ಕೊಪ್ಪಳ: ಜಿಲ್ಲೆಯಲ್ಲಿ ಹೆರಿಗೆ ಸಂದರ್ಭದಲ್ಲಿ ಉಂಟಾಗುವ ತಾಯಿ ಮತ್ತು ಶಿಶು ಮರಣ ಪ್ರಮಾಣ ದರ ಶೂನ್ಯಕ್ಕೆ ಇಳಿಸಿ ಎಂದು ಜಿಲ್ಲಾಧಿಕಾರಿ ಡಾ.ಸುರೇಶ ಬಿ. ಇಟ್ನಾಳ್ ಹೇಳಿದರು.
ಮಗು ಜನನದ ನಂತರ ಸಂಪೂರ್ಣ ಆರೋಗ್ಯವಾಗಿದ್ದಾಗಲೂ ಜನನದ ಒಂದು ಅಥವಾ ಎರಡು ದಿನಗಳ ನಂತರ ಮಗು ಸಾವನ್ನಪುತ್ತದೆ. ಇದಕ್ಕೆ ಕಾರಣಗಳಿರಲೇಬೇಕು. ವೈದ್ಯಕೀಯ ಕಾರಣ ಏನೇ ಇದ್ದರೂ ಅಗತ್ಯ ಸಮಯದಲ್ಲಿ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಮಗುವಿನ ಪ್ರಾಣ ಉಳಿಸಬಹುದು. ಮಗುವಿನ ಜನನದ ನಂತರ ಕಂಡು ಬರುವ ಆರೋಗ್ಯ ಸಮಸ್ಯೆಗಳಿಗೆ ಕುಟುಂಬದವರು ಕಡ್ಡಾಯವಾಗಿ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ನೀಡಬೇಕು. ಮನೆ ವೈದ್ಯ ಅಥವಾ ಮನೆ ಮದ್ದು ನೀಡುವ ಸಾಹಸ ಮಾಡಬಾರದು. ಈ ಬಗ್ಗೆ ಹೆರಿಗೆಯ ನಂತರ ಮಹಿಳೆಯ ಕುಟುಂಬದವರಿಗೆ ವೈದ್ಯರು ತಿಳಿವಳಿಕೆ ನೀಡಬೇಕು. ಜನನ ದಿನದಿಂದ ನಿಯಮಾನುಸಾರ ಮಗುವಿಗೆ ನಿಗದಿತ ಚುಚ್ಚುಮದ್ದು, ಲಸಿಕೆ ಕಡ್ಡಾಯವಾಗಿ ಹಾಕಿಸಬೇಕು. ಈ ಬಗ್ಗೆ ತಾಯಿ ಕಾರ್ಡ್‌ನಲ್ಲಿ ದಾಖಲಿಸಬೇಕು ಎಂದು ವೈದ್ಯರಿಗೆ ಸೂಚಿಸಿದರು.
ಪಕ್ಕದ ಜಿಲ್ಲೆಗಳಿಂದ ಕೊನೆಯ ಹಂತದಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಾಗಿ,ವೈದ್ಯರ ಪ್ರಯತ್ನದ ನಂತರವೂ ಹೆರಿಗೆ ಸಂದರ್ಭ ಮಹಿಳೆ ಮರಣ ಹೊಂದಿದರೂ ಅದು ಜಿಲ್ಲೆಯ ವ್ಯಾಪ್ತಿಗೆ ಬರುತ್ತದೆ. ಆದ್ದರಿಂದ ಅನ್ಯ ಜಿಲ್ಲೆಗಳಿಂದ ಇಲ್ಲಿಗೆ ಬರುವ ಗರ್ಭಿಣಿಯ ಆರೋಗ್ಯ ಸಂಬಂಧಿತ ವೈದ್ಯಕೀಯ ದಾಖಲೆ ಮತ್ತು ಜಿಲ್ಲಾಸ್ಪತ್ರೆಗೆ ಶಿಫಾರಸ್ಸು ಮಾಡುವ ವೈದ್ಯರು ಈ ಬಗ್ಗೆ ಕರೆ ಮೂಲಕ ಇಲ್ಲಿನ ವೈದ್ಯರೊಂದಿಗೆ ಮಹಿಳೆಯ ಆರೋಗ್ಯ ತುರ್ತು ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಬೇಕು. ಈ ಬಗ್ಗೆ ಪಕ್ಕದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿ, ವೈದ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಬೇಕು ಹಾಗೂ ಸೂಕ್ತ ಮಾಹಿತಿ ನೀಡಬೇಕು.ಯಾವುದೇ ಜಿಲ್ಲೆಯ ಮಹಿಳೆಯಾದರೂ ಜೀವ ಉಳಿಸುವುದು ವೈದ್ಯರ ಮೊದಲ ಆದ್ಯತೆಯಾಗಬೇಕು. ಈ ಮೂಲಕ ತಾಯಿ ಮತ್ತು ಶಿಶುವಿನ ಮರಣ ಪ್ರಮಾಣ ಶೂನ್ಯಕ್ಕೆ ಇಳಿಸಬೇಕು ಎಂದು ಸೂಚನೆ ನೀಡಿದರು.ಇನ್ನು ಸ್ವಲ್ಪ ದಿನಗಳಲ್ಲಿ ಮುಂಗಾರು ಆರಂಭವಾಗುತ್ತಿದ್ದು, ಮಳೆಗಾಲದಲ್ಲಿ ಹರಡುವ ಸಾಂಕ್ರಾಮಿಕ ರೋಗಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ.ಮಲೇರಿಯಾ, ಡೆಂಘೀ, ಚಿಕುನ್ ಗುನ್ಯಾದಂತಹ ಕಾಯಿಲೆಗಳಿಗೆ ಕಾರಣವಾಗುವ ಸೊಳ್ಳೆ ನಿರ್ಮೂಲನೆಗೆ ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ಅಗತ್ಯ ಕ್ರಮವಹಿಸಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ, ಹಾವು ಕಡಿತ ಸಂದರ್ಭ ಕಡ್ಡಾಯವಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವಂತೆ ತಿಳಿವಳಿಕೆ ನೀಡಿ ನಾಯಿ ಕಡಿತಕ್ಕೂ ನಿಗದಿತ ಲಸಿಕೆ ಕಡ್ಡಾಯವಾಗಿ ಪಡೆಯಬೇಕು. ಇದರೊಂದಿಗೆ ಆರೋಗ್ಯ ರಕ್ಷಣೆಗೆ ಸಂಬಂಧಿಸಿದಂತೆ ಎಲ್ಲ ಅಗತ್ಯ ಮುನ್ನಚ್ಚರಿಕೆ ವಹಿಸಲು ಜಾಗೃತಿ ಕಾರ್ಯಕ್ರಗಳ ಮೂಲಕ ಜನರಲ್ಲಿ ಅರಿವು ಮೂಡಿಸಿ ಎಂದು ಸೂಚಿಸಿದರು.