ಜಲಮಂಡಳಿ ಅಧ್ಯಕ್ಷರಿಗೆ ನೋಟಿಸ್‌ ನೀಡಲು ರೆಡ್ಡಿ ಸೂಚನೆ

KannadaprabhaNewsNetwork |  
Published : Sep 01, 2026, 04:30 AM ISTUpdated : Sep 01, 2026, 04:47 AM IST
BWSSB

ಸಾರಾಂಶ

ಬೆಂಗಳೂರು ಜಲಮಂಡಳಿ ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ವಹಣಾ ಘಟಕಗಳ ಅಸಮರ್ಪಕ ನಿರ್ವಹಣೆಗಾಗಿ ಜಲಮಂಡಳಿ ಅಧ್ಯಕ್ಷರಿಗೆ ಹಾಗೂ ಎಸ್‌ಟಿಪಿ ಕಾರ್ಯನಿರ್ವಹಿಸದ ಅಪಾರ್ಟ್‌ಮೆಂಟ್‌ಗಳ ಸಂಘಗಳಿಗೆ ನೋಟಿಸ್‌ ನೀಡುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಸೂಚನೆ ನೀಡಿದರು.

ಬೆಂಗಳೂರು : ಬೆಂಗಳೂರು ಜಲಮಂಡಳಿ ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ವಹಣಾ ಘಟಕಗಳ ಅಸಮರ್ಪಕ ನಿರ್ವಹಣೆಗಾಗಿ ಜಲಮಂಡಳಿ ಅಧ್ಯಕ್ಷರಿಗೆ ಹಾಗೂ ಎಸ್‌ಟಿಪಿ ಕಾರ್ಯನಿರ್ವಹಿಸದ ಅಪಾರ್ಟ್‌ಮೆಂಟ್‌ಗಳ ಸಂಘಗಳಿಗೆ ನೋಟಿಸ್‌ ನೀಡುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಸೂಚನೆ ನೀಡಿದರು.

ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಗತಿ ಪರಿಶೀಲನಾ ಸಭೆ ನಡೆಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಮಲಿಂಗಾ ರೆಡ್ಡಿ, ಬೆಂಗಳೂರು ಜಲಮಂಡಳಿ ವ್ಯಾಪ್ತಿಯಲ್ಲಿ 1800 ಎಂಎಲ್‌ಡಿ ತ್ಯಾಜ್ಯ ನೀರು ಹೊರ ಹೋಗುತ್ತಿದ್ದು, ಅದರಲ್ಲಿ 1200 ಎಂಎಲ್‌ಡಿ ತ್ಯಾಜ್ಯ ನೀರನ್ನು ಸಂಸ್ಕರಿಸಲಾಗುತ್ತಿದೆ. ಅದರಲ್ಲಿಯೂ ಜಲಮಂಡಳಿ ನಿರ್ವಹಣೆಯಲ್ಲಿನ ತ್ಯಾಜ್ಯ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ)ಗಳಲ್ಲಿ ಕೆಲವು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ ಸಮರ್ಪಕವಾಗಿ ಕಾರ್ಯ ನಿರ್ವಹಿಸದ ಹಾಗೂ ನಿರ್ವಹಣೆ ಮಾಡದಿರುವ ಎಸ್‌ಟಿಪಿ ಕುರಿತು ಜಲಮಂಡಳಿ ಅಧ್ಯಕ್ಷರಿಗೆ ನೋಟಿಸ್‌ ಜಾರಿಗೊಳಿಸಬೇಕು. ಎಸ್‌ಟಿಪಿಗಳನ್ನು ಕೂಡಲೇ ದುರಸ್ತಿ ಮಾಡಲು ಸೂಚಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.

ಅಪಾರ್ಟ್‌ಮೆಂಟ್‌ಗಳಲ್ಲಿ ಅಳವಡಿಸಿರುವ ಎಸ್‌ಟಿಪಿಗಳನ್ನು ಪರಿಶೀಲಿಸಬೇಕು

ಅಪಾರ್ಟ್‌ಮೆಂಟ್‌ಗಳಲ್ಲಿ ಅಳವಡಿಸಿರುವ ಎಸ್‌ಟಿಪಿಗಳನ್ನು ಪರಿಶೀಲಿಸಬೇಕು. ಕಾರ್ಯನಿರ್ವಹಿಸದ ಎಸ್‌ಟಿಪಿಗಳ ಅಪಾರ್ಟ್‌ಮೆಂಟ್‌ಗಳ ಸಂಘದವರಿಗೆ ನೋಟಿಸ್‌ ನೀಡಿ, 15 ದಿನಗಳೊಳಗೆ ಘಟಕ ದುರಸ್ಥಿ ಮಾಡುವಂತೆ ನಿರ್ದೇಶಿಸಬೇಕು. ಅದರೊಂದಿಗೆ ರಾಷ್ಟ್ರೀಯ ನದಿ ಸಂರಕ್ಷಣಾ ಯೋನೆ ವ್ಯಾಪ್ತಿಯ ನದಿಗಳು ಮತ್ತು ನದಿ ತೀರ ಪ್ರದೇಶಗಳಲ್ಲಿನ ಕೈಗಾರಿಕೆಗಳನ್ನು ಸಮಗ್ರವಾಗಿ ಪರಿಶೀಲಿಸಬೇಕು. ಸಮರ್ಪಕವಾಗಿ ಸಂಸ್ಕರಿಸದೇ ತ್ಯಾಜ್ಯ ನೀರನ್ನು ನದಿ, ರಾಜಕಾಲುವೆ ಅಥವಾ ಇತರ ಜಲಮೂಲಗಳಿಗೆ ಹೊರಬಿಡುವ ಕೈಗಾರಿಕೆಗಳನ್ನು ಗುರುತಿಸಿ ನೋಟಿಸ್‌ ಜಾರಿಗೊಳಿಸಬೇಕು. ನಿಗದಿತ ಅವಧಿಯಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ಕೈಗೊಳ್ಳದ ಕೈಗಾರಿಕೆಗಳಿಗೆ ಬೀಗ್ರಮುದ್ರೆ ಹಾಕುವುದು ಮತ್ತು ವಿದ್ಯುತ್‌ ಸಂಪರ್ಕ ಕಡಿತ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಲಾಗಿದೆ ಎಂದು ವಿವರಿಸಿದರು.

ಪಿಒಪಿ ಮೂರ್ತಿ ತಯಾರಿಕೆ, ಮಾರಾಟಕ್ಕೆ ಪ್ರಕರಣ ದಾಖಲು:

ಗಣೇಶ ಹಬ್ಬಕ್ಕೆ ಪ್ಲಾಸ್ಟರ್‌ ಆಫ್‌ ಪ್ಯಾರೀಸ್‌ ಗಣೇಶ ಮೂರ್ತಿಗಳ ಹಾವಳಿ ತಡೆಯಲು ಪಿಒಪಿ ಗಣೇಶ ಮೂರ್ತಿಗಳ ತಯಾರಿಕೆ, ಸಾಗಾಟ ಮತ್ತು ಮಾರಾಟ ತಡೆಗೆ ವಿಶೇಷ ತಪಾಸಣೆ ನಡೆಸಲಾಗುತ್ತದೆ. ಪಿಒಪಿ ಮೂರ್ತಿಗಳಿಗೆ ಸಂಪೂರ್ಣ ನಿಷೇಧ ಹೇರಲಾಗಿದೆ. ಒಂದು ವೇಳೆ ಪಿಒಪಿ ಮೂರ್ತಿಗಳನ್ನು ತಯಾರಿಸಿ, ಮಾರಾಟ ಮಾಡಿದರೆ ಅವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುವುದು ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.

ಒಂದು ಬಾರಿ ಬಳಕೆಯ ಪ್ಲಾಸ್ಟಿಕ್‌ ಉತ್ಪನ್ನಗಳನ್ನು ಉತ್ಪಾದಿಸುವ ಘಟಕಗಳನ್ನು ಪತ್ತೆ ಹೆಚ್ಚಲು ಘಟಕಗಳ ಪಟ್ಟಿ ಸಿದ್ಧಪಡಿಸಿ, ಉತ್ಪಾದನೆಯನ್ನು ತಕ್ಷಣ ನಿಲ್ಲಿಸುವಂತೆ ನೋಟಿಸ್‌ ನೀಡಲಾಗುವುದು. ಆದೇಶ ಪಾಲಿಸದ ಘಟಕಗಳ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುತ್ತದೆ. ಪ್ಲಾಸ್ಟಿಕ್‌ ತಯಾರಿಕಾ ಘಟಕಗಳನ್ನು ಪತ್ತೆ ಮಾಡಲು ಅಗತ್ಯವಿರುವ ವಿದ್ಯುತ್‌ ಸಂಪರ್ಕ ವಿವರವನ್ನು ಬೆಸ್ಕಾಂನಿಂದ ಪಡೆಯಬೇಕು. ಏಕಬಳಕೆ ಪ್ಲಾಸ್ಟಿಕ್‌ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಪೊಲೀಸ್‌ ಇಲಾಖೆಯ ಸಹಕಾರ ಕೋರಿ ಪೊಲೀಸ್‌ ಮಹಾನಿರ್ದೇಶಕರಿಗೆ ಪತ್ರ ಬರೆಯಲಾಗುವುದು ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಮೆಜೆಸ್ಟಿಕ್‌ ಬಸ್‌ ನಿಲ್ದಾಣಗಳಿಗೆ ಸಾರಿಗೆಸಚಿವರ ಅನಿರೀಕ್ಷಿತ ಭೇಟಿ, ಪರಿಶೀಲನೆ
ರೌಡಿಗಳ ಜತೆ ಪೊಲೀಸರ ಸ್ನೇಹ ಸಹಿಸಲ್ಲ: ಪ್ರಿಯಾಂಕ್