ರಂಗಭೂಮಿ ಸಮಾಜದ ಪ್ರತಿಬಿಂಬ: ಡಾ. ಕೆ.ಆರ್. ದುರ್ಗಾದಾಸ

KannadaprabhaNewsNetwork |  
Published : May 04, 2026, 02:15 AM IST
ರಂಗ ಕಲಾವಿದೆ ಪ್ರಮೀಳಾ ಜಕ್ಕಣ್ಣವರ ಹಾಗೂ ರಂಗ ಕಲಾವಿದ ಭೀಮಗೊಂಡ ಖಟಾವಿ ಅವರಿಗೆ ರಂಗಚಂದ್ರ ಪ್ರಶಸ್ತಿ ಪ್ರದಾನ ಮಾಡಲಾಯಿತು. | Kannada Prabha

ಸಾರಾಂಶ

ಜಗುಚಂದ್ರ ಅವರ ಕಲಾ ಸೇವೆ ಮತ್ತು ರಂಗಭೂಮಿಯ ಮೇಲಿನ ಪ್ರೀತಿ ಈ ಪ್ರಶಸ್ತಿಯ ಮೂಲಕ ಮುಂದಿನ ತಲೆಮಾರಿಗೆ ತಲುಪುತ್ತಿದೆ. ಅವರ ನಿಷ್ಠೆ, ಶ್ರಮ ಮತ್ತು ಸೃಜನಶೀಲತೆಯನ್ನು ರಂಗಚಂದ್ರ ಪ್ರಶಸ್ತಿ ಸ್ಮರಿಸುತ್ತದೆ ಎಂದು ಡಾ. ಕೆ.ಆರ್. ದುರ್ಗಾದಾಸ ಹೇಳಿದರು.

ಧಾರವಾಡ:

ರಂಗಭೂಮಿ ಕೇವಲ ಮನರಂಜನೆ ಮಾತ್ರವಲ್ಲ, ಅದು ಸಮಾಜದ ಪ್ರತಿಬಿಂಬವೂ ಆಗಿದೆ. ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಕಲಾವಿದರು ತಮ್ಮ ಕಲೆಯ ಮೂಲಕ ಜನರಲ್ಲಿ ಚಿಂತನೆ ಮೂಡಿಸುವ ಕೆಲಸ ಮಾಡುತ್ತಾರೆ. ಅಂತಹ ಕಲಾವಿದರ ಸಾಧನೆಗೆ ಮೌಲ್ಯ ನೀಡುವ ಮೂಲಕ ರಂಗಚಂದ್ರ ಪ್ರಶಸ್ತಿ ಹೊಸ ಪ್ರತಿಭೆಗಳಿಗೆ ಪ್ರೇರಣೆಯಾಗಿ ಪರಿಣಮಿಸಿದೆ ಎಂದು ಕರ್ನಾಟಕ ಬಯಲಾಟ ಮತ್ತು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ಕೆ.ಆರ್. ದುರ್ಗಾದಾಸ ಹೇಳಿದರು.

ಪಂ. ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಲೂರ ವೆಂಕಟರಾವ ಸಭಾಭವನದಲ್ಲಿ ನಡೆದ ರಂಗಚಂದ್ರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

ಜಗುಚಂದ್ರ ಅವರ ಕಲಾ ಸೇವೆ ಮತ್ತು ರಂಗಭೂಮಿಯ ಮೇಲಿನ ಪ್ರೀತಿ ಈ ಪ್ರಶಸ್ತಿಯ ಮೂಲಕ ಮುಂದಿನ ತಲೆಮಾರಿಗೆ ತಲುಪುತ್ತಿದೆ. ಅವರ ನಿಷ್ಠೆ, ಶ್ರಮ ಮತ್ತು ಸೃಜನಶೀಲತೆಯನ್ನು ಈ ಪ್ರಶಸ್ತಿ ಸ್ಮರಿಸುತ್ತದೆ. ಪ್ರತಿ ವರ್ಷವೂ ಆಯ್ಕೆಯಾದ ಕಲಾವಿದರಿಗೆ ಈ ಪ್ರಶಸ್ತಿ ನೀಡುವುದರಿಂದ ರಂಗಭೂಮಿಯ ಗೌರವ ಮತ್ತಷ್ಟು ಹೆಚ್ಚುತ್ತಿದೆ ಇದರ ನೇತೃತ್ವ ವಹಿಸಿರುವ ಮಾರ್ತಾಂಡಪ್ಪ ಕತ್ತಿ ಅವರ ಶ್ರಮ ಸ್ಮರಿಸುವಂತಹದದು ಎಂದರು.

ರಂಗಚಂದ್ರ ಪ್ರಶಸ್ತಿ ಪಡೆದ ರಂಗ ಕಲಾವಿದೆ ಪ್ರಮೀಳಾ ಜಕ್ಕಣ್ಣವರ ಹಾಗೂ ರಂಗ ಕಲಾವಿದ ಭೀಮಗೊಂಡ ಖಟಾವಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದ ಮಾಜಿ ಮೇಯರ್‌ ಈರೇಶ ಅಂಚಟಗೇರಿ, ಜಗುಚಂದ್ರ ಅವರು ರಂಗಭೂಮಿ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅವರ ಕಲಾ ಚಿಂತನೆಗಳು ಮಾನವೀಯ ಮೌಲ್ಯ, ಸಾಮಾಜಿಕ ನ್ಯಾಯ ಮತ್ತು ಸಂಸ್ಕೃತಿ ಉಳಿಸುವ ಉದ್ದೇಶ ಒಳಗೊಂಡಿದ್ದವು. ಈ ಪ್ರಶಸ್ತಿ ಅವರ ಆಲೋಚನೆ ಮುಂದುವರಿಸುವ ಪ್ರಯತ್ನವಾಗಿದೆ ಎಂದು ಹೇಳಿದರು.

ಅಖಿಲ ಭಾರತ ಪ್ರಾಥಮಿಕ ಶಾಲಾ ಶಿಕ್ಷಕರ ಫೇಡರೇಶನ್ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಗುರಿಕಾರ ಮಾತನಾಡಿ, ಜಗುಚಂದ್ರ ಅವರ ಸೇವೆ ಸ್ಮರಿಸುವುದಕ್ಕಾಗಿ ರಂಗಚಂದ್ರ ಪ್ರಶಸ್ತಿ ಸ್ಥಾಪಿಸಲಾಯಿತು. ಈ ಪ್ರಶಸ್ತಿ ಅವರ ಕಲಾ ತತ್ವಗಳನ್ನು ಮುಂದಿನ ತಲೆಮಾರಿಗೆ ತಲುಪಿಸುವ ಸೇತುವೆಯಾಗಿದೆ. ಅವರ ಬದುಕು ನಮಗೆ ಕಲೆಯ ಮೇಲಿನ ನಿಷ್ಠೆ, ಶ್ರಮ ಮತ್ತು ಸಮಾಜ ಸೇವೆಯ ಮಹತ್ವ ಸಾರುತ್ತದೆ ಎಂದು ಹೇಳಿದರು.

ಹಿರಿಯ ವಕೀಲ ಪ್ರಕಾಶ ಉಡಿಕೇರಿ ಪಿ.ಎಚ್. ನೀರಲಕೇರಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ. ಸಂಗಮನಾಥ ಲೋಕಾಪುರ, ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಂಸ್ಥಾಪಕ ನಿರ್ದೇಶಕ ಡಾ. ಉದಯ ರಾಯ್ಕರ್, ಡಾ. ವೀಣಾ ಬಿರಾದಾರ, ಸಮಾವೇಶದ ಸರ್ವಾಧ್ಯಕ್ಷ ಸುನೀಲ ಬಾಗೇವಾಡಿ ಮತ್ತು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಫ್. ಸಿದ್ದನಗೌಡರ ಮಾತನಾಡಿದರು. ಪಂ. ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನದ ಅಧ್ಯಕ್ಷ ಎಂ.ಎಸ್. ಫರಾಸ ಅಧ್ಯಕ್ಷತೆ ವಹಿಸಿದ್ದರು. ದೀಪಾ ವಸ್ತ್ರದ ಮತ್ತು ಅಪೂರ್ವ ನಿರೂಪಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ಮಾರ್ತಾಂಡಪ್ಪ ಕತ್ತಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಗಾಯಕ ಶಿವಾನಂದ ಹೂಗಾರ ಪ್ರಾರ್ಥಿಸಿದರು. ಕೃಷ್ಣಮೂರ್ತಿ ಗೊಲ್ಲರ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬರಹಗಾರರಿಂದ ಸದಭಿರುಚಿಯ ಕವನ, ಕಥೆಗಳು ಹೊರಹೊಮ್ಮಲಿ: ದಿನೇಶ ಹೊಳ್ಳ
ಆಧುನಿಕೀಕರಣದ ಪರಿಣಾಮವಾಗಿ ಗುಬ್ಬಚ್ಚಿಗಳ ಸಂಖ್ಯೆ ಕುಸಿತ: ಸಂಗಮೇಶ ಪ್ರಭಾಕರ್