ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯ ಮನೆ-ಮನೆ ಸಮೀಕ್ಷೆಗೆ ಆಶಾ ಕಾರ್ಯಕರ್ತೆಯರನ್ನು ನೇಮಿಸಿರುವ ಕ್ರಮ ವಿರೋಧಿಸಿ ತಾಲೂಕಿನ ಆಶಾ ಕಾರ್ಯಕರ್ತೆಯರು ಸೋಮವಾರ ತಾಲೂಕು ಆರೋಗ್ಯಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಅಂಕೋಲಾ:
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯ ಮನೆ-ಮನೆ ಸಮೀಕ್ಷೆಗೆ ಆಶಾ ಕಾರ್ಯಕರ್ತೆಯರನ್ನು ನೇಮಿಸಿರುವ ಕ್ರಮ ವಿರೋಧಿಸಿ ತಾಲೂಕಿನ ಆಶಾ ಕಾರ್ಯಕರ್ತೆಯರು ಸೋಮವಾರ ತಾಲೂಕು ಆರೋಗ್ಯಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ ಹೆಚ್ಚುವರಿ ಕೆಲಸದಿಂದ ನಮಗೆ ವಿಮುಕ್ತಿ ನೀಡುವಂತೆ ಆಗ್ರಹಿಸಿದರು.ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ತಾಲೂಕಾಧ್ಯಕ್ಷೆ ಚಂದ್ರಕಲಾ ನಾಯ್ಕ ಮಾತನಾಡಿ, ಸರ್ಕಾರದ ಆದೇಶದಂತೆ ನಮ್ಮನ್ನು ಗ್ಯಾರಂಟಿ ಯೋಜನೆಯ ಮನೆ-ಮನೆ ಸಮೀಕ್ಷೆಗೆ ನೇಮಿಸಲಾಗಿದೆ. ಅತ್ಯಲ್ಪ ಗೌರವಧನದಲ್ಲಿ ನಾವು ಕಷ್ಟಪಟ್ಟು ಸೇವೆ ನೀಡುತ್ತಿದ್ದೇವೆ. ಗರ್ಭಿಣಿಯಾದಾಗಿನಿಂದ ಮಗು ಜನಿಸಿ, ಅದರ ತೂಕ, ಚುಚ್ಚುಮದ್ದು ನೀಡುವ ತನಕವು ನಮ್ಮ ಕೆಲಸವಿದೆ. ಜನನ, ಮರಣ ಪಟ್ಟಿ, ಲಾರ್ವಾ ಸರ್ವೇ, ಅರ್ಹ ದಂಪತಿಗಳ ಪಟ್ಟಿ, ಬಿಪಿ ಶುಗರ್ ಪರೀಕ್ಷೆ, ಅಂಗನವಾಡಿ ಮಕ್ಕಳಿಗೆ ಆರೋಗ್ಯ ಪರೀಕ್ಷೆ, ದಿನದ ದಿನಚರಿ, ಸಾಂಕ್ರಾಮಿಕ ರೋಗದ ಸಮೀಕ್ಷೆ, ಮನೆ-ಮನೆ ಸಮೀಕ್ಷೆ ಸೇರಿದಂತೆ ಮೂವತ್ತಕ್ಕೂ ಹೆಚ್ಚು ಕೆಲಸಗಳಲ್ಲಿ ನಾವು ಆರೋಗ್ಯ ಇಲಾಖೆಯ ಸಂಬಂಧಿತ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದೇವೆ. ಆದರೆ ಈಗ ಹೆಚ್ಚುರಿಯಾಗಿ ಗ್ಯಾರಂಟಿ ಯೋಜನೆಯ ಮನೆ-ಮನೆ ಸಮೀಕ್ಷೆಯು ನಮಗೆ ಇನ್ನಷ್ಟು ಭಾರವಾಗಿ ಪರಿಗಣಿಸಿದೆ ಎಂದು ಅಳಲು ತೋಡಿಕೊಂಡರು.ನಮಗೆ ಆರೋಗ್ಯ ಇಲಾಖೆಯ ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಯಾವುದೇ ಅಭ್ಯಂತರವಿಲ್ಲ. ಆದರೆ ಇಂತಹ ಹೆಚ್ಚುವರಿ ಕೆಲಸ ನಮಗೆ ಬೇಡ. ನಮ್ಮಲ್ಲಿ ಮೊಬೈಲ್ ಬಳಕೆ ಮಾಡಲು ಬರದಿರುವ ಆಶಾಗಳು ಕೂಡ ಇದ್ದಾರೆ. ಹೀಗಿರುವಾಗ ಸರ್ಕಾರಕ್ಕೆ ನಮ್ಮ ಮೇಲೆ ಏಕೆ ಇಷ್ಟು ತಾತ್ಸಾರ ಎಂದು ತಿಳಿಯುತ್ತಿಲ್ಲ. ಕೂಡಲೆ ಈ ಕ್ರಮ ಕೈ ಬಿಟ್ಟು ನಮಗೆ ನ್ಯಾಯ ಒದಗಿಸಿ ಕೊಡಬೇಕು ಎಂದು ಆಗ್ರಹಿಸಿದರು.ಕಾರ್ಯದರ್ಶಿ ಸಂಗೀತಾ ನಾಯ್ಕ, ಉಪಾಧ್ಯಕ್ಷೆ ಶಾರದಾ ನಾಯಕ, ಮಾಲತಿ ನಾಯಕ, ಜುಲೇಖಾ ಶೇಖ, ತಾರಾ ನಾಯ್ಕ, ಸುನೀತಾ ನಾಯ್ಕ, ಸದಸ್ಯರಾದ ಸೌಭಾಗ್ಯ ಬಂಟ ಬೇಳಾ, ಗಿರಿಜಾ ವೆರ್ಣೇಕರ, ಪ್ರೀತಿ ನಾಯ್ಕ, ಪ್ರತಿಭಾ ನಾಯ್ಕ, ದಿವ್ಯಾ ನಾಯ್ಕ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
ನಾವು ಕೇವಲ ₹ ೫ ಸಾವಿರ ಗೌರವ ಧನದಲ್ಲಿ ಜೀತದಾಳುಗಳಂತೆ ದುಡಿಯುತ್ತಿದ್ದೇವೆ. ಸರ್ಕಾರ ನಮ್ಮ ಬೇಡಿಕೆ ಈಡೇರಿಸುತ್ತೇನೆ ಎಂದು ವಾಗ್ದಾನ ಮಾಡಿ ಇದೀಗ ಸುಮ್ಮನಾಗಿದೆ. ದಿನಕ್ಕೆ ಹತ್ತಾರು ಆರೋಗ್ಯ ಇಲಾಖೆಯ ಕೆಲಸ ಮಾಡುವ ನಮಗೆ ಗಾಯದ ಮೇಲೆ ಬರೆ ಎಂಬಂತೆ ಗ್ಯಾರಂಟಿ ಯೋಜನೆಯ ಮನೆ-ಮನೆ ಸಮೀಕ್ಷೆಯನ್ನು ಮೊಬೈಲ್ ಮೂಲಕ ದಾಖಲಿಸಿ ವರದಿ ನೀಡುವಂತೆ ಹೇಳಿರುವುದು ನಮ್ಮ ಶೋಷಣೆಗೆ ಹಿಡಿದ ಕನ್ನಡಿಯಾಗಿದೆ. ಇನ್ನಾದರೂ ನಮಗೆ ಸರ್ಕಾರ ಸ್ಪಂದಿಸಬೇಕು ಎಂದು ಆಶಾ ಕಾರ್ಯಕರ್ತೆಯರು ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.