ಇಂದು ರೆಡ್ ಅಲರ್ಟ್: ಭಾರಿ ಮಳೆ ಸಾಧ್ಯತೆ

KannadaprabhaNewsNetwork | Updated : Jun 09 2024, 11:26 AM IST
Follow Us

ಸಾರಾಂಶ

ಮುಂಡಗೋಡ ತಾಲೂಕಿನಲ್ಲಿ ನಿರಂತರವಾಗಿ ಮಳೆ ಸುರಿದಿದೆ. ಜೋಯಿಡಾದಲ್ಲಿ ಬೆಳಗ್ಗೆ ವೇಳೆ ಉತ್ತಮ ಮಳೆಯಾಗಿದ್ದು, ಬಳಿಕ ಬಿಡುವು ನೀಡಿತ್ತು.

ಕಾರವಾರ: ಜಿಲ್ಲೆಯ ಕೆಲವು ತಾಲೂಕಿನಲ್ಲಿ ಶನಿವಾರವೂ ಮಳೆ ಮುಂದುವರಿದಿದೆ. ಭಟ್ಕಳದಲ್ಲಿ ಭಾರಿ ಮಳೆಯಾಗಿದೆ.

ಶುಕ್ರವಾರ ಬೆಳಗ್ಗೆ ೮ ಗಂಟೆಯಿಂದ ಮುಂದಿನ ೨೪ ಗಂಟೆಯ ಅವಧಿಯಲ್ಲಿ ಕುಮಟಾದಲ್ಲಿ ೧೨೪.೯ ಎಂಎಂ ಮಳೆಯಾಗಿದ್ದು, ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆ ಸುರಿದಂತಾಗಿದೆ. ಕಾರವಾರದಲ್ಲಿ ೧೦೮.೭ ಎಂಎಂ, ಹೊನ್ನಾವರದಲ್ಲಿ ೧೧೬.೧ ಎಂಎಂ ಮಳೆಯಾಗಿದೆ. ಜಿಲ್ಲೆಯಲ್ಲಿ ಜೂ. ೮ರಂದು ಭಾರಿ ಮಳೆ ಸಾಧ್ಯತೆಯಿದ್ದು, ರೆಡ್ ಅಲರ್ಟ್, ಜೂ. ೧೦ ಮತ್ತು ೧೧ರಂದು ಆರೆಂಜ್ ಅಲರ್ಟ್ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.

ಕಾರವಾರದಲ್ಲಿ ಶುಕ್ರವಾರ ಮಧ್ಯಾಹ್ನದಿಂದ ಶನಿವಾರ ಸಂಜೆಯವರೆಗೆ ನಿರಂತರವಾಗಿ ಜಿಟಿ ಜಿಟಿ ಮಳೆಯಾಗಿದೆ. ಶಿರಸಿಯಲ್ಲಿ ಸಂಜೆ ವೇಳೆ ಭಾರಿ ಮಳೆಯಾಗಿದ್ದು, ದುಂಡಶಿನಗರದ ರಸ್ತೆಯಲ್ಲಿ ನೀರು ನಿಂತು ವಾಹನ, ಪಾದಚಾರಿಗಳ ಸಂಚಾರಕ್ಕೆ ತೊಂದರೆ ಉಂಟಾಯಿತು. ಗ್ರಾಮೀಣ ಭಾಗದಲ್ಲಿ ಸತತ ಮಳೆಯಾಗಿದೆ. ಭಟ್ಕಳದಲ್ಲಿ ಬೆಳಗ್ಗೆ ಎರಡು ತಾಸಿಗೂ ಅಧಿಕ ಕಾಲ ಭಾರಿ ಮಳೆಯಾಗಿದ್ದು, ಬಳಿಕ ತುಸು ಕಡಿಮೆಯಾಗಿತ್ತು. ಮಧ್ಯಾಹ್ನದ ವೇಳೆಗೆ ಪುನಃ ೨ ತಾಸಿಗೂ ಅಧಿಕ ಕಾಲ ಬಿರುಸಿನಿಂದ ಮಳೆಯಾಗಿದೆ. ಭಾರಿ ಮಳೆಯಿಂದ ಕೆಲವು ಕಡೆ ರಸ್ತೆಯ ಮೇಲೆ ನೀರು ಹರಿಯುತ್ತಿತ್ತು.

ಮುಂಡಗೋಡ ತಾಲೂಕಿನಲ್ಲಿ ನಿರಂತರವಾಗಿ ಮಳೆ ಸುರಿದಿದೆ. ಜೋಯಿಡಾದಲ್ಲಿ ಬೆಳಗ್ಗೆ ವೇಳೆ ಉತ್ತಮ ಮಳೆಯಾಗಿದ್ದು, ಬಳಿಕ ಬಿಡುವು ನೀಡಿತ್ತು. ಸಂಜೆ ವೇಳೆ ಉತ್ತಮ ಮಳೆಯಾಗಿದೆ. ಅಂಕೋಲಾ ತಾಲೂಕಿನ ಬಹುತೇಕ ಕಡೆ ಭಾರಿ ಮಳೆಯಾಗಿದೆ. ಯಲ್ಲಾಪುರ, ಸಿದ್ದಾಪುರ ಭಾಗದಲ್ಲೂ ಉತ್ತಮ ಮಳೆಯಾಗಿದೆ. ಮುಂಗಾರು ಆರ್ಭಟ ಜೋರಾಗಿದ್ದು, ಬಹುತೇಕ ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದೆ.

ಎಲ್ಲಿ ಎಷ್ಟು ಮಳೆ?: ಅಂಕೋಲಾ 75.8 ಮಿಮೀ, ಭಟ್ಕಳ 86 ಹಳಿಯಾಳ14, ಮುಂಡಗೋಡ 24, ಸಿದ್ದಾಪುರ 44, ಶಿರಸಿ 36, ಜೋಯಿಡಾ 24 ಯಲ್ಲಾಪುರ 24 ದಾಂಡೇಲಿ9 ಎಂಎಂ ಮಳೆಯಾಗಿದೆ.

ಗೋಕರ್ಣದಲ್ಲಿ ಮಳೆಯ ಅಬ್ಬರ

ಗೋಕರ್ಣ: ಮಳೆಯ ಆರ್ಭಟ ಶನಿವಾರವೂ ಮುಂದುವರಿದಿದ್ದು, ಇಲ್ಲಿನ ಪ್ರಮುಖ ರಸ್ತೆಗಳು ಸಂಪೂರ್ಣ ಜಲಾವೃತ್ತಗೊಂಡು ಸಂಚಾರಕ್ಕೆ ತೊಡಕು ಉಂಟಾಯಿತು.

ರಾಜ್ಯ ಹೆದ್ದಾರಿ 143ರ ಭದ್ರಕಾಳಿ ಕಾಲೇಜು, ಸರ್ಕಾರಿ ಆಸ್ಪತ್ರೆ, ಗಂಜೀಗದ್ದೆ, ರಥಬೀದಿಯಲ್ಲಿ ಚರಂಡಿ ನೀರು ಉಕ್ಕಿ ರಸ್ತೆ ನದಿಯಾಗಿ ಮಾರ್ಪಾಡಾಗಿತ್ತು. ವಾರಾಂತ್ಯದ ರಜೆಗೆ ಅಧಿಕ ಸಂಖ್ಯೆಯಲ್ಲಿ ಬಂದಿದ್ದ ಪ್ರವಾಸಿಗರು ಮಳೆಯ ಅಬ್ಬರಕ್ಕೆ ಪರದಾಡಿದರು. ಗಂಜೇಗದ್ದೆ ಮತ್ತು ರಥಬೀದಿಯಲ್ಲಿ ರಸ್ತೆ, ಚರಂಡಿ ಯಾವುದು ಎಂದು ತಿಳಿಯದೆ ಜೀವಾಪಾಯದಲ್ಲೇ ಸಂಚರಿಸುವ ದೃಶ್ಯ ಕಂಡುಬಂತು.

ಸ್ಥಳೀಯ ಆಡಳಿತ ನಿರ್ಲಕ್ಷ?: ಭದ್ರಕಾಳಿ ಕಾಲೇಜಿನ ಬಳಿ ಖಾಸಗಿಯವರು ಮುಚ್ಚಿದ ಚರಂಡಿಯನ್ನು ಅರೆಬರೆ ತೆಗೆದ ಪರಿಣಾಮ ನೀರು ರಸ್ತೆಗೆ ಹರಿಯುತ್ತಿದೆ. ಈ ಬಗ್ಗೆ ಪತ್ರಿಕೆ ವರದಿ ಮಾಡಿದರೂ ಎಚ್ಚೆತ್ತುಕೊಳ್ಳದೆ ಹಾಗೇ ಬಿಟ್ಟ ಪರಿಣಾಮ ಈ ಆವಾಂತರ ಸೃಷ್ಟಿಯಾಗಿದೆ. ಇನ್ನೂ ಗಂಜೀದ್ದೆಯಲ್ಲಿ ಪ್ರತಿ ಮಳೆಗಾಲದಲ್ಲಿ ನೀರು ತುಂಬುತ್ತಿದ್ದು, ಇದಕ್ಕೆ ಚರಂಡಿ ನೀರು ಸರಾಗವಾಗಿ ಹೋಗಲು ವ್ಯವಸ್ಥೆ ಮಾಡಿಕೊಡದಿದ್ದರಿಂದ ತೊಂದರೆಯಾಗುತ್ತಿದೆ.

ಗಾಯತ್ರಿ ಕೆರೆಯ ಮೇಲ್ಭಾಗದಲ್ಲಿ ನೀರು ಹರಿದು ಹೋಗುವ ಜಾಗವನ್ನು ಮುಚ್ಚಿದ ಪರಿಣಾಮ ಬೃಹತ್ ಪ್ರಮಾಣದಲ್ಲಿ ನೀರು ರಸ್ತೆಗೆ ಹರಿದುಬಂದು ಮಹಾಗಣಪತಿ ಮುಂಭಾಗದಿಂದ ರಥಬೀದಿಯಲ್ಲಿ ತುಂಬುತ್ತಿದೆ. ಇಲ್ಲಿ ಮಣ್ಣು, ಕಲ್ಲು, ಪ್ಲಾಸ್ಟಿಕ್ ತ್ಯಾಜ್ಯಗಳೇ ರಾಶಿ ಬೀಳುತ್ತಿದ್ದು, ಇದನ್ನು ತುಳಿದೇ ಭಕ್ತರು ದೇವರ ದರ್ಶನಕ್ಕೆ ತೆರಳಬೇಕಿದೆ. ಬೇಸಿಗೆಯಲ್ಲೆ ಗ್ರಾಮ ಪಂಚಾಯಿತಿ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಜರುಗಿಸಿದರೆ ಈ ಸಮಸ್ಯೆ ಬಗೆಹರಿಯುತ್ತಿತ್ತು. ಆದರೆ ಯಾವುದೇ ಮುನ್ನೆಚ್ಚರಿಕೆ ತೆಗೆದುಕೊಳ್ಳದ ಕಾರಣ ಆವಾಂತರ ಮುಂದುವರಿದಿದೆ.

ಗ್ರಾಮೀಣ ಪ್ರದೇಶ: ರಾಜ್ಯ ಹೆದ್ದಾರಿ ಮಾದನಗೇರಿ ಬಳಿ, ಗಂಗಾವಳಿ, ಹನೇಹಳ್ಳಿ, ಬಂಕಿಕೊಡ್ಲ, ತದಡಿ, ತೊರ್ಕೆ, ಹಿರೇಗುತ್ತಿ ಭಾಗದಲ್ಲಿ ಕೆಲವು ಕಡೆ ರಸ್ತೆ, ಕೃಷಿ ಭೂಮಿಗೆ ನೀರು ನುಗ್ಗಿದ್ದು, ನದಿ ಅಂಚಿನ ಪ್ರದೇಶದಲ್ಲಿ ನಿವಾಸಿಗಳಿಗೆ ಪ್ರಸ್ತುತ ಯಾವುದೇ ತೊಂದರೆಯಾಗಿಲ್ಲ.