ಶೀಘ್ರ ಆರೋಗ್ಯ ಇಲಾಖೆಗೆ ಸಿಬ್ಬಂದಿ ನೇಮಕ: ದಿನೇಶ ಗುಂಡೂರಾವ್‌

KannadaprabhaNewsNetwork | Published : Jun 28, 2024 12:46 AM

ಸಾರಾಂಶ

ಆರೋಗ್ಯ ಇಲಾಖೆಗೆ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ಶೀಘ್ರ ಪ್ರಾರಂಭಿಸಲಾಗುವುದು ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ ಗುಂಡೂರಾವ್‌ ಜಮಖಂಡಿ ನಗರದ ಸಾರ್ವಜನಿಕ ಆಸ್ಪತ್ರೆಗೆ ಗುರುವಾರ ಭೇಟಿ ನೀಡಿದರು.

ಕನ್ನಡಪ್ರಭವಾರ್ತೆ ಜಮಖಂಡಿ

ಆರೋಗ್ಯ ಇಲಾಖೆಗೆ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ಶೀಘ್ರ ಪ್ರಾರಂಭಿಸಲಾಗುವುದು ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ ಗುಂಡೂರಾವ್‌ ಹೇಳಿದರು. ನಗರದ ಸಾರ್ವಜನಿಕ ಆಸ್ಪತ್ರೆಗೆ ಗುರುವಾರ ಭೇಟಿ ನೀಡಿ, ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯದಲ್ಲಿ ಒಟ್ಟು ನೂತನ 15 ಸಮುದಾಯ ಆರೋಗ್ಯ ಕೇಂದ್ರಗಳಿಗೆ ನೇಮಕಾತಿ ಮತ್ತು ಸಲಕರಣೆಯ ಪೂರೈಕೆಯಾಗಬೇಕಿದೆ. ಸುಮಾರು ಕಡೆಗಳಲ್ಲಿ ಸಿಬ್ಬಂದಿ ಕೊರತೆ ಬಗ್ಗೆ ಅಹವಾಲು ಬಂದಿವೆ. ಪರಿಶೀಲನೆ ಕೈಗೊಂಡು ಮುಖ್ಯಮಂತ್ರಿಗಳಿಗೆ ಪ್ರಸ್ತಾವ ಸಲ್ಲಿಸಲಾಗುವುದು. ನರ್ಸ್, ಲ್ಯಾಬ್‌ ಟೆಕ್ನಿಷಿಯನ್‌, ಸಹಾಯಕರ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಶೀಘ್ರ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.

ಜಮಖಂಡಿಯಲ್ಲಿ ಆರೋಗ್ಯ ಇಲಾಖೆ ಪ್ರಾರಂಭಿಸಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ತಜ್ಞ ವೈದ್ಯರು, ಚಿಕ್ಕಮಕ್ಕಳ ತಜ್ಞ ವೈದ್ಯರು ಮತ್ತು 61 ಸಿಬ್ಬಂದಿ ನೇಮಕಾತಿ ಮಾಡಲಾಗುವುದು. ಹೊಸ ಕಟ್ಟಡ ನಿರ್ಮಿಸಿ ಎಕ್ಸ್‌ರೇ, ಸ್ಕ್ಯಾನಿಂಗ್‌, ರಕ್ತ ತಪಾಸಣೆ ಪ್ರಯೋಗಾಲಯ ಸ್ಥಾಪಿಸಲು ನಿರ್ಧರಿಸಲಾಗಿದೆ. ನಗರದಲ್ಲಿರುವ ಆಸ್ತತ್ರೆಯ ಕಟ್ಟಡ ನೂರು ವರ್ಷಗಳಷ್ಟು ಹಳೆಯದಾಗಿದ್ದು, ನವೀಕರಣಕ್ಕೆ ₹1.20 ಕೋಟಿ ಮಂಜೂರು ಮಾಡಲಾಗುವುದು ಎಂದು ತಿಳಿಸಿದ ಅವರು, ಆಸ್ಪತ್ರೆಗೆ ಬಟ್ಟೆ ತೊಳೆಯುವ ಯಂತ್ರಗಳನ್ನು ಪೂರೈಸಲಾಗುವುದು. ಎಲುಬು ಮತ್ತು ಕೀಲು ತಜ್ಞ ವೈದ್ಯರಿದ್ದಾರೆ. ಆದರೆ ಶಸ್ತ್ರಚಿಕಿತ್ಸೆ ಮಾಡಲು ಸಲಕರಣೆ ಮತ್ತು ಸಹಾಯಕರ ಕೊರತೆ ಇದ್ದು, ಕೂಡಲೇ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಸಾವಳಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಸಮುದಾಯ ಆರೋಗ್ಯ ಕೇಂದ್ರವಾಗಿ ಉನ್ನತೀಕರಣಗೊಂಡಿದೆ. ಸಲಕರಣೆ ಮತ್ತು ಸಿಬ್ಬಂದಿಯ ನೇಮಕಾತಿ ನಡೆಯಬೇಕಿದೆ. ನೂತನ ಕಟ್ಟಡದ ನಿರ್ಮಾಣವಾಗಿದೆ ಎಂದ ಅವರು, ಸರ್ಕಾರಿ ಆಸ್ಪತ್ರೆಗಳಲ್ಲಿ ಶೇ.ನೂರರಷ್ಟು ಎಲ್ಲಾ ಔಷಧಿಗಳು ದೊರೆಯುವಂತಾಗಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು..

ಮಾಜಿ ಶಾಸಕ ಆನಂದ ನ್ಯಾಮಗೌಡ, ಆರೋಗ್ಯ ಇಲಾಖೆಯ ಪ್ರಿನ್ಸಿಪಲ್‌ ಸೆಕ್ರೆಟರಿ ಹರ್ಷಗುಪ್ತ, ಆಯುಕ್ತ ನವೀನ್‌ಭಟ್‌, ರಣವೀರ, ಜಿಲ್ಲಾ ಆರೋಗ್ಯಾಧಿಕಾರಿ, ನಗರ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಕೃಷ್ಣಾ ಬಣ್ಣದ, ಟಿಎಚ್‌ಒ ಡಾ.ಗಲಗಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು, ಉಪವಿಭಾಧಿಕಾರಿ ಸಂತೋಷ ಕಾಮಗೌಡ, ತಹಸೀಲ್ದಾರ್‌ ಸದಾಶಿವ ಮುಕ್ಕೊಜಿ, ಡಿವೈಎಸ್‌ಪಿ ಶಾಂತವೀರ, ಸಿಪಿಐ ಮಲ್ಲಪ್ಪ ಮಡ್ಡಿ, ಪಿಎಸ್‌ಐ ಎನ್‌.ಆರ್‌.ಖಿಲಾರಿ ಹಾಗೂ ಕಾಂಗ್ರೆಸ್‌ ಮುಖಂಡರು ಉಪಸ್ಥಿತರಿದ್ದರು.

ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ಹೈಕಮಾಂಡ್‌ಗೆ ಬಿಟ್ಟಿದ್ದು:

ರಾಜ್ಯದಲ್ಲಿ ಮೂರು ಹೊಸ ಉಪಮುಖ್ಯಮಂತ್ರಿಗಳ ಹುದ್ದೆ ಸೃಷ್ಟಿ ಕುರಿತು ಪತ್ರಿಕೆಗಳಲ್ಲಿ ಸುದ್ದಿಗಳು ಪ್ರಕಟವಾಗುತ್ತಿರುವುದು ಹೊಸದೇನಲ್ಲ. ಅದರೆ ಪಕ್ಷದ ಹೈಕಮಾಂಡ್‌ ನಿರ್ಧಾರವೇ ಅಂತಿಮ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ದಿನೇಶ ಗುಂಡೂರಾವ್‌ ಹೇಳಿದರು. ಗುರುವಾರ ಜಮಖಂಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪತ್ರಿಕಾ ಹೇಳಿಕೆಗಳು ವಯಕ್ತಿಕ ಹೇಳಿಕೆಗಳೇ ಹೊರತು ಪಕ್ಷದ ಹೇಳಿಕೆಗಳಲ್ಲ. ಆದ್ದರಿಂದ ಪಕ್ಷದ ವರಿಷ್ಠರು ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುತ್ತಾರೆ ಎಂದರು. ಮಾಜಿ ಶಾಸಕ ಆನಂದ ನ್ಯಾಮಗೌಡ ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Share this article