ಕಲ್ಪವೃಕ್ಷಕ್ಕೆ ಕೆಂಪು ಮೂತಿ ಹುಳದ ಕಾಟ

KannadaprabhaNewsNetwork |  
Published : Dec 09, 2025, 01:15 AM IST
7 ಟಿವಿಕೆ 3 – ತುರುವೇಕೆರೆ ತಾಲೂಕು ಕೋಳಘಟ್ಟ ಕಾವಲ್ ನಲ್ಲಿರುವ ಎನ್.ಟಿ.ಪ್ರಸಾದ್ ರವರ ತೋಟದಲ್ಲಿ ಹಮ್ಮಿಕೊಳ್ಳಲಾಗಿದ್ದ ಕೀಟಭಾಧೆ ನಿರ್ವಹಣೆ ಕುರಿತು ನಡೆಸಿದ ವಿಚಾರಗೋಷ್ಠಿಯಲ್ಲಿ ಕೃಷಿ ಸಹಾಯಕ ನಿರ್ದೇಶಕಿ ಪೂಜಾ ಮಾತನಾಡಿದರು. | Kannada Prabha

ಸಾರಾಂಶ

ಕೆಂಪು ಮೂತಿ ಹುಳದ ಕಾಟದಿಂದ ತಾಲೂಕಿನ ರೈತರ ಜೀವನಾಡಿಯಾಗಿರುವ ಕಲ್ಪವೃಕ್ಷಕ್ಕೆ ಸಂಚಕಾರ ಬಂದೊದಗಿದೆ. ಹಾಗಾಗಿ ರೈತಾಪಿಗಳು ಕೂಡಲೇ ಎಚ್ಚೆತ್ತುಕೊಂಡು ಅದರ ಉಪಶಮನಕ್ಕೆ ಮುಂದಾಗಬೇಕೆಂದು ತಾಲೂಕು ಕೃಷಿ ಸಹಾಯಕ ನಿರ್ದೇಶಕಿ ಬಿ.ಪೂಜಾ ತಾಲೂಕಿನ ರೈತಾಪಿಗಳಿಗೆ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ಕೆಂಪು ಮೂತಿ ಹುಳದ ಕಾಟದಿಂದ ತಾಲೂಕಿನ ರೈತರ ಜೀವನಾಡಿಯಾಗಿರುವ ಕಲ್ಪವೃಕ್ಷಕ್ಕೆ ಸಂಚಕಾರ ಬಂದೊದಗಿದೆ. ಹಾಗಾಗಿ ರೈತಾಪಿಗಳು ಕೂಡಲೇ ಎಚ್ಚೆತ್ತುಕೊಂಡು ಅದರ ಉಪಶಮನಕ್ಕೆ ಮುಂದಾಗಬೇಕೆಂದು ತಾಲೂಕು ಕೃಷಿ ಸಹಾಯಕ ನಿರ್ದೇಶಕಿ ಬಿ.ಪೂಜಾ ತಾಲೂಕಿನ ರೈತಾಪಿಗಳಿಗೆ ಕರೆ ನೀಡಿದರು.

ತಾಲೂಕಿನ ಅಜ್ಜೇನಹಳ್ಳಿ – ನೀರಗುಂದ ಬಳಿಯ ಕೋಳಘಟ್ಟ ಕಾವಲ್ ನಲ್ಲಿರುವ ಎನ್.ಟಿ.ಪ್ರಸಾದ್ ರವರ ತೋಟದಲ್ಲಿ ಕೋಳಘಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ ಯ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ತೆಂಗಿನ ಮರದಲ್ಲಿ ರಸ ಸೋರುವ ರೋಗ ನಿಯಂತ್ರಣ, ಮತ್ತು ಕೀಟಭಾಧೆ ನಿರ್ವಹಣೆ ಕುರಿತು ನಡೆಸಿದ ವಿಚಾರಗೋಷ್ಠಿ ವೇಳೆ ಅವರು ಮಾತನಾಡುತ್ತಿದ್ದರು. ಇತ್ತೀಚೆಗೆ ತೆಂಗಿನ ಮರಗಳಿಗೆ ಕೆಂಪು ಮೂತಿಯ ಹುಳಗಳ ಬಾಧೆ ಹೆಚ್ಚುತ್ತಿದೆ. ಮರದ ಬುಡದಲ್ಲಿ ಸಣ್ಣ ರಂದ್ರ ತೋಡುವ ಕೆಂಪುಮೂತಿ ಹುಳ ಮರದ ಜೀವಶಕ್ತಿಯನ್ನು ಕುಂದಿಸುತ್ತದೆ. ಮರದ ಬುಡದಿಂದಲೇ ಮರವನ್ನು ಕೊರೆಯುತ್ತದೆ. ರಂದ್ರವಾಗುತ್ತಿದ್ದಂತೆ ಮರದಿಂದ ರಸ ಸೋರುವಿಕೆ ಆರಂಭವಾಗಿ ಮರ ನಿಶ್ಶಕ್ತಿ ಹೊಂದುತ್ತದೆ. ಮರದಲ್ಲಿ ರಸ ಸೋರುತ್ತಿದೆ ಎಂದು ತಿಳಿದೊಡನೇ ಇದು ಕೆಂಪು ಮೂತಿ ಹುಳುವಿನ ಕೃತ್ಯ ಎಂದು ತಿಳಿದ ಕೂಡಲೇ ಅದನ್ನು ನಿವಾರಿಸುವ ಕಾರ್ಯ ಮಾಡಬೇಕು. ಇಲ್ಲದಿದ್ದಲ್ಲಿ ತೆಂಗಿನ ಮರ ಸಂಪೂರ್ಣ ಸತ್ವ ಕಳೆದುಕೊಂಡು ಸುಳಿ ಒಣಗಿ ಬಿದ್ದು ಹೋಗುತ್ತದೆ ಎಂದು ಎಚ್ಚರಿಸಿದರು. ಪ್ರಗತಿ ಪರ ರೈತ ಎನ್. ಟಿ.ಪ್ರಸಾದ್ ಮಾತನಾಡಿ ರೈತರು ಮೊದಲು ಸೋಮಾರಿತನವನ್ನು ಬಿಡಬೇಕು. ರೈತರಿಗೆ ವ್ಯವಸಾಯವಿಲ್ಲದೇ ಬೇರೆ ಉದ್ಯೋಗವಿಲ್ಲ. ತಮ್ಮ ತೋಟದಲ್ಲಿ ರೋಗ ತಗುಲಿರುವ ಮರವನ್ನು ಆರಂಭದಲ್ಲೇ ಪತ್ತೆ ಹಚ್ಚಿ ಅದನ್ನು ಶಮನ ಮಾಡಬೇಕು. ತಪ್ಪಿದಲ್ಲಿ ಅಕ್ಕಪಕ್ಕದ ಮರಗಳಿಗೂ ಹಬ್ಬಿ ಹತ್ತಾರು ವರ್ಷಗಳಿಂದ ಬೆಳೆಸಿದ್ದ ಮರಗಳು ನಮ್ಮ ಕಣ್ಣಮುಂದೆಯೇ ಬಿದ್ದು ಹೋಗುವುದನ್ನು ಕಾಣಬೇಕಾಗುತ್ತದೆ ಎಂದು ಎಚ್ಚರಿಸಿದರು. ಪ್ರಗತಿ ಪರ ರೈತ ನಾಗರಾಜು ಮಾತನಾಡಿ ನಾವು ಮಣ್ಣಿನ ಸತ್ವವನ್ನು ಅರಿಯದೇ ಮನಸ್ಸಿಗೆ ಬಂದ ಹಾಗೇ ಗೊಬ್ಬರಗಳನ್ನು ಹಾಕುತ್ತಿದ್ದೇವೆ. ಒಂದೆಡೆ ಅನವಶ್ಯಕವಾಗಿ ಭೂಮಿಗೆ ರಾಸಾಯನಿಕವನ್ನು ಹಾಕಿ ಮಣ್ಣಿನ ಸತ್ವವನ್ನು ಹಾಳು ಮಾಡುತ್ತಿದ್ದೇವೆ. ಜೊತೆಗೆ ಹಣವೂ ಹಾಳಾಗುತ್ತಿದೆ. ಹಾಗಾಗಿ ಮೊದಲು ಮಣ್ಣಿನ ಪರೀಕ್ಷೆ ಮಾಡಿಸಬೇಕು. ಆ ಮಣ್ಣಿಗೆ ಯಾವ ಬೆಳೆ ಅನುಕೂಲವಾಗಲಿದೆ. ಎಷ್ಟು ಪ್ರಮಾಣದಲ್ಲಿ ಗೊಬ್ಬರವನ್ನು ಹಾಕಬೇಕೆಂದು ಅರಿಯಬೇಕೆಂದರು.

ಕೋಳಘಟ್ಟ ಪ್ರಾಥಮಿಕ ಕೃಷಿ ಪತ್ರಿನ ಸಹಕಾರ ಸಂಘದ ಅಧ್ಯಕ್ಷ ವೀರೇಂದ್ರ ಪಾಟೀಲ್ ಮಾತನಾಡಿ ಸಹಕಾರ ಸಂಘಗಳು ಕೇವಲ ಹಣಕಾಸಿನ ವಹಿವಾಟಿಗೆ ಮಾತ್ರ ಸೀಮಿತವಾಗಬಾರದು. ರೈತರ ಜೀವನಾಡಿಯಾಗಿರುವ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಮಾಹಿತಿಯನ್ನು ಆಗಾಗ್ಗೆ ನಮ್ಮ ರೈತರಿಗೆ ನೀಡಿದಲ್ಲಿ ರೈತರು ವೈಜ್ಞಾನಿಕವಾಗಿ ಕೃಷಿ ಮಾಡಲು ಸಾಧ್ಯವಾಗಲಿದೆ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಕೊನೆಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಕೆ.ಎಸ್.ನವೀನ್ ಕುಮಾರ್ ರೈತರಿಗೆ ವಿವಿಧ ಬೆಳೆಗಳ ಬಗ್ಗೆ ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದಲ್ಲಿ ವಿಜ್ಞಾನಿ ಮನೋಜ್, ತೋಟಗಾರಿಕಾ ಇಲಾಖಾ ಸಿಬ್ಬಂದಿಗಳಾದ ವಿಕ್ರಮ್, ಜಯಕೀರ್ತಿ, ಮಧು, ಗೋಪಾಲ್, ಪಿಎಸಿಎಸ್ ನ ಉಪಾಧ್ಯಕ್ಷೆ ಗೌರಮ್ಮ ಬ್ಯಾಟರಂಗಪ್ಪ, ನಿರ್ದೇಶಕರಾದ ಯೋಗಾನಂದ್, ಕಾಂತರಾಜು. ರವಿಕುಮಾರ್, ಕುಮಾರಸ್ವಾಮಿ, ಶಶಿಧರ್, ಶಿವರಾಜು, ಲಕ್ಷ್ಮಣ ಕುಮಾರ್, ವೆಂಕಟರಾಮಯ್ಯ, ಕೋಮಲ ಮಧುಕುಮಾರ್, ಪಂಚಾಕ್ಷರಿ, ಕಿರಣ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ವೀರೇಂದ್ರ ಪಾಟೀಲ್ ಸ್ವಾಗತಿಸಿದರು, ವಿಕ್ರಮ್ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯೋಗಾನಂದಗೆ ಯುವ ವಿಜ್ಞಾನ ಪ್ರಶಸ್ತಿ ಪ್ರದಾನ
ಆರೈಕೆದಾರರಿಗೆ ಕಾಸಿಲ್ಲದೇ ಮುಚ್ಚಿದ ಕೂಸಿನ ಮನೆ!