ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಮಳೆ ಪ್ರಮಾಣ ತಗ್ಗಿದ್ದು, ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣವೂ ಕಡಿಮೆಯಾಗಿದೆ.ಶೃಂಗೇರಿ, ಆಗುಂಬೆ, ತೀರ್ಥಹಳ್ಳಿ ಭಾಗದ ಜಲಾನಯನ ಪ್ರದೇಶದಲ್ಲಿ ಭಾರಿ ಪ್ರಮಾಣದದಲ್ಲಿ ಕಡಿಮೆಯಾಗಿದ್ದು, ಗಾಜನೂರಿನ ತುಂಗಾ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ 70 ಸಾವಿರ ಕ್ಯುಸೆಕ್‌ನಿಂದ 38 ಸಾವಿರ ಕ್ಯುಸೆಕ್‌ಗೆ ಇಳಿದಿದೆ. 588.24 ಮೀಟರ್ , 3.24 ಟಿಎಂಸಿ ಅಡಿ ನೀರು ಸಂಗ್ರಹಣಾ ಸಾಮರ್ಥ್ಯದ ಜಲಾಶಯ ಈಗಾಗಲೇ ಭರ್ತಿಯಾಗಿದೆ. ಹೀಗಾಗಿ ಜಲಾಶಯದ 22 ಕ್ರಸ್ಟ್ ಗೇಟ್‌ಗಳನ್ನು ತೆರೆದು ತುಂಗಾ ನದಿಗೆ 34 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ.
ಭದ್ರೆ ಭರ್ತಿಗೆ 5 ಅಡಿ: ಭದ್ರಾ ಜಲಾಶಯಕ್ಕೆ ಸೋಮವಾರ 183811 ಕ್ಯುಸೆಕ್ ನೀರು ಹರಿದು ಬಂದಿದೆ. 186 ಗರಿಷ್ಠ ಮಟ್ಟ ಹೊಂದಿರುವ ಜಲಾಶಯದ ಮಟ್ಟ ಸದ್ಯ 181 ಅಡಿಗೆ ಏರಿಕೆಯಾಗಿದ್ದು, ಭರ್ತಿಗೆ ಇನ್ನೂ 5 ಅಡಿ ಮಾತ್ರ ಬಾಕಿ ಉಳಿದಿದೆ. ಒಟ್ಟು 71.5 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಈಗ 66.38 ಟಿಎಂಸಿ ನೀರು ಸಂಗ್ರಹವಾಗಿದೆ.ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ದಿನದಿಂದ ಏರಿಕೆಯಾಗುತ್ತಿದ್ದು, ಈಗಾಲೇ 1809 ಅಡಿಗೆ ಏರಿಕೆಯಾಗಿದೆ. ಸೋಮವಾರ 40382 ಕ್ಯುಸೆಕ್ ನೀರು ಜಲಾಶಯಕ್ಕೆ ಹರಿದು ಬಂದಿದೆ.
ರಸ್ತೆಗೆ ಬಿದ್ದ ಮರ: ಶಿವಮೊಗ್ಗ ನಗರದ ಗಾಂಧಿ ಪಾರ್ಕ್‌ನಲ್ಲಿದ್ದ ಬೃಹತ್ ಮರವೊಂದು ಧರೆಗುರುಳಿದೆ. ಬಾಲರಾಜ್ ಅರಸ್ ರಸ್ತೆಗೆ ಅಡ್ಡಲಾಗಿ ಮರ ಬಿದ್ದಿರುವುದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು.ಗಾಂಧಿ ಪಾರ್ಕ್‌ನಲ್ಲಿದ್ದ ಬೃಹತ್ ಮರವೊಂದು ಸಂಜೆ ವೇಳೆಗೆ ಬುಡಮೇಲಾಗಿದೆ. ಭೋವಿ ಸಮುದಾಯ ಭವನದ ಮುಂಭಾಗ ಬಾಲರಾಜ ಅರಸ್ ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಮರ ಬಿದ್ದ ರಭಸಕ್ಕೆ ವಿದ್ಯುತ್ ತಂತಿಗಳು ತುಂಡಾಗಿವೆ. ವಾಹನಗಳಿಗೂ ಹಾನಿಯಾಗಿದೆ ಎನ್ನಲಾಗಿದೆ. ಅರಣ್ಯ ಇಲಾಖೆ, ಮಹಾನಗರ ಪಾಲಿಕೆ ಮತ್ತು ಮೆಸ್ಕಾಂ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮರ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಮರ ಬಿದ್ದಿರುವುದರಿಂದ ಬಾಲರಾಜ ಅರಸ್ ರಸ್ತೆಯ ಒಂದು ಬದಿಯಲ್ಲಿ ವಾಹನ ಸಂಚಾರ ವ್ಯತ್ಯಯವಾಗಿದೆ. ಮಹಾವೀರ ವೃತ್ತದಿಂದ ಗೋಪಿ ಸರ್ಕಲ್‌ಗೆ ತೆರಳುವ ಮಾರ್ಗ ಕೆಲ ಕಾಲ ಬಂದ್ ಮಾಡಲಾಗಿತ್ತು.
13 ಮಿ.ಮೀ ಸರಾಸರಿ ಮಳೆ:ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ 13.36 ಮಿ.ಮೀ ಸರಾಸರಿ ಮಳೆ ಸುರಿದಿದ್ದು, ಶಿವಮೊಗ್ಗದಲ್ಲಿ 3.80 ಮಿ.ಮೀ, ಭದ್ರಾವತಿ 3.70 ಮಿ.ಮೀ, ತೀರ್ಥಹಳ್ಳಿ 39.60 ಮಿ.ಮೀ, ಸಾಗರದಲ್ಲಿ 17.50 ಮಿ.ಮೀ, ಶಿಕಾರಿಪುರ 1.10 ಮಿ.ಮೀ, ಸೊರಬದಲ್ಲಿ 6.90 ಮಿ.ಮೀ, ಹೊಸನಗರದಲ್ಲಿ 20.90 ಮಿ.ಮೀ ಮಳೆಯಾಗಿದೆ.ಕೆಸರುಗದ್ದೆಯಾದ ಮಲಂದೂರು ರಸ್ತೆ
ಆನಂದಪುರ: ಕಳೆದ ಕೆಲವು ದಿನಗಳಿಂದ ಸುರಿದ ಬಾರಿ ಮಳೆಯಿಂದಾಗಿ ರಸ್ತೆಗಳು ಸಂಪೂರ್ಣ ಕೆಸರುಮಯವಾಗಿವೆ.ಆನಂದಪುರ ಗ್ರಾಮ ಪಂಚಾಯಿತಿಯ ಮಲಂದೂರು ಗ್ರಾಮದಲ್ಲಿನ ರಸ್ತೆಯು ಸುರಿದ ಬಾರಿ ಮಳೆಯಿಂದ ಕೆಸರುಮಯವಾಗಿದ್ದು ಓಡಾಡಲು ಹರಸಹಾಸ ಮಾಡಬೇಕಾದಂತಹ ಸ್ಥಿತಿ ನಿರ್ಮಾಣವಾಗಿದೆ. ಚರಂಡಿಗಳಲ್ಲಿ ಭಾರಿ ಪ್ರಮಾಣದ ನೀರು ಹರಿಯುತ್ತಿದೆ. ಜಲ ಒಡೆದ ಕಾರಣ ಮಣ್ಣಿನ ರಸ್ತೆಗಳಲ್ಲಿ ಸಾರ್ವಜನಿಕರು ವಿದ್ಯಾರ್ಥಿಗಳು ವಾಹನಗಳು ಕೂಡ ಸಂಚಾರಿಸಲು ಕಷ್ಟಕರವಾಗಿದೆ. ಸ್ಥಳೀಯ ಗ್ರಾಮಾಡಳಿತ ಇತ್ತ ಕಡೆ ಗಮನಹರಿಸುವಂತೆ ಸ್ಥಳೀಯ ನಿವಾಸಿಗಳು ಅಲವತ್ತುಗೊಂಡಿದ್ದಾರೆ.