ಗೃಹಬಳಕೆ ವಸ್ತುಗಳ ದರ ಕಡಿಮೆ ಮಾಡಿ ಪುಣ್ಯಕಟ್ಟಿಕೊಳ್ಳಿ : ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ

KannadaprabhaNewsNetwork | Updated : Mar 30 2025, 08:53 AM IST

ಸಾರಾಂಶ

ಚಿಕ್ಕಮಗಳೂರು, ರಾಜ್ಯಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಎಲ್ಲಾ ದರಗಳು ಹೆಚ್ಚಾಗುತ್ತಿವೆಯೇ ಹೊರತು ಇಳಿಮುಖ ಕಂಡೇ ಇಲ್ಲ. ಹಾಲಿನ ದರ, ವಿದ್ಯುತ್ ಕನಿಷ್ಠ ಶುಲ್ಕ ಹೆಚ್ಚಳವಾಗಿದೆ. ದರ ಏರಿಸಿ ಪಾಪ ಕಟ್ಟಿಕೊಳ್ಳುವುದಕ್ಕಿಂತ ಇಳಿಸಿ ಪುಣ್ಯ ಕಟ್ಟಿಕೊಳ್ಳಿ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.

 ಚಿಕ್ಕಮಗಳೂರು :  ರಾಜ್ಯಸರ್ಕಾರ ಅಸ್ತಿತ್ವ ಕ್ಕೆ ಬಂದ ನಂತರ ಎಲ್ಲಾ ದರಗಳು ಹೆಚ್ಚಾಗುತ್ತಿವೆಯೇ ಹೊರತು ಇಳಿಮುಖ ಕಂಡೇ ಇಲ್ಲ. ಹಾಲಿನ ದರ, ವಿದ್ಯುತ್ ಕನಿಷ್ಠ ಶುಲ್ಕ ಹೆಚ್ಚಳವಾಗಿದೆ. 

ದರ ಏರಿಸಿ ಪಾಪ ಕಟ್ಟಿಕೊಳ್ಳುವುದಕ್ಕಿಂತ ಇಳಿಸಿ ಪುಣ್ಯ ಕಟ್ಟಿಕೊಳ್ಳಿ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.ತಾಲೂಕು ಅತ್ತಿಗುಂಡಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ ಸುಮಾರು ₹1 ಕೋಟಿ ವೆಚ್ಚದಲ್ಲಿ ಆಡಳಿತ ಕಟ್ಟಡದ ನಿರ್ಮಾಣದ ಕಾರ್ಯಕ್ಕೆ ಮುಂದಾಗಿರುವುದನ್ನು ಶ್ಲಾಘಿಸಿದ ಅವರು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿಪ್ರಕಾಶ್ ₹5  ಲಕ್ಷ ಅನುದಾನವನ್ನು ಎರಡು ಕಂತುಗಳಲ್ಲಿ ಕೊಡುವ ಭರವಸೆ ನೀಡಿದ್ದಾರೆ ಎಂದರು.

ಈ ಕಟ್ಟಡ ಜನರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಆಡಳಿತ ಕಚೇರಿ ಮತ್ತು ಬ್ಯಾಂಕಿನ ವಹಿವಾಟುಗಳನ್ನು ಮುಂದುವರಿಸಲು ಉತ್ತಮ ರೀತಿಯಲ್ಲಿ ಕಾಮಗಾರಿ ಕೈಗೊಂಡು ಗುಣಮಟ್ಟದ ಕಟ್ಟಡ ನಿರ್ಮಾಣವಾಗಲಿ ಎಂದು ಶುಭಹಾರೈಸಿದರು. ಐಡಿ ಪೀಠ ಪಂಚಾಯಿತಿಗೆ ನೀಡಿದ್ದ ಅನುದಾನ ವಾಪಾಸ್ ಪಡೆದಿರುವುದರಿಂದ ಕಾಮಗಾರಿ ಸ್ಥಗಿತವಾಗಿದೆ. ಇದು ಕಾರ್ಯ ರೂಪಕ್ಕೆ ಬಂದಿದ್ದರೆ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ಸಿಗುತ್ತಿತ್ತು. ಪ್ರವಾಸೋದ್ಯಮದಿಂದಲೇ ಈ ಭಾಗದಲ್ಲಿ ನೂರಾರು ಜನರು ಬದುಕು ಕಟ್ಟಿಕೊಳ್ಳಲು ನೆರವಾಗಿದೆ. 

2019 - 20 ರಲ್ಲಿ ಹಾಕಿದ್ದ ಈ ಅನುದಾನ ವಾಪಾಸ್ ಹೋಗಿರುವುದನ್ನು ಮರಳಿ ನೀಡಬೇಕೆಂದು ಆಗ್ರಹಿಸಿದರು.ವಿದ್ಯುತ್ ಕಣ್ಣಾಮುಚ್ಚಾಲೆ ಬಗ್ಗೆ ಸಾರ್ವಜನಿಕರು ದೂರು ಸಲ್ಲಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವರೇ ಇಂಧನ ಸಚಿವರಾಗಿರು ವುದರಿಂದ ಬೇಸಿಗೆಯಲ್ಲಿ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಬೇಕು ಎಂದು ಒತ್ತಾಯಿಸಿದ ಅವರು, ಮಳೆಗಾಲದಲ್ಲಿ ಮರ ಬಿದ್ದಿದೆ ಎಂಬ ಕಾರಣ, ಬೇಸಿಗೆಯಲ್ಲಿ ಓಲ್ಟೇಜ್, ಪವರ್ ಸಾಕಾಗುವುದಿಲ್ಲ ಎಂಬ ಸಬೂಬು ಹೇಳಲಾಗುತ್ತಿದೆ. 

ಆದರೆ ವಿದ್ಯುತ್ ಬಿಲ್ ದರ ಮಾತ್ರ ಏರಿಕೆಯಾಗುತ್ತಿದೆ ಎಂದು ಆರೋಪಿಸಿದರು.ಈ ಭಾಗಕ್ಕೆ ಸುಸಜ್ಜಿತ ಬಸ್ ಕೊಡಬೇಕ. ತಳ್ಳುಮಾಡಲ್ ಬಸ್ ನೀಡಿರುವುದು ಜನರ ಬದುಕಿನ ಜೊತೆ ಚೆಲ್ಲಾಟ ವಾಡಿದಂತಾಗುತ್ತದೆ. ಅತ್ತಿಗುಂಡಿ ಶಾಲೆ ಶೌಚಾಲಯ ದುರಸ್ತಿಯನ್ನು ಮೇ ಅಂತ್ಯದೊಳಗೆ ಪೂರ್ಣಗೊಳಿಸಬೇಕೆಂದು ಒತ್ತಾಯಿಸಿದರು. ಜಿಪಂ ಮಾಜಿ ಸದಸ್ಯೆ ಜೆಸಂತ ಅನಿಲ್‌ಕುಮಾರ್ ಮಾತನಾಡಿ, ಕೃಷಿಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಇಂದು ಶಂಕುಸ್ಥಾಪನೆ ನೆರವೇರಿಸುವ ಮೂಲಕ ಬಹು ವರ್ಷಗಳ ಕನಸು ನನಸಾಗಿದೆ ಎಂದು ಹೇಳಿದರು.

ಈ ಕೃಷಿಪತ್ತಿನ ಸಹಕಾರ ಸಂಘಕ್ಕೆ ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷರು, ಪದಾಧಿಕಾರಿಗಳು ನೂತನ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಿ ಉತ್ತಮ ಗುಣಮಟ್ಟದ ಕಟ್ಟಡ ನಿರ್ಮಾಣಕ್ಕೆ ಕೈಜೋಡಿಸಬೇಕೆಂದು ಸಲಹೆ ನೀಡಿದರು.ಈ ಸಂದರ್ಭದಲ್ಲಿ ಜಯ ಕರ್ನಾಟಕ ಸಂಘದ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್, ಮುಖಂಡ ಮಂಜು, ಸಂಘದ ಅಧ್ಯಕ್ಷ ಚಂಗಪ್ಪ ಬಿ.ಆರ್, ಉಪಾಧ್ಯಕ್ಷ ಸೈಯದ್ ಮುಕ್ತಿಯಾರ್ ಪಾಷ, ನಿರ್ದೇಶಕರಾದ ಶಿವಕುಮಾರ್, ಧರ್ಮೇಶ್, ಹರೀಶ್, ಭಾಗ್ಯ, ಕಮಲ, ಶಾಂತಕುಮಾರ್, ಈಶ್ವರ, ಜಗದೀಶ್, ಅಣ್ಣು, ಅಬೀಬುಲ್ಲಾಖಾನ್ ಮತ್ತಿತರರು ಉಪಸ್ಥಿತರಿದ್ದರು.

Share this article