ಬಳ್ಳಾರಿ: ರೀಲ್ಸ್, ಫೋಟೊಶೂಟ್ ಮಾಡಲು ಶಾಸಕ ಜನಾರ್ದನ ರೆಡ್ಡಿ ಅವರಿಗೆ ಸೇರಿದ ಮಾಡಲ್ ಹೌಸ್‌ಗೆ ಬಂದಿದ್ದ ಕೆಲ ಯುವಕರು ಹೊತ್ತಿಸಿದ ಬೆಂಕಿಯಿಂದ ಅಗ್ನಿ ಅವಘಡ ಸಂಭವಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 8 ಜನರನ್ನು ಬಂಧಿಸಲಾಗಿದೆ ಎಂದು ಬಳ್ಳಾರಿಯ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪೆನ್ನೇಕರ್ ತಿಳಿಸಿದ್ದಾರೆ.
ಶಾಸಕ ಜನಾರ್ದನ ರೆಡ್ಡಿಯವರ ಮಾಡಲ್ ಹೌಸ್ ಹಲವು ವರ್ಷಗಳಿಂದ ಪಾಳು ಬಿದ್ದಿದೆ. ಅಲ್ಲಿ ಯಾರೂ ವಾಸವಿರಲಿಲ್ಲ. ಸಿಸಿಟಿವಿಯೂ ಇಲ್ಲ. ಭದ್ರತೆಗೆಂದು ಭದ್ರತಾ ಸಿಬ್ಬಂದಿಯನ್ನು ಸಹ ನಿಯೋಜಿಸಿಲ್ಲ ಎಂದು ತಿಳಿದು ಬಂದಿದೆ. ಅನುಮಾನವಿದ್ದ 8 ಜನರನ್ನು ಬಂಧಿಸಿದ್ದೇವೆ. ಇದರಲ್ಲಿ 6 ಮಂದಿ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರಿದ್ದಾರೆ. ಈ ಪೈಕಿ ಕೆಲವು ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮತ್ತೆ ಕೆಲವರು ಶಾಲೆ ಬಿಟ್ಟವರಿದ್ದಾರೆ. ಇಬ್ಬರು ಮುಂಬೈನಿಂದ ಬಂದವರೂ ಇದ್ದಾರೆ ಎಂದು ತಿಳಿಸಿದರು.
ಮಾಡಲ್ ಹೌಸ್ ಗೆ ಬೆಂಕಿ ಹಚ್ಚಿದ ಪ್ರಕರಣದ ಬಂಧಿತ ಆರೋಪಿಗಳು ಯಾವ ಉದ್ದೇಶ ಇಟ್ಟುಕೊಂಡು ಈ ಕೃತ್ಯ ಎಸಗಿದ್ದಾರೆ ಎಂಬುದು ಇನ್ನು ಖಚಿತವಾಗಿಲ್ಲ. ಯಾವುದೇ ಸಾಧ್ಯತೆಗಳನ್ನು ಸಹ ನಾವು ಅಲ್ಲಗೆಳೆಯುವುದಿಲ್ಲ. ಸಮಗ್ರ ತನಿಖೆ ಮಾಡುತ್ತೇವೆ ಎಂದು ಎಸ್ಪಿ ತಿಳಿಸಿದರು.ದೂರಿನಲ್ಲಿ ಹೇಳಿರುವುವಂತಹ ಯಾವುದೇ ವಸ್ತುಗಳು ಮನೆಯಲ್ಲಿದ್ದ ಕುರುಹುಗಳು ನಮಗೆ ಸಿಕ್ಕಿಲ್ಲ. ಮನೆಯಲ್ಲಿ ಈ ಹಿಂದೆ ವಸ್ತುಗಳಿದ್ದಿರಬಹುದು. ಅದನ್ನು ಕದ್ದುಕೊಂಡು ಹೋಗಿರುವ ಸಾಧ್ಯತೆಗಳಿವೆ. ಆದರೆ, ಈಗಂತೂ ಯಾವುದೇ ವಸ್ತುಗಳು ಸಿಕ್ಕಿಲ್ಲ. ಜನಾರ್ದನ ರೆಡ್ಡಿ ಅವರ ಲೇಔಟ್‌ನಲ್ಲಿ ಯಾವುದೇ ಭದ್ರತೆ, ಸಿಸಿಟಿವಿಯೂ ಇರಲಿಲ್ಲ. ಇಂಥ ವ್ಯವಸ್ಥೆ ಮಾಡಿಕೊಳ್ಳುವ ಜವಾಬ್ದಾರಿ ಅವರದ್ದೂ ಆಗಿರುತ್ತದೆ. ನಗರದ ಹೊರವಲಯದ ಲೇಔಟ್‌ಗಳಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಅದರ ನಿಯಂತ್ರಣಕ್ಕೆ ರಾತ್ರಿ ಗಸ್ತು, ಪೊಲೀಸ್ ಭದ್ರತೆ ಹೆಚ್ಚಳಕ್ಕೆ ಕ್ರಮ ಕೈಗೊಳ್ಳುತ್ತೇವೆ ಎಂದರು. ಮಾಡಲ್ ಹೌಸ್ ಗೆ ಬೆಂಕಿ ಅವಘಡ ಸಂಭವಿಸಿರುವ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರಿನಲ್ಲಿ ನಿರ್ದಿಷ್ಟವಾಗಿ ಯಾರ ಹೆಸರನ್ನೂ ಉಲ್ಲೇಖಿಸಿರಲಿಲ್ಲ ಎಂದು ಎಸ್ಪಿ ಸುಮನ್ ಪೆನ್ನೇಕರ್ ತಿಳಿಸಿದರು.