ಕನ್ನಡಪ್ರಭ ವಾರ್ತೆ ಮಂಗಳೂರುಕರಾವಳಿಯಲ್ಲಿ ಬಿರುಸಿನ ಮಳೆ ಬುಧವಾರವೂ ಮುಂದುವರಿದಿದೆ. ಇದೇ ವೇಳೆ ಭಾರತೀಯ ಹವಾಮಾನ ಇಲಾಖೆ ಜು.18ರಂದು ಮತ್ತೆ ಕರಾವಳಿಯಲ್ಲಿ ರೆಡ್ ಅಲರ್ಟ್ ಘೋಷಿಸಿದೆ.ದ.ಕ.ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಬುಧವಾರ ಕೂಡ ಹಗುರದಿಂದ ಉತ್ತಮ ಮಳೆಯಾಗಿದೆ. ಮುಂಜಾನೆಯಿಂದಲೇ ಮಳೆ ಚುರುಕುಗೊಂಡರೂ ಮಧ್ಯಾಹ್ನ ವರೆಗೆ ಆಗಾಗ ಸುರಿಯುತ್ತಿತ್ತು. ಅಪರಾಹ್ನ ಪೂರ್ಣ ಪ್ರಮಾಣದಲ್ಲಿ ಮೋಡ ಕವಿದ ವಾತಾವರಣ ಕಂಡುಬಂದಿದ್ದು, ಜಿಲ್ಲೆಯಾದ್ಯಂತ ಮಳೆ ಬಿರುಸುಗೊಂಡಿತ್ತು.
ಮಂಗಳೂರು, ಮೂಡುಬಿದಿರೆ, ಮೂಲ್ಕಿ ಹಾಗೂ ಉಳ್ಳಾಲ ತಾಲೂಕುಗಳ ಶಾಲಾ- ಕಾಲೇಜುಗಳಿಗೆ ರಜೆ ನೀಡಲಾಗಿಲ್ಲ.
ಬೆಳ್ತಂಗಡಿ ಗರಿಷ್ಠ ಮಳೆ: ದ.ಕ.ಜಿಲ್ಲೆಯಲ್ಲಿ ಬುಧವಾರ ಬೆಳಗ್ಗಿನ ವರೆಗೆ ಬೆಳ್ತಂಗಡಿಯಲ್ಲಿ ಗರಿಷ್ಠ 70.1 ಮಿಲಿ ಮೀಟರ್ ಮಳೆ ದಾಖಲಾಗಿದೆ. ಜಿಲ್ಲೆಯ ದಿನದ ಸರಾಸರಿ ಮಳೆ 54.4 ಮಿ.ಮೀ. ಆಗಿದೆ.ಬಂಟ್ವಾಳ 44.2 ಮಿ.ಮೀ, ಮಂಗಳೂರು 38.1 ಮಿ.ಮೀ, ಪುತ್ತೂರು 48.3 ಮಿ.ಮೀ, ಸುಳ್ಯ 59.2 ಮಿ.ಮೀ, ಮೂಡುಬಿದಿರೆ 59.5 ಮಿ.ಮೀ, ಕಡಬ 47.4 ಮಿ.ಮೀ, ಮೂಲ್ಕಿ 25.8 ಮಿ.ಮೀ. ಉಳ್ಳಾಲ 35.6 ಮಿ.ಮೀ. ಮಳೆ ದಾಖಲಾಗಿದೆ. ಉಪ್ಪಿನಂಗಡಿಯಲ್ಲಿ ನೇತ್ರಾವತಿ ಮತ್ತು ಕುಮಾರಧಾರ ನದಿ 27.50 ಮೀಟರ್ ಹಾಗೂ ಬಂಟ್ವಾಳದ ತುಂಬೆಯಲ್ಲಿ ನೇತ್ರಾವತಿ ನದಿ 6.2 ಮೀಟರ್‌ನಲ್ಲಿ ಹರಿಯುತ್ತಿದೆ.
ಮಂಗಳೂರು: ಧಾರಾಕಾರ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಜು.18ರಂದು ಗುರುವಾರ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ಹಾಗೂ ಕಡಬ ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳು ಹಾಗೂ ಪದವಿ ಪೂರ್ವ ತನಕದ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.
ಉಪ್ಪಿನಂಗಡಿ: ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ಜೀವ ನದಿಗಳಾದ ನೇತ್ರಾವತಿ ಮತ್ತು ಕುಮಾರಧಾರ ನದಿಗಳ ನೀರಿನ ಹರಿವಿನಲ್ಲಿ ಬುಧವಾರ ಮಧ್ಯಾಹ್ನದ ಬಳಿಕ ಹೆಚ್ಚಳ ಕಂಡು ಬಂದಿದೆ.