ಕಾರವಾರ: ಗೃಹಲಕ್ಷ್ಮಿ ಯೋಜನೆಯ ದಾಖಲೆಗಳಲ್ಲಿ ಮೃತರು ಎಂದು ತೋರಿಸುತ್ತಿರುವ ಜಿಲ್ಲೆಯಲ್ಲಿನ ಜೀವಂತ ಮಹಿಳೆಯರಿಗೆ ಸಂಬಂಧಪಟ್ಟ ದಾಖಲೆಗಳನ್ನು ಶೀಘ್ರದಲ್ಲಿ ಸರಿಪಡಿಸಿ ಅವರಿಗೆ ಗೃಹಲಕ್ಷ್ಮಿ ಯೋಜನೆಯ ಪ್ರಯೋಜನವನ್ನು ಒದಗಿಸುವಂತೆ ಮಹಿಳಾ ಮತ್ತು ಮಕ್ಕಳ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ್ ನಾಯ್ಕ ಸೂಚನೆ ನೀಡಿದರು.ಗುರುವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 16 ಮಂದಿ ಮಹಿಳೆಯರ ಹೆಸರುಗಳು ಗೃಹಲಕ್ಷ್ಮಿ ತಂತ್ರಾಂಶದಲ್ಲಿ ಮೃತರು ಎಂದು ತೋರಿಸುತ್ತಿರುವುದರಿಂದ ಅವರು ಜೀವಂತ ಇದ್ದರೂ ಯೋಜನೆಯ ಪ್ರಯೋಜನದಿಂದ ವಂಚಿತರಾಗಿದ್ದಾರೆ ಎಂದರು.ಈ ಮಹಿಳೆಯರ ದಾಖಲೆಗಳು ಇ- ಜನ್ಮ ಪೋರ್ಟಲ್‌ನಲ್ಲಿ ಕೂಡ ಅಲೈವ್ ಎಂದು ತೋರಿಸುತ್ತಿದ್ದು, ಈ ಬಗ್ಗೆ ಕೇಂದ್ರ ಕಚೇರಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಲಾಗಿದೆ. ಈ ಸಮಸ್ಯೆಯನ್ನು ಶೀಘ್ರದಲ್ಲಿ ಬಗೆಹರಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.ಜಿಲ್ಲೆಯಲ್ಲಿ ಅಕ್ರಮವಾಗಿ ಅನ್ನಭಾಗ್ಯದ ಅಕ್ಕಿ ಕಳ್ಳತನವಾಗುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಬರುತ್ತಿದ್ದು, ಆಹಾರ ಇಲಾಖೆಯಿಂದ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಮತ್ತು ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿಯಲ್ಲಿ ಗ್ಯಾರಂಟಿ ಸಮಿತಿಯ ತಾಲೂಕು ಅಧ್ಯಕ್ಷರನ್ನು ಸೇರ್ಪಡೆ ಮಾಡುವಂತೆ ಮತ್ತು ಜಿಲ್ಲೆಯ ಕರಾವಳಿ ಭಾಗದಲ್ಲಿ ಕಚ್ಚಲಕ್ಕಿಯನ್ನು ನೀಡುವ ಕುರಿತಂತೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚನೆ ನೀಡಿದರು.ಕೆಎಸ್‌ಆರ್‌ಟಿಸಿ ನಿಲ್ದಾಣಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವಂತೆ ಮತ್ತು ಮಹಿಳಾ ಶೌಚಾಲಯದಲ್ಲಿ ಎರಡು ರುಪಾಯಿ ಮಾತ್ರ ತೆಗೆದುಕೊಳ್ಳುವಂತೆ ಸಂಬಂಧಪಟ್ಟ ಟೆಂಡರ್‌ದಾರರಿಗೆ ಸೂಚನೆ ನೀಡಬೇಕು. ಈ ನಿಯಮವನ್ನು ಪಾಲನೆ ಮಾಡದಿದ್ದಲ್ಲಿ ಟೆಂಡರ್ ರದ್ದು ಪಡಿಸಿ ಬ್ಲಾಕ್ ಲಿಸ್ಟಿಗೆ ಸೇರ್ಪಡೆ ಮಾಡುವಂತೆ ಮತ್ತು ಪ್ರಯಾಣಿಕರಿಗೆ ಅಗತ್ಯವಿರುವೆಡೆಗಳಲ್ಲಿ ಕೋರಿಕೆಯ ನಿಲುಗಡೆಗಳನ್ನು ನೀಡುವಂತೆ ಸೂಚನೆ ನೀಡಿದರು.