ಭಟ್ಕಳ: ೧೮ನೇ ಶತಮಾನದಲ್ಲಿ ಕೇರಳದಲ್ಲಿ ಅಸ್ಪೃಶ್ಯತೆ ತಾಂಡವಾಡುತ್ತಿರುವ ಸಂದರ್ಭದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಅವತಾರವಾಗಿದ್ದು, ಇವರ ತತ್ವಾದರ್ಶಗಳಿಂದ ಸಮಾಜದಲ್ಲಿ ಅಮೂಲಾಗ್ರ ಸುಧಾರಣೆಗಳು ಕಂಡುಬಂದವು ಎಂದು ತಹಸೀಲ್ದಾರ ನಾಗೇಂದ್ರ ಕೋಳಶೆಟ್ಟಿ ಅಭಿಪ್ರಾಯಪಟ್ಟರು.
ತಾಲೂಕಿನ ಆಡಳಿತ ಸೌಧದಲ್ಲಿ ತಾಲೂಕಾಡಳಿತ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣಗುರುಗಳ ೧೭೧ನೇ ಜನ್ಮಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಆಗೀನ ಕಾಲದಲ್ಲಿ ಒಬ್ಬ ಕೆಳವರ್ಗದವರು ರಸ್ತೆಯಲ್ಲಿ ಓಡಾಡುವಾಗ ಅವರ ಹೆಜ್ಜೆ ಗುರುತುಗಳು ಮೂಡಬಾರದು ಎಂಬ ಕಾರಣಕ್ಕೆ ತಮ್ಮ ಬೆನ್ನ ಹಿಂಬದಿಯಲ್ಲಿ ಪೊರಕೆ ಕಟ್ಟಿಕೊಂಡು ಓಡಾಡಬೇಕಿತ್ತು. ಕೆಳವರ್ಗದ ಮಹಿಳೆಯರು ಮೇಲ್ವಸ್ತ್ರ ಧರಿಸಿದರೆ ಅದು ಮೇಲ್ವರ್ಗಕ್ಕೆ ಅಗೌರವ ಸೂಚಿದಂತೆ ಎಂಬ ಕೀಳು ಮಾನಸಿಕತೆ ಮುಡುಗಟ್ಟಿತ್ತು. ಇಂತಹ ಸಂದರ್ಭದಲ್ಲಿ ನಾರಾಯಣ ಗುರುಗಳು ಯಾರ ಜತೆಯೂ ಸಂಘರ್ಷಕ್ಕಿಳಿಯದೆ ತಮ್ಮದೆ ರೀತಿಯಲ್ಲಿ ಸಮಾಜ ಸುಧಾರಣೆಗೆ ಮುಂದಾದರು. ದೇವಸ್ಥಾನಕ್ಕೆ ಕೆಳವರ್ಗದ ಜನರಿಗೆ ನಿಷೇಧವಿದ್ದರಿಂದ ತಮ್ಮದೆ ಆದ ದೇವಸ್ಥಾನ ನಿರ್ಮಿಸಿ ಕೆಳವರ್ಗದ ಜನರಿಗೆ ಪ್ರವೇಶ ಕಲ್ಪಿಸಿದರು.ಹಿಂದೂ ಸಂಪ್ರದಾಯ ಧಿಕ್ಕರಿಸದೇ ಇದರಲ್ಲಿದ್ದ ಅನಿಷ್ಠ ಪದ್ಧತಿ ಹೋಗಲಾಡಿಸುವ ಪ್ರಯತ್ನ ಮಾಡಿದರು. ಗಾಂಧೀಜಿಯವರಂತಹ ಅನೇಕ ಸ್ವಾತಂತ್ರ‍್ಯ ಹೋರಾಟಗಾರರಿಗೂ ಆದರ್ಶವಾಗಿದ್ದರು.ಅವರನ್ನು ಯಾವುದೇ ಜಾತಿಗೆ ಸೀಮಿತಗೋಳಿಸದೆ ಎಲ್ಲರು ಅವರ ಆದರ್ಶ ಪಾಲಿಸುವಂತಾಗಬೇಕು ಎಂದರು.
ಬ್ರಹ್ಮಶ್ರೀ ನಾರಾಯಣಗುರು ಜಯಂತ್ಯುತ್ಸವ ಸಮಿತಿಯ ಸಂಚಾಲಕ ಮನಮೋಹನ ನಾಯ್ಕ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳು ಅತ್ಯಂತ ಕೆಳವರ್ಗದ ಜನರನ್ನು ಮೇಲೆತ್ತುವ ಪ್ರಯತ್ನ ಮಾಡಿದ್ದರು. ಇವರ ಆದರ್ಶಗಳನ್ನು ನಾವೆಲ್ಲರೂ ಪಾಲಿಸುವಂತಾಗಬೇಕು ಎಂದರು.ಕಾರ್ಯಕ್ರಮದಲ್ಲಿದ್ದ ಪತ್ರಕರ್ತ ಈಶ್ವರ ನಾಯ್ಕ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳು ಅಂದಿನ ಕಾಲದಲ್ಲಿ ಕೆಳವರ್ಗವರಲ್ಲಿದ್ದ ಮೂಡನಂಬಿಕೆ ಹೋಗಲಾಡಿಸಲು ಶಾಲೆ ತೆರೆದು ಜನರನ್ನು ಬುದ್ದಿವಂತಿಕೆ ತತ್ವಜ್ಞಾನ ಮತ್ತು ಆತ್ಮಸಾಕ್ಷಾತ್ಕಾರದತ್ತ ಕರೆದುಕೊಂಡು ಹೋಗಿ ಸಮಾಜ ಸುಧಾರಣೆಗೆ ತಂದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಈಡಿಗ ಮಹಾಮಂಡಳಿಯ ತಾಲೂಕಾಧ್ಯಕ್ಷ ಶ್ರೀಧರ ನಾಯ್ಕ, ಉಪಾಧ್ಯಕ್ಷ ಮಾರುತಿ ನಾಯ್ಕ, ಗ್ರಾಮ ಲೆಕ್ಕಾಧಿಕಾರಿ ತಿಪ್ಪಣ್ಣ, ತಹಸೀಲ್ದಾರ ಕಚೇರಿಯ ಸಿಬ್ಬಂದಿ ಉಪಸ್ಥಿತರಿದ್ದರು.