ರೆಡ್ಡಿ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಜಿಲ್ಲೆಯ ಅಭಿವೃದ್ಧಿಗೆ ಬಳಸಲಿ: ವಿ.ಎಸ್.ಉಗ್ರಪ್ಪ

KannadaprabhaNewsNetwork | Updated : May 16 2025, 01:07 PM IST
Follow Us

ಸಾರಾಂಶ

ಅಕ್ರಮ ಗಣಿಗಾರಿಕೆ ಮಾಡಿ ಸಾವಿರಾರು ಕೋಟಿ ಮೆಟ್ರಿಕ್ ಟನ್ ಅದಿರು ಕದ್ದು ವಿದೇಶಕ್ಕೆ ಮಾರಾಟ ಮಾಡಿರುವ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಸೇರಿದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಬಳ್ಳಾರಿ-ವಿಜಯನಗರ ಜಿಲ್ಲೆಗಳ ಅಭಿವೃದ್ಧಿಗೆ ಬಳಸಬೇಕು.

 ಬಳ್ಳಾರಿ : ಅಕ್ರಮ ಗಣಿಗಾರಿಕೆ ಮಾಡಿ ಸಾವಿರಾರು ಕೋಟಿ ಮೆಟ್ರಿಕ್ ಟನ್ ಅದಿರು ಕದ್ದು ವಿದೇಶಕ್ಕೆ ಮಾರಾಟ ಮಾಡಿರುವ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಸೇರಿದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಬಳ್ಳಾರಿ-ವಿಜಯನಗರ ಜಿಲ್ಲೆಗಳ ಅಭಿವೃದ್ಧಿಗೆ ಬಳಸಬೇಕು ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಇಲ್ಲಿನ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಾರ್ದನ ರೆಡ್ಡಿ ಅಧಿಕಾರ ದುರುಪಯೋಗ ಮಾಡಿಕೊಂಡು ಪ್ರಾಕೃತಿಕ ಸಂಪತ್ತನ್ನು ಲೂಟಿ ಮಾಡಿದ್ದಾರೆ. ನ್ಯಾಯಾಲಯವೇ ಹೇಳಿರುವಂತೆ ರೆಡ್ಡಿ ₹884 ಕೋಟಿ ಮೌಲ್ಯದಷ್ಟು 65,82,341 ಟನ್ ಅದಿರು ಕದ್ದು ವಿದೇಶಕ್ಕೆ ಮಾರಿಕೊಂಡಿದ್ದಾನೆ. ನ್ಯಾಯಾಲಯವೇ ರೆಡ್ಡಿ ಅಕ್ರಮವನ್ನು ಬಟಾಬಯಲು ಮಾಡಿರುವುದರಿಂದ ಈತನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಉಭಯ ಜಿಲ್ಲೆಗಳ ಅಭಿವೃದ್ಧಿಗೆ ಬಳಕೆ ಮಾಡಬೇಕು. ಈ ದಿಸೆಯಲ್ಲಿ ರಾಜ್ಯ ಸರ್ಕಾರ ಕೂಡಲೇ ಸೂಕ್ತ ನಿಲುವು ತೆಗೆದುಕೊಳ್ಳಬೇಕು. ಈ ಜಿಲ್ಲೆಯ ಶಾಸಕರು, ಸಚಿವರು ಹಾಗೂ ಸಂಸದರು ಸಹ ಈ ಬಗ್ಗೆ ಧ್ವನಿ ಎತ್ತಬೇಕು ಎಂದು ಮನವಿ ಮಾಡಿದರು.

ಅಧಿಕಾರ ಇದ್ದಾಗ ಅಹಂ ತೋರಿಸಿ ಲೂಟಿಗಿಳಿಯುವ ಪ್ರವೃತ್ತಿ ಬೆಳಸಿಕೊಂಡರೆ ಇಂದಲ್ಲ ನಾಳೆ ಶಿಕ್ಷೆ ತಪ್ಪಿದ್ದಲ್ಲ ಎಂಬ ಸಂದೇಶ ಜನಾರ್ದನ ರೆಡ್ಡಿ ಪ್ರಕರಣದಿಂದ ಪ್ರತಿಯೊಬ್ಬರಿಗೂ ರವಾನೆಯಾಗಿದೆ. ರೆಡ್ಡಿ ಅಧಿಕಾರ ಅಹಂನಿಂದ ಕರ್ನಾಟಕಾಂಧ್ರ ಗಡಿಯಲ್ಲಿದ್ದ ಬ್ರಿಟಿಷರ ಕಾಲದಲ್ಲಿನ ಟ್ರೈಜಂಕ್ಷನ್ ಪಾಯಿಂಟ್ ಸ್ಫೋಟಿಸಿದರು. ಅದಿರು ಲೂಟಿಗಾಗಿ ತನಗಿಷ್ಟ ಬಂದಂತೆ ರೆಡ್ಡಿ ನಡೆದುಕೊಂಡರು. ರೆಡ್ಡಿ ಆ್ಯಂಡ್ ಟೀಮ್ ನಡೆಸಿದ ಲೂಟಿಕೋರತನಕ್ಕೆ ಅವರಷ್ಟೇ ಕಾರಣರಲ್ಲ. ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಲೂಟಿ ವೇಳೆಯಲ್ಲಿ ಸೇವೆಯಲ್ಲಿದ್ದ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಅರಣ್ಯ ಅಧಿಕಾರಿಗಳು ಸಹ ಜವಾಬ್ದಾರರಾಗಿದ್ದಾರೆ. ಅವರ ಮೇಲೂ ಕ್ರಮಗಳಾಗಬೇಕು. ಅಂದಿನ ಸಿಎಂ ಯಡಿಯೂರಪ್ಪ ಅವರು, ಜನಾರ್ದನ ರೆಡ್ಡಿ ಅಕ್ರಮ ಗಣಿಗಾರಿಕೆ ನಡೆಸುತ್ತಿಲ್ಲ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸುತ್ತಿದ್ದರು. ಇದೀಗ ನ್ಯಾಯಾಲಯವೇ ರೆಡ್ಡಿ ಮಾಡಿದ ಲೂಟಿಕೋರತನವನ್ನು ಬಟಾಬಯಲು ಮಾಡಿದೆ. ಯಡಿಯೂರಪ್ಪ ಇದಕ್ಕೆ ಏನು ಹೇಳುತ್ತಾರೆ? ಎಂದು ಉಗ್ರಪ್ಪ ಪ್ರಶ್ನಿಸಿದರು. ಯಡಿಯೂರಪ್ಪನವರ ಸಹಕಾರದಿಂದಾಗಿಯೇ ಅದಿರು ಲೂಟಿ ನಡೆದಿದೆ. ಈ ಬಗ್ಗೆಯೂ ತನಿಖೆಯಾಗಲಿ ಎಂದು ಒತ್ತಾಯಿಸಿದರು.

ಶ್ರೀರಾಮುಲು ಬಾಯಿ ಬಿಡಲಿ:

ಜನಾರ್ದನ ರೆಡ್ಡಿಯ ಮಾಜಿ ಸ್ನೇಹಿತ ಬಿ.ಶ್ರೀರಾಮುಲು ರೆಡ್ಡಿ ಮಾಡಿರುವ ಅಕ್ರಮ ಗಣಿಗಾರಿಕೆ ಕುರಿತು ಏನು ಹೇಳುತ್ತಾರೆ? ಈ ಹಿಂದೆ ರೆಡ್ಡಿಯ ಸಖ್ಯ ಬೆಳೆಸಿದ್ದ ಶ್ರೀರಾಮುಲು ತನ್ನ ಮಾಜಿ ಸ್ನೇಹಿತ ಮಾಡಿರುವ ಅದಿರು ಲೂಟಿ ಕುರಿತು ನ್ಯಾಯಾಲಯವೇ ಶಿಕ್ಷೆ ವಿಧಿಸಿದೆ. ಈಗ ಶ್ರೀರಾಮುಲು ಏನು ಹೇಳುತ್ತಾರೆ? ಯಾಕೆ ಈವರೆಗೆ ಬಾಯಿಬಿಟ್ಟಿಲ್ಲ? ಶ್ರೀರಾಮುಲು ಸಾಹೇಬರೇ ಈಗಲಾದರೂ ಬಾಯಿಬಿಡಿ ಎಂದು ವ್ಯಂಗ್ಯವಾಡಿದರು. ಇದೇ ವೇಳೆ ಜನಾರ್ದನ ರೆಡ್ಡಿ ಜೊತೆಗಿದ್ದ ವೇಳೆ ಅರಣ್ಯ ಅಧಿಕಾರಿ ರಾಜಶೇಖರನ್‌ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಾಣ ಬೆದರಿಕೆ ಹಾಕಿರುವ ಪ್ರಕರಣ ನೆನಪಿಸಿದ ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಈ ಎಲ್ಲವೂ ದಾಖಲಾದ ಪ್ರಕರಣಗಳೇ ಹೊರತು, ನಾನು ಉತ್ಪ್ರೇಕ್ಷೆಯಾಗಿ ಮಾತನಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಪಕ್ಷದ ಮುಖಂಡರಾದ ವೆಂಕಟೇಶ್ ಹೆಗಡೆ, ಎರಕುಲಸ್ವಾಮಿ, ಅಸುಂಡಿ ನಾಗರಾಜಗೌಡ, ಟಪಾಲ್ ಏಕಾಂಬರಂ ಸುದ್ದಿಗೋಷ್ಠಿಯಲ್ಲಿದ್ದರು.

ಪ್ರಧಾನಿ ಸೇನೆಯ ಕ್ಷಮೆಯಾಚಿಸಲಿ:

ಕರ್ನಲ್ ಸೋಫಿಯಾ ಖುರೇಷಿ ಅವರನ್ನು ಉಗ್ರರ ಸಹೋದರಿ ಎಂದು ಕರೆದಿರುವ ಮಧ್ಯಪ್ರದೇಶದ ಸಚಿವ ಕುನ್ವರ್ ಶಾ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆಗ್ರಹಿಸಿದರು.

ಭಾರತ ಸೇನೆಯ ಮುಖ್ಯಸ್ಥರ ವಿರುದ್ಧ ಬಿಜೆಪಿ ಸಚಿವರು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಅವರ ವಿರುದ್ಧ ಈವರೆಗೆ ಪ್ರಕರಣ ದಾಖಲಾಗಿಲ್ಲ. ನಾಚಿಕೆಗೆಟ್ಟ ಸರ್ಕಾರ ಆತನನ್ನು ಸಚಿವನನ್ನಾಗಿ ಮುಂದುವರಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಭಾರತ ಸೇನೆಗೆ ಅಪಮಾನವಾಗಿದ್ದು ಪ್ರಧಾನಿ ನರೇಂದ್ರ ಮೋದಿ ಅವರು ಕೂಡಲೇ ಸೇನೆಯ ಕ್ಷಮೆಯಾಚಿಸಲಿ ಎಂದು ಒತ್ತಾಯಿಸಿದರು.

ಕೈಮುಗಿದು ಬೇಡುವೆ ಸಚಿವರು, ಶಾಸಕರು ಬಾಯಿ ಬಿಡಿ:

ಜನಾರ್ದನ ರೆಡ್ಡಿ ಮಾಡಿರುವ ಅಕ್ರಮ ಗಣಿಗಾರಿಕೆ ಹಾಗೂ ರೆಡ್ಡಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಕುರಿತು ಜಿಲ್ಲೆಯ ಸಚಿವರು, ಶಾಸಕರು ಹಾಗೂ ಸಂಸದರು ಧ್ವನಿ ಎತ್ತಬೇಕು ಎಂದು ಕೈ ಮುಗಿದು ಕೇಳಿಕೊಳ್ಳುತ್ತೇನೆ. ದಯವಿಟ್ಟು ಜಿಲ್ಲೆಯ ಜನಪ್ರತಿನಿಧಿಗಳು ಬಾಯಿಬಿಡಿ ಎಂದು ವಿ.ಎಸ್. ಉಗ್ರಪ್ಪ ಸುದ್ದಿಗೋಷ್ಠಿಯಲ್ಲಿ ಕೈಮುಗಿದು ಬೇಡಿಕೊಂಡರು.

ಈ ರಾಜ್ಯದ, ಈ ನೆಲದ ಆಸ್ತಿ ಲೂಟಿಯಾಗಿದೆ. ಈ ಬಗ್ಗೆ ಈ ಜಿಲ್ಲೆಯ ಜನರೇ ಧ್ವನಿ ಎತ್ತಬೇಕು. ಜನಪ್ರತಿನಿಧಿಗಳಾದವರು ಮೊದಲು ಬಾಯಿ ತೆಗೆಯಬೇಕು. ಇದು ಎಲ್ಲರ ಜವಾಬ್ದಾರಿಯೂ ಆಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ಸಹ ತರುತ್ತೇನೆ ಎಂದರು.