ಲಂಚ ಪಡೆದು ಪೌರ ಕಾರ್ಮಿಕರ ನೇಮಕ: ಆರೋಪ

KannadaprabhaNewsNetwork |  
Published : Jul 07, 2025, 11:48 PM IST
7ಎಚ್‌ಯುಬಿ26ಪಟ್ಟಣದ ಪಟ್ಟಣ ಪಂಚಾಯತಿ ಆವರಣದಲ್ಲಿ ಡಾ: ಬಿ ಆರ್ ಅಂಬೇಡ್ಕರ್ ಅವರ ಭಾವ ಚಿತ್ರ ಇಟ್ಟುಕೊಂಡು ಸಾರ್ವಜನಿಕರು ಹಾಗೂ ಪ ಪಂ ಕೆಲ ಸದಸ್ಯರು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಪಪಂನಲ್ಲಿ 10 ಪೌರ ಕಾರ್ಮಿಕರನ್ನು ಸ್ವಾಮಿ ಏಜ್ಯುಕೇಶನ್ ಸೊಸೈಟಿ ಎಂಬ ಏಜೆನ್ಸಿ ಹೆಸರಿನಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. ಇದನ್ನು ಪಪಂ ಸದಸ್ಯರಿಗೂ ತಿಳಿಸದೇ, ಯಾವುದೇ ಸಭೆ ಕರೆಯದೇ ಒಬ್ಬೊಬ್ಬರಿಂದ ಲಕ್ಷ ರುಪಾಯಿ ಲಂಚ ಪಡೆದು ಕೆಲಸ ಮಾಡಲು ಪಪಂ ಮುಖ್ಯಾಧಿಕಾರಿ ‌ಸೂಚನೆ ನೀಡಿದ್ದಾರೆ.

ಕುಂದಗೋಳ: ಯಾವುದೇ ಸೂಚನೆ ಇಲ್ಲದೆ ಮುಖ್ಯಾಧಿಕಾರಿ ಸಿ.ವಿ. ಕುಲಕರ್ಣಿ ಪೌರ ಕಾರ್ಮಿಕರನ್ನು ನೇಮಕ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಪಪಂ ಕೆಲ ಸದಸ್ಯರು ಹಾಗೂ ಪಟ್ಟಣದ ಸಾರ್ವಜನಿಕರು ಸೋಮವಾರ ಪಪಂ ಬಾಗಿಲು ಬಂದ್‌ ಮಾಡಿ, ಅಂಬೇಡ್ಕರ್ ಪೋಟೋ ಇಟ್ಟು ಪ್ರತಿಭಟಿಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸದಸ್ಯ ಮಲ್ಲಿಕಾರ್ಜುನ ಕಿರೇಸೂರ ಮಾತನಾಡಿ, ಪಪಂನಲ್ಲಿ 10 ಪೌರ ಕಾರ್ಮಿಕರನ್ನು ಸ್ವಾಮಿ ಏಜ್ಯುಕೇಶನ್ ಸೊಸೈಟಿ ಎಂಬ ಏಜೆನ್ಸಿ ಹೆಸರಿನಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. ಇದನ್ನು ಪಪಂ ಸದಸ್ಯರಿಗೂ ತಿಳಿಸದೇ, ಯಾವುದೇ ಸಭೆ ಕರೆಯದೇ ಒಬ್ಬೊಬ್ಬರಿಂದ ಲಕ್ಷ ರುಪಾಯಿ ಲಂಚ ಪಡೆದು ಕೆಲಸ ಮಾಡಲು ಪಪಂ ಮುಖ್ಯಾಧಿಕಾರಿ ‌ಸೂಚನೆ ನೀಡಿದ್ದಾರೆ ಎಂದು ಆರೋಪಿಸಿದರು.

ಆದೇಶ ಪ್ರತಿ ಇಲ್ಲದೆ ಹೊಸ ಕಾರ್ಮಿಕರು ಕೆಲಸ‌ ಮಾಡುತ್ತಿದ್ದಾರೆ. ಅವರಿಗೆ ಏನಾದರೂ ಅವಘಡ ಸಂಭವಿಸಿ ಮರಣ ಹೊಂದಿದರೆ ಯಾರು ಹೊಣೆ?. ಹೀಗಾಗಿ ಮುಖ್ಯಾಧಿಕಾರಿಗಳನ್ನು ಕೆಲಸದಿಂದ ವಜಾ ಮಾಡಬೇಕು. ಏಜೆನ್ಸಿ ಮಾನ್ಯತೆ ರದ್ದು ಮಾಡಿ ಅವರ ಮೇಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಬೇಕು. ಇಲ್ಲದಿದ್ದರೆ ಮುಂದೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದರು.

ಪಪಂ ಸದಸ್ಯ ಗಣೇಶ ಕೋಕಾಟೆ ಮಾತನಾಡಿ, ಲಂಚ ಪಡೆದು ಹೊಸ ಪೌರ ಕಾರ್ಮಿಕರನ್ನು ನೇಮಿಸಿಕೊಂಡಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ದಲಿತ ‌ಸಮಾಜದ ಮುಖಂಡ ಸಿದ್ದಪ್ಪ ಚೂರಿ ಮಾತನಾಡಿ, ಈ ಹಿಂದೆ ನನ್ನ ಮಗ ಪೌರ ಕಾರ್ಮಿಕನಾಗಿ ಕೆಲಸ ಮಾಡುವ ಸಂದರ್ಭದಲ್ಲಿ ‌ಮರಣ ಹೊಂದಿದ್ದಾನೆ. ಹೀಗಾಗಿ, ಆ‌ ಕೆಲಸಕ್ಕೆ ‌ಮೊಮ್ಮಗನನ್ನು ನೇಮಕ ಮಾಡಿಕೊಳ್ಳಿ ಎಂದರೂ ಪಪಂ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಪರಿಗಣಿಸಿಲ್ಲ. ಪರಿಶೀಲಿಸಿ ‌ನಮಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ‌ಫಕೀರಪ್ಪ ಬೇವಿನಮರದ, ಈಶ್ವರ ಬೇವಿನಮರದ, ಚನ್ನಬಸಪ್ಪ ಕನಕಣ್ಣವರ, ಮಾರುತಿ ನಾಗಣ್ಣವರ, ಸಂಜೀವ್ ಕೊಟುಬಂದ, ಯಲ್ಲವ್ವ ಕಾಗಿ, ಶರಣವ್ವ ಚಲವಾದಿ, ಶೇಖವ್ವ ಬೇವಿನಮರದ, ಗಿರಿಜಾ ಚಲವಾದಿ, ಸೇರಿದಂತೆ ‌ಅನೇಕರಿದ್ದರು.

ಹೊಸದಾಗಿ 10 ಪೌರ ಕಾರ್ಮಿಕರನ್ನು ಸ್ವಾಮಿ ಏಜುಕೇಶನ್ ಸೊಸೈಟಿ ಎಂಬ ಏಜೆನ್ಸಿಯವರು ನನ್ನ ಗಮನಕ್ಕೂ ಇಲ್ಲದೆ ನೇಮಕ ‌ಮಾಡಿಕೊಂಡು ಕೆಲಸಕ್ಕೆ ಕಳುಹಿಸಿದ್ದಾರೆ. ಅವರ ಏಜೆನ್ಸಿ ರದ್ದು ಮಾಡಲು ಹೇಳಿ ಅವರ ಮೇಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಲು ಸೂಚಿಸುತ್ತೇನೆ. ತುರ್ತು ಸಭೆ ಕರೆದು ಅದರ ಬಗ್ಗೆ ಪರಿಶೀಲಿಸುತ್ತೇನೆ ಎಂದು ಕುಂದಗೋಳ ಪಪಂ ಮುಖ್ಯಾಧಿಕಾರಿ ಸಿ.ವಿ. ಕುಲಕರ್ಣಿ ಹೇಳಿದರು., ಕುಂದಗೋಳ ಪಪಂ ಮುಖ್ಯಾಧಿಕಾರಿ

----

7ಎಚ್‌ಯುಬಿ26

ಲಂಚ ಪಡೆದು ಪೌರಕಾರ್ಮಿಕರನ್ನು ನೇಮಕ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಕುಂದಗೋಳ ಪಪಂ ಆವರಣದಲ್ಲಿ ಪಾಲಿಕೆ ಕೆಲ ಸದಸ್ಯರು ಹಾಗೂ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.

----

7ಎಚ್‌ಯುಬಿ26

ಲಂಚ ಪಡೆದು ಪೌರಕಾರ್ಮಿಕರನ್ನು ನೇಮಕ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಕುಂದಗೋಳ ಪಪಂ ಆವರಣದಲ್ಲಿ ಪಾಲಿಕೆ ಕೆಲ ಸದಸ್ಯರು ಹಾಗೂ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.

PREV