ಕನ್ನಡಪ್ರಭ ವಾರ್ತೆ ಬೆಳಗಾವಿ
ಪತ್ರಿಕೋದ್ಯಮ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿವೆ ನಿಜ. ಆದರೆ, ವಿಶೇಷ ಲೇಖನಗಳನ್ನು ಬರೆಯುವುದು ಕಡಿಮೆಯಾಗಿದೆ, ಓದುಗರ ಸಂಖ್ಯೆ ಕೂಡ ಕಡಿಮೆಯಾಗಿದೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಕಳವಳ ವ್ಯಕ್ತಪಡಿಸಿದರು.ಇಲ್ಲಿನ ಶಿವಬಸವ ನಗರದ ಎಸ್.ಜಿ.ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಶಿವಕುಮಾರ ಸಂಬರಗಿಮಠ ಸಭಾಭವನದಲ್ಲಿ ಶನಿವಾರ ಬೆಳಗಾವಿ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಪತ್ರಕರ್ತರ ಮಕ್ಕಳ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವೈದ್ಯರ ಮಗ ವೈದ್ಯ ಆಗುವುದು ಸಹಜ. ಆದರೆ, ರೈತರ ಮಕ್ಕಳು ರೈತನಾಗುವುದಿಲ್ಲ. ಪತ್ರಕರ್ತರ ಮಕ್ಕಳು ಪತ್ರಕರ್ತನಾಗುವುದಿಲ್ಲ. ಆದರೆ, ಈ ಪರಿಕಲ್ಪನೆಯಿಂದ ಎಲ್ಲರೂ ಹೊರಬರಬೇಕು ಎಂದರು.
ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಮಾತನಾಡಿ, ಹಿರಿಯರಿಂದ ಪ್ರತಿಭಾ ಪುರಸ್ಕಾರ ಕೊಟ್ಟು ಗೌರವಿಸುವ ಮೂಲಕ ನಿಮ್ಮ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ. ಭವಿಷ್ಯದ ದಿನಗಳಲ್ಲಿ ನಿಮ್ಮ ತಂದೆ-ತಾಯಿ ಸೇವೆ ಜೊತೆಗೆ ಸಮಾಜದ ಸೇವೆ ಮಾಡಬೇಕು. ಬರುವ ದಿನಗಳಲ್ಲಿ ಈ ಪುರಸ್ಕಾರ ನಂತರ ಕಾಲೇಜಿಗೆ ಹೋದ ನಂತರ ಹೊಸ, ಗೆಳೆಯ ಗೆಳತಿಯರು ಪರಿಚಯರಾಗುತ್ತಾರೆ. ನಿಮ್ಮ ತಂದೆ- ತಾಯಿ ಕಣ್ಣಲ್ಲಿ ನೀರುತರದಂತೆ ಪ್ರಮಾಣ ಮಾಡಬೇಕು. ಬೇರೆ ಊರಿಗೆ ಉನ್ನತ ಶಿಕ್ಷಣಕ್ಕೆ ಹೋಗಬಹುದು. ಅಲ್ಲಿ ದಾರಿ ತಪ್ಪಬಹುದು. ಅನೇಕ ಸಮಾಜ ಘಾತುಕ ಶಕ್ತಿ ಸಕ್ರಿಯವಾಗಿದ್ದು, ಅವುಗಳಿಗೆ ವಿದ್ಯಾರ್ಥಿಗಳು ಬಲಿಯಾಗಬಾರದು. ಸಮಾಜವನ್ನು ಸರಿಪಡಿಸುವ ಶಕ್ತಿ ನಿಮ್ಮಲ್ಲಿದೆ. ನಿಮ್ಮ ಮಕ್ಕಳು ದಾರಿತಪ್ಪದಂತೆ ನಿಗಾವಹಿಸಬೇಕು. ಪತ್ರಕರ್ತರ ಕಾಲೋನಿ ನಿರ್ಮಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದರು.ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಆಸೀಫ್ ಸೇಠ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಭವಿಷ್ಯ ತಮ್ಮ ಕುಟುಂಬ ನಮ್ಮ ದೇಶದ ಭವಿಷ್ಯದ ಬಗ್ಗೆ ಚಿಂತನೆ ಮಾಡಬೇಕು. ಸಾಧನೆ ಮಾಡುವ ಮೂಲಕ ಕೀರ್ತಿ ತರಬೇಕು. ಕಠಿಣ ಪರಿಶ್ರಮದೊಂದಿಗೆ ಶಿಸ್ತು ಬೆಳೆಸಿಕೊಳ್ಳಬೇಕು ಎಂದರು.ಬೆಳಗಾವಿ ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ ಮಾತನಾಡಿ, ಉತ್ತಮ ಸಾಧನೆ ಮಾಡಿರುವ ಪತ್ರಕರ್ತರ ಮಕ್ಕಳು ತಮ್ಮ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು. ವೈದ್ಯಕೀಯ, ಎಂಜಿನಿಯರ್, ಆರ್ಥಿಕ ತಜ್ಞ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.ಮುಖ್ಯ ಅತಿಥಿಗಳಾಗಿ ಮೇಯರ್ ಮಂಗೇಶ ಪವಾರ, ಉಪಮೇಯರ್ ವಾಣಿ ಜೋಶಿ ಆಗಮಿಸಿದ್ದರು. ಬೆಳಗಾವಿ ಪತ್ರಕರ್ತರ ಸಂಘದ ಅಧ್ಯಕ್ಷ ವಿಲಾಸ ಜೋಶಿ ಅಧ್ಯಕ್ಷತೆ ವಹಿಸಿದ್ದರು. ಶ್ರೀಶೈಲ ಮಠದ ಸ್ವಾಗತಿಸಿದರು. ರವೀಂದ್ರ ಉಪ್ಪಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂತೋಷ ಚಿನಗುಡಿ ವಂದಿಸಿದರು. ಸುನಿತಾ ದೇಸಾಯಿ ಕಾರ್ಯಕ್ರಮ ನಿರೂಪಿಸಿದರು. ಬೆಳ್ಳಿ ಚುಕ್ಕಿ ಸಾಂಸ್ಕೃತಿಕ ಅಕಾಡೆಮಿಯ ರಾಜೇಶ್ವರಿ ಹಿರೇಮಠ ಹಾಗೂ ಸಂಗಡಿಗರು ಸಂಗೀತ ಕಾರ್ಯಕ್ರಮ ಪ್ರಸ್ತುತಪಡಿಸಿದರು.ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ರಾಜು ಗವಳಿ, ಸುರೇಶ ನೇರ್ಲಿ, ಕೀರ್ತಿನಕುಮಾರ ಕಾಸರಗೋಡು, ಮಹೇಶ ವಿಜಾಪುರ, ಮುನ್ನಾ ಬಾಗವಾನ, ಕುಂತಿನಾಥ ಕಲಮನಿ, ವಿನಾಯಕ ಮಠಪತಿ, ಸುನೀಲ ಪಾಟೀಲ, ರಾಜಶೇಖರ ಹಿರೇಮಠ, ರವಿ ಗೋಸಾವಿ, ಮಂಜುನಾಥ ಕೋಳಿಗುಡ್ಡ, ಅಶೋಕ ಮುದ್ದಣ್ಣವರ, ಎಚ್.ಯು.ನಾಗರಾಜ ಮೊದಲಾದವರು ಉಪಸ್ಥಿತರಿದ್ದರು.ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ ಪತ್ರಕರ್ತರ ಮಕ್ಕಳನ್ನು ಗುರುತಿಸಿ, ಅವರಿಗೆ ಪ್ರತಿಭಾ ಪುರಸ್ಕಾರ ಕೊಟ್ಟು ಗೌರವಿಸುವುದು ಸ್ತುತ್ಯಾರ್ಹ. ಈ ನಿಟ್ಟಿನಲ್ಲಿ ಬೆಳಗಾವಿ ಪತ್ರಕರ್ತರ ಸಂಘ ಮಾಡಿರುವ ಕಾರ್ಯ ಮಾದರಿಯಾಗಿದೆ. ಅಲ್ಲದೇ, ಮಕ್ಕಳಿಗೆ ಇನ್ನಷ್ಟು ಗೌರವ ತರುವಂತೆ ಮಾಡಿದೆ. ಪತ್ರಕರ್ತರ ಮಕ್ಕಳು ಕಲಿಕೆಯಲ್ಲಿ ಸಾಧನೆ ಮಾಡಿದ್ದು ಖುಷಿಯಾಗಿದೆ.
-ಡಾ.ಪ್ರಭಾಕರ ಕೋರೆ, ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರು.