ಕನ್ನಡಪ್ರಭವಾರ್ತೆ ಮಧುಗಿರಿ
ಸರ್ಕಾರಿ ಬಸ್‌ಗಳೇ ಸಂಚರಿಸದ ಮಧುಗಿರಿ ತಾಲೂಕಿನ ಕುಗ್ರಾಮಗಳಿಗೂ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರ ಮುತುವರ್ಜಿಯಿಂದಾಗಿ ಕೆಂಪು ಬಸ್‌ಗಳು ಬಹುತೇಕ ಎಲ್ಲ ಗ್ರಾಮಗಳಿಗೂ ಬಸ್ ಸಂಚಾರ ವ್ಯವಸ್ಥೆ ಪ್ರಾರಂಭಗೊಂಡಿದ್ದು ಇದರಿಂದ ಆಯಾಯ ಗ್ರಾಮಗಳ ಜನತೆ ಮತ್ತು ಶಾಲಾ ಮಕ್ಕಳು ಬಸ್ ಕಂಡು ಹರ್ಷ ವ್ಯಕ್ತಪಪಡಿಸಿದ್ದಾರೆ.ವಿಧಾನ ಪರಿಷತ್ ಸದಸ್ಯ ಆರ್. ರಾಜೇಂದ್ರ ಶನಿವಾರ ಮಧುಗಿರಿ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮಧುಗಿರಿಯಿಂದ -ಬೆಂಗಳೂರಿಗೆ ಅಶ್ವಮೇಧ ಕ್ಲಾಸಿಕ್ ನೂತನ 5 ಬಸ್‌ಗಳ ಸಂಚಾರಕ್ಕೆ ಸ್ವಯಂ ಬಸ್ ಚಾಲನೆ ಮಾಡುವ ಮೂಲಕ ಚಾಲನೆ ನೀಡಿದರು.
ರಾಜ್ಯದಲ್ಲಿ ಕರ್ನಾಟಕ ಸಾರಿಗೆ ಇಲಾಖೆ ವತಿಯಿಂದ ನೂತನವಾಗಿ 100 ಅಶ್ವಮೇಧ ಕ್ಲಾಸಿಕ್ ಬಸ್ ವ್ಯವಸ್ಥೆಯನ್ನು ಕಲ್ಪಿಸಿದೆ. ಈ ಪೈಕಿ ಮಧುಗಿರಿ ಡಿಪೋಗೆ 5 ಬಸ್‌ಗಳನ್ನು ನೀಡಲಾಗಿದೆ. ಸ್ವಾತಂತ್ರ್ಯ ಬಂದು 75 ವರ್ಷ ಕಳೆದ ನಂತರ ಏಕಶಿಲಾ ಬೆಟ್ಟದ ಹಿಂಭಾಗದ ಬೆಟ್ಟ ಗುಡ್ಡಗಳ ಕಾಡು ಪ್ರಾಣಿಗಳ ನಡುವೆ ವಾಸಿಸುತ್ತಿರುವ ಕೆ.ಸಿ. ರೊಪ್ಪ, ಹಾವೆಕಟ್ಟೆ, ಗುಡಿರೊಪ್ಪ, ಕಮ್ಮನಕೋಟೆ ಸೇರಿದಂತೆ ಹಲವು ಕುಗ್ರಾಮಗಳಲ್ಲಿ ವಾಸಿಸುವ ಬಸ್ಸೇ ಕಾಣದ ಜನರ ಅನುಕೂಲಕ್ಕೆ ಬಸ್ ಸಂಚರಿಸಲು ಸಹಕಾರ ಸಚಿವ ಕೆ.ಎನ್. ರಾಜಣ್ಣರವರ ಕಾಳಾಜಿ ವಹಿಸಿದ ಪರಿಣಾಮ ಬಸ್ ಸಂಚಾರ ಪ್ರಾರಂಭವಾಗಿದೆ. ಈ ಭಾಗದ ಜನರ ಮತ್ತು ಶಾಲಾ ಮಕ್ಕಳ ಪ್ರಯಾಣಕ್ಕೆ ಅನುಕೂಲವಾಗಿದೆ. ತಾಲೂಕಿನ ಆಂಧ್ರ ಗಡಿ ಪ್ರದೇಶಗಳಲ್ಲಿನ ಜನರ ವ್ಯಾಪಾರ ವಹಿವಾಟು ಮತ್ತು ಜೀವನ ನಿರ್ವಹಣೆಗೆ ಒಂದು ಕಡೆಯಿಂದ ಮತ್ತೊಂದು ಕಡೆ ಸಂಚರಿಸಲು ಬಸ್ ವ್ಯವಸ್ಥೆ ಕಲ್ಪಿಸಿರುವುದು ಸಂತಸದ ವಿಚಾರ ಎಂದರು.ಕಡಗತ್ತೂರು, ಹೊಸಕೊಟೆ, ತೆರಿಯೂರು, ಪರ್ತಿಹಳ್ಳಿ ಗಡಿ ಭಾಗಕ್ಕೆ ಬಸ್ ವ್ಯವಸ್ಥೆ ಕಲ್ಪಿಸಿರುವುದು ಸ್ವಾಗತಾರ್ಹ, ಇದೇ ರೀತಿ ಮಿಡಿಗೇಶಿ ಹೋಬಳಿ ಮಲ್ಲನಾಯಕನಹಳ್ಳಿ ಗಡಿ ಗ್ರಾಮಗಳಿಗೂ ಬಸ್ ವ್ಯವಸ್ಥೆ ಕಲ್ಪಿಸಲು ಸರ್ವೆ ಮಾಡುವಂತೆ ಕೆಎಸ್‌ಆರ್‌ಟಿಸಿ ಡಿಪೋ ಮ್ಯಾನೇಜರ್‌ಗೆ ಎಂಎಲ್‌ಸಿ ರಾಜೇಂದ್ರ ಸೂಚಿಸಿದರು.
ಮುಂದಿನ ದಿನಮಾನಗಳಲ್ಲಿ ಇನ್ನಿತರೆ ಗಡಿ ಪ್ರದೇಶಗಳಿಗೂ ಸಾರಿಗೆ ವ್ಯವಸ್ಥೆ ಕಲ್ಪಿಸುವ ಗುರಿ ಹೊಂದಿದ್ದು, ಪ್ರಸ್ತುತ ಕೆಂಪು ಬಸ್‌ಗಳ ಸಂಚಾರದಿಂದ ಶಾಲಾ ಮಕ್ಕಳಿಗೆ, ವೃದ್ಧರಿಗೆ, ರೈತರಿಗೆ ಹಾಗೂ ಕೂಲಿಕಾರ್ಮಿಕರಿಗೆ ಓಡಾಡಲು ಅನುಕೂಲವಾಗಿದೆ. ಇದರಂದ ತಾಲೂಕಿನ ಜನರ ಬಹು ದಿನಗಳ ಬೇಡಿಕೆ ಈಡೇರಿದಂತಾಗಿದೆ ಎಂದರು.ನಮ್ಮ ಮಧುಗಿರಿ ಉಪ ವಿಭಾಗಕ್ಕೆ ಐದು ನೂತನ ಕ್ಲಾಸಿಕ್ ಬಸ್ ವ್ಯವಸ್ಥೆ ಮೊದಲ ಬಾರಿಗೆ ಅವಕಾಶ ಮಾಡಿಕೊಟ್ಟ ನಮ್ಮ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ್ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಸಹಕಾರ ಸಚಿವ ಕೆ.ಎನ್. ರಾಜಣ್ಣನವರಿಗೆ ಅಭಿನಂದನೆ ಸಲ್ಲಿಸಿದರು. ತಾಲೂಕಿನ ವಿವಿಧ ಮಾರ್ಗಗಳಲ್ಲಿ ಕೆಂಪು ಬಸ್‌ಗಳು ಸಂಚರಿಸುವುದನ್ನು ಕಂಡ ಜನರು ಆಯಾಯ ಗ್ರಾಮಗಳಲ್ಲಿ ಸಡಗರ-ಸಂಭ್ರಮ ಮನೆ ಮಾಡಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಉಫವಿಭಾಗಾಧಿಕಾರಿ ಗೋಟೋರು ಶಿವಪ್ಪ, ತಹಸೀಲ್ದಾರ್ ಸಿಬ್ಗತುವುಲ್ಲಾ, ಡಿಪೋ ಮ್ಯಾನೇಜರ್, ಕೆಪಿಸಿಸಿ ಸದಸ್ಯ ಎಂ.ಎಸ್. ಮಲ್ಲಿಕಾರ್ಜುನಯ್ಯ, ಪುರಸಭೆ ಮಾಜಿ ಅಧ್ಯಕ್ಷ ಎಂ.ಕೆ. ನಂಜುಂಡಯ್ಯ, ಜಿಪಂ ಮಾಜಿ ಸದಸ್ಯ ಎಂ.ಎಚ್. ನಾರಾಯಣಪ್ಪ, ಪುರಸಭೆ ಸದಸ್ಯರಾದ ಲಾಲಪೇಟೆ ಮಂಜುನನಾಥ್, ಮಂಜುನಾಥ್ ಆಚಾರ್, ಆಲೀಮ್, ಶ್ರೀಧರ್, ಸಾರಿಗೆ ಡಿಪೋ ಸಿಬ್ಬಂದಿ ಸೇರಿ ಅನೇಕರಿದ್ದರು.