಸಗಿ ವಿದ್ಯುತ್ ಉತ್ಪಾದಕರು ಪಾವತಿಸಬೇಕು. ಆ ಮೊತ್ತವನ್ನು ಜಿಲ್ಲಾಧಿಕಾರಿಗಳ ಬಳಿ ಇಟ್ಟು ಉಪ ಕೇಂದ್ರ ಇರುವ ಗ್ರಾಮದ ಸರ್ಕಾರಿ ಶಾಲೆ, ಅಂಗನವಾಡಿಗಳ ಅಭಿವೃದ್ಧಿಗೆ ಬಳಸಿಕೊಳ್ಳಲಾಗುವುದು. ಖಾಸಗಿ ಭೂಮಿಯಾಗಿದ್ದರೆ, ನವೀಕರಿಸಬಹುದಾದ ಇಂಧನ ಸೇವಾ ಕಂಪನಿಯ ಡೆವಲಪರ್‌ಗಳು ಗುತ್ತಿಗೆಗೆ ತೆಗೆದುಕೊಂಡು, ಭೂಮಾಲೀಕರಿಗೆ ಎಕರೆಗೆ ಕನಿಷ್ಠ ೨೫,೦೦೦ ಪರಿಹಾರ ನೀಡುತ್ತಾರೆ ಎಂದು ಹೇಳಿದರು.ತಾಂತ್ರಿಕ ಸಾಧ್ಯತೆ ಇರುವ ವಿದ್ಯುತ್ ಉಪ ಕೇಂದ್ರಗಳ ಬಳಿ ಸೌರ ಘಟಕಗಳ ಸ್ಥಾಪಿಸಲಾಗುತ್ತದೆ. ಖಾಸಗಿಯವರು ಸೌರ ಘಟಕಗಳನ್ನು ಸ್ಥಾಪಿಸಿ, ವಿದ್ಯುತ್ ಉತ್ಪಾದಿಸುತ್ತಾರೆ. ಅದನ್ನು ಸರ್ಕಾರ ಖರೀದಿಸಿ ಆಯಾ ಫೀಡರ್‌ಗಳ ವ್ಯಾಪ್ತಿಯ ಕೃಷಿ ಪಂಪ್‌ಸೆಟ್‌ಗಳಿಗೆ ಪೂರೈಸುತ್ತದೆ. ಹಗಲು ವೇಳೆ ಸೌರ ವಿದ್ಯುತ್ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿರುವುದರಿಂದ ರೈತರ ಕೃಷಿ ಪಂಪ್ ಸೆಟ್ ಗಳಿಗೆ ಹಗಲು ಸಮರ್ಪಕ ವಿದ್ಯುತ್ ಲಭ್ಯವಾಗಲಿದೆ ಎಂದು ಸಚಿವರು ಹೇಳಿದರು.
ಕುಸುಮ್- ಸಿ ಜತೆಗೆ ಪಂಪ್‌ಸೆಟ್‌ಗೆ ಅಗತ್ಯ ಇರುವ ವಿದ್ಯುತ್ತನ್ನು ಜಮೀನಿನಲ್ಲೇ ಉತ್ಪಾದಿಸಲು ನೆರವಾಗುವ ಪಿಎಂ ಕುಸುಮ್-ಬಿ ಯೋಜನೆಯ ಲಾಭವನ್ನು ರೈತರು ಪಡೆಯಬೇಕು. ಕೇಂದ್ರ ಸರ್ಕಾರವು ಯೋಜನೆಗೆ ಶೇ. 30ರಷ್ಟು ಸಹಾಯಧನ ಒದಗಿಸಿದರೆ, ರಾಜ್ಯ ಸರ್ಕಾರದ ಶೇ. ೫೦ರಷ್ಟು ಸಬ್ಸಿಡಿ ನೀಡುತ್ತಿದೆ. ಫಲಾನುಭವಿಗಳು ಶೇ. 20ರಷ್ಟನ್ನು ಭರಿಸಿದರೆ ಸಾಕು. ಆನ್‌ಲೈನ್‌ಮೂಲಕ ಅರ್ಜಿ ಸಲ್ಲಿಸಿ ಈ ಸೌಲಭ್ಯ ಪಡೆಯಬಹುದು, "ಎಂದರು.ಈ ವೇಳೆ ಶಾಸಕ ಶರತ್ ಬಚ್ಚೆಗೌಡ ಮಾತನಾಡಿದರು. ಬೆಸ್ಕಾಂ ಎಂಡಿ ಶಿವಶಂಕರ್, ಗ್ರಾಪಂ ಅಧ್ಯಕ್ಷೆ ಪ್ರಿಯಾಂಕಾ ರಮೇಶ್, ಕೆಪಿಸಿಸಿ ಕಾರ್ಯದರ್ಶಿ ಇಟ್ಟಸಂದ್ರ ಬಿ.ಗೋಪಾಲ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಾಜಶೇಖರ್ ಗೌಡ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕೋಡಿಹಳ್ಳಿ ಸುರೇಶ್, ಬಿಎಂಆರ್‌ಡಿಎ ಅಧ್ಯಕ್ಷ ಕೇಶವಮೂರ್ತಿ, ಸದಸ್ಯ ಸುಬ್ಬರಾಜ್, ಡಿವೈಎಸ್ಪಿ ಮಲ್ಲೇಶ್ ಇತರರು ಹಾಜರಿದ್ದರು.
ಫೋಟೋ: 30 ಹೆಚ್‌ಎಸ್‌ಕೆ 1ಹೊಸಕೋಟೆ ತಾಲೂಕಿನ ಯಲಚಹಳ್ಳಿ ಗ್ರಾಮದಲ್ಲಿ ಪಿಎಂ ಕುಸುಮ್ ಸಿ ಯೋಜನೆಯಡಿ ನಿರ್ಮಿಸಿರುವ ಸೌರಶಕ್ತಿ ಘಟಕಗಳನ್ನು ಇಂಧನ ಸಚಿವ ಕೆಜೆ.ಜಾರ್ಜ್ ಉದ್ಘಾಟಿಸಿದರು.