ಕಾರಟಗಿ: ರಾಜ್ಯದಲ್ಲಿ ಪರಿಶಿಷ್ಟ ಪಂಗಡದ (ಎಸ್‌ಟಿ) ಮೀಸಲಾತಿ ಪ್ರಮಾಣ ಕಡಿತದಿಂದ ಉಂಟಾಗಿರುವ ಅನ್ಯಾಯವನ್ನು ಸರಿಪಡಿಸಲು ರಾಜ್ಯ ಸರ್ಕಾರ ಕೂಡಲೇ ಉಚ್ಚ ನ್ಯಾಯಾಲಯದ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿ ಸಮರ್ಥವಾಗಿ ವಾದಿಸಬೇಕು ಎಂದು ಒತ್ತಾಯಿಸಿ ಕಾರಟಗಿ ವಾಲ್ಮೀಕಿ ಮಹಾಸಭಾ ಪದಾಧಿಕಾರಿಗಳು ಸೋಮವಾರ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಸುಸಜ್ಜಿತ ಬುಡಕಟ್ಟು ವಿಶ್ವವಿದ್ಯಾಲಯ ಸ್ಥಾಪಿಸಬೇಕು. ಕೆಲವು ಕಡೆ ನಕಲಿ ಜಾತಿ ಪ್ರಮಾಣಪತ್ರಗಳ ಮೂಲಕ ಅನರ್ಹರು ಸರ್ಕಾರದ ಸೌಲಭ್ಯ ಪಡೆಯುತ್ತಿರುವುದನ್ನು ತಡೆಯಬೇಕು. ಅರ್ಹ ಪರಿಶಿಷ್ಟ ಪಂಗಡದವರಿಗೆ ಮಾತ್ರ ಜಾತಿ ಸಿಂಧುತ್ವ ಪ್ರಮಾಣಪತ್ರ ನೀಡುವಂತೆ ಜಿಲ್ಲಾಧಿಕಾರಿಗಳು ಹಾಗೂ ತಹಸೀಲ್ದಾರ್‌ಗಳಿಗೆ ಸೂಚನೆ ನೀಡಬೇಕು ಎಂದು ಆಗ್ರಹಿಸಲಾಗಿದೆ.
ಗ್ರೇಡ್-2 ತಹಸೀಲ್ದಾರ್ ಷಣ್ಮುಖಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು. ಮಹರ್ಷಿ ವಾಲ್ಮೀಕಿ ಸಮಾಜದ ಅಧ್ಯಕ್ಷ ಬೂದಿ ಗಿರಿಯಪ್ಪ, ಸೋಮನಾಥ ಹೆಬ್ಬಡದ, ಶಿವರೆಡ್ಡಿ ನಾಯಕ, ನಾಗರಾಜ ಬೂದಿ, ಮಂಜುನಾಥ ತೊಂಡಿಹಾಳ, ಸಿ. ಗದ್ದೆಪ್ಪ, ಬೂದಿ ಪ್ರಭುರಾಜ, ನಾಗರಾಜ ಬಿಲ್ಗಾರ್, ರಮೇಶ ನಾಡಿಗೇರ್, ಬೂದಿ ದೊಡ್ಡ ಬಸವರಾಜ, ದೇವರಾಜ ನಾಯಕ ಜೂರಟಗಿ ಇದ್ದರು.ಜಯಂತಿ ಆಚರಣೆ: ಇದಕ್ಕೂ ಮುನ್ನ ಪಟ್ಟಣದ ಪನ್ನಾಪುರ ರಸ್ತೆ ವಾಲ್ಮೀಕಿ ಮಹರ್ಷಿ ವೃತ್ತದಲ್ಲಿ ಸಮಾಜದ ವತಿಯಿಂದ ವಾಲ್ಮೀಕಿ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ವೃತ್ತದಲ್ಲಿನ ನಾಮಫಲಕ ಹಾಗೂ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.