ರಾಮಮೂರ್ತಿ ನವಲಿ
ಗಂಗಾವತಿ:ಬಿಎಸ್‌ಸಿ ಶುಲ್ಕ ಪಾವತಿಸದ ವಿದ್ಯಾರ್ಥಿನಿ ತಾಯಿಯ ತಾಳಿಯನ್ನು ಪತಿ ಎದುರೇ ಕಾಲೇಜ್ ಚೇರ್‌ಮನ್ ಬಿಚ್ಚಿಸಿಕೊಂಡ ಘಟನೆ ನಗರದ ಬಿಬಿಸಿ ನರ್ಸಿಂಗ್ ಕಾಲೇಜಿನಲ್ಲಿ ಮಂಗಳವಾರ ನಡೆದಿದೆ.
ಇಲ್ಲಿನ ಬಿಬಿಸಿ ಕಾಲೇಜು ಆಫ್ ನರ್ಸಿಂಗ್ ಸಂಸ್ಥೆಯಲ್ಲಿ ಬಿಎಸ್‌ಸಿ ನರ್ಸಿಂಗ್ ಪ್ರಥಮ ಸೆಮಿಸ್ಟರ್‌ಗೆ ಕನಕಗಿರಿ ತಾಲೂಕಿನ ಮುಸ್ಲಾಪುರ ಗ್ರಾಮದ ವಿದ್ಯಾರ್ಥಿನಿ ಕಾವೇರಿ ಹನುಮಂತಪ್ಪ ವಾಲಿಕಾರ ₹10 ಸಾವಿರ ಪಾವತಿಸಿ ಪ್ರವೇಶ ಪಡೆದಿದ್ದರು. ಉಳಿದ ₹90 ಸಾವಿರ ಆನಂತರ ಭರಿಸಲಾಗುವುದು ಎಂದು ಹೇಳಿದ್ದರು. ಆ ಬಳಿಕ ಅವರಿಗೆ ಗದಗ ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ಸೀಟು ದೊರಕಿದೆ. ಹೀಗಾಗಿ ಅವರು ತನ್ನ ತಂದೆ-ತಾಯಿಯೊಂದಿಗೆ ಕಾಲೇಜಿಗೆ ಬಂದು ಪ್ರವೇಶ ಪಡೆಯುವ ವೇಳೆ ನೀಡಿದ್ದ ಮೂಲ ಪ್ರಮಾಣಪತ್ರ ನೀಡುವಂತೆ ಕೇಳಿಕೊಂಡಿದ್ದಾರೆ. ಆಗ ಕಾಲೇಜಿನ ಚೇರ್‌ಮನ್ ಡಾ. ಸಿ.ಬಿ. ಚಿನಿವಾಲ, ನೀವು ಉಳಿದ ಶುಲ್ಕ ಪಾವತಿಸಿದ ಮೇಲೆ ಟಿಸಿ, ಅಂಕಪಟ್ಟಿ, ಪ್ರಮಾಣಪತ್ರ ನೀಡುತ್ತೇನೆ ಎಂದು ಹೇಳಿದ್ದಾರೆ. ಆಗ ನಮಗೆ ಶುಲ್ಕ ಪಾವತಿಸುವ ಶಕ್ತಿ ಇಲ್ಲ. ನೀವು ಪ್ರಮಾಣಪತ್ರ ನೀಡಿದರೆ ನನ್ನ ಶೈಕ್ಷಣಿಕ ಭವಿಷ್ಯಕ್ಕೆ ಅನುಕೂಲವಾಗಲಿದೆ ಎಂದು ಬೇಡಿಕೊಂಡಿದ್ದಾರೆ. ಆಗ ಚೇರ್‌ಮನ್, ನಿಮಗೆ ಶುಲ್ಕ ಪಾವತಿಸಲು ಆಗದೆ ಇದ್ದರೆ ನಿಮ್ಮ ಕೊರಳಿನಲ್ಲಿರುವ ಮಾಂಗಲ್ಯದ ಸರ ಹಾಗೂ ಚಿನ್ನದ ಆಭರಣ ಬಿಚ್ಚಿಕೊಡಿ ಎಂದಿದ್ದಾರೆ.ಪತಿ ಎದುರೇ ತಾಳಿ ಬಿಚ್ಚಿದ ಪತ್ನಿ:
ಕಾಲೇಜಿನ ಚೇರ್‌ಮನ್ ಮಾತಿನಿಂದ ನೊಂದ ವಿದ್ಯಾರ್ಥಿನಿ ತಾಯಿ ರೇಣುಕಮ್ಮ, ಮಗಳ ಭವಿಷ್ಯದ ಮುಂದೆ ಕೊರಳಿನಲ್ಲಿರುವ ತಾಳಿ, ಬಂಗಾರದ ಆಭರಣ ಮುಖ್ಯವಲ್ಲ. ಅವಳು ಶಿಕ್ಷಣ ಪಡೆದರೆ ಇಂತಹ ನೂರಾರು ಬಂಗಾರದ ಆಭರಣ ಮಾಡಿಸಿಕೊಳ್ಳಬಹುದೆಂದು ಪತಿ ಎದುರೇ ಕೊರಳಿನಲ್ಲಿದ್ದ ಬಂಗಾರದ ತಾಳಿ, ಬೆಂಡೋಲಿ ಬಿಚ್ಚಿಕೊಟ್ಟು ಹೊರ ಬಂದಿದ್ದಾರೆ.ನನ್ನ ಮಗಳಿಗೆ ಸರ್ಕಾರಿ ಕೋಟಾದಲ್ಲಿ ಗದಗಿನಲ್ಲಿ ಸೀಟು ಸಿಕ್ಕಿದೆ. ಹೀಗಾಗಿ ಮಗಳ ಮೂಲ ಪ್ರಮಾಣಪತ್ರ ಕೇಳಲು ಕಾಲೇಜಿಗೆ ಕುಟುಂಬ ಸಮೇತ ಬಂದಿದ್ದೇವು. ಕಾಲೇಜ್ ಚೇರ್‌ಮನ್ ಡಾ. ಸಿ.ಬಿ. ಚಿನಿವಾಲ ಅವರು ಬಾಕಿ ₹90 ಸಾವಿರ ಫೀ ಕಟ್ಟುವಂತೆ ಹೇಳಿದರು. ನಮ್ಮ ಬಳಿ ಅಷ್ಟೊಂದು ಹಣವಿಲ್ಲವೆಂದಾಗ, ನಿನಗೆ ಶುಲ್ಕ ಕಟ್ಟಲು ಆಗದೆ ಇದ್ದರೆ ಕೊರಳಲ್ಲಿರುವ ತಾಳಿ ಬಿಚ್ಚಿಕೊಡಿ ಎಂದು ಗದರಿಸಿದರು. ಮೈಮೇಲೆ ಇದ್ದ ಸುಮಾರು ಒಂದೂವರೆ ತೊಲೆಗೆ ಹೆಚ್ಚಿನ ತೂಕದ ತಾಳಿ, ಕಿವಿಯೋಲೆ ಬಿಚ್ಚಿಕೊಟ್ಟಿದ್ದೇನೆ. ಪತಿ ಎದುರು ಬಿಚ್ಚಿಸಿಕೊಂಡಿರುವುದು ನೋವು ತಂದಿದೆ.ರೇಣುಕಮ್ಮ, ವಿದ್ಯಾರ್ಥಿನಿ ತಾಯಿ
ಪ್ರವೇಶ ಪಡೆದ ದಿನದಿಂದಲೂ ವಿದ್ಯಾರ್ಥಿನಿಗೆ ಬಾಕಿ ಶುಲ್ಕ ಪಾವತಿಸುವಂತೆ ಹೇಳುತ್ತಾ ಬಂದಿದ್ದೇನೆ. ಆದರೂ ಪಾವತಿಸಿರಲಿಲ್ಲ. ಇದೀಗ ಅವರಿಗೆ ಸರ್ಕಾರಿ ಕೋಟಾದಲ್ಲಿ ಸೀಟು ಲಭ್ಯವಾಗಿದ್ದು ಪ್ರಮಾಣಪತ್ರ ನೀಡಿ ಎಂದು ಕೇಳಿದರು. ಆಗ ಬಾಕಿ ಇರುವ ಶುಲ್ಕ ಪಾವತಿಸುವಂತೆ ಹೇಳಿದೆ. ಆಗ ಅವರು ನಮ್ಮ ಬಳಿ ಹಣವಿಲ್ಲವೆಂದು ಹೇಳಿ ಚಿನ್ನಾಭರಣ ಬಿಚ್ಚಿಕೊಟ್ಟಿದ್ದಾರೆಯೇ ಹೊರತು ನಾನೇ ಬಿಚ್ಚಿಕೊಡಿ ಎಂದು ಕೇಳಿಲ್ಲ.ಡಾ. ಸಿ.ಬಿ. ಚಿನಿವಾಲ, ಚೇರ್‌ಮನ್, ಬಿಬಿಸಿ ಕಾಲೇಜು ಆಫ್ ನರ್ಸಿಂಗ್, ಗಂಗಾವತಿ