28ಕ್ಕೆ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಸಭೆ

KannadaprabhaNewsNetwork |  
Published : Apr 18, 2025, 12:43 AM IST
ಚಿತ್ರದುರ್ಗ ಎರಡನೇ ಪುಟದ ಲೀಡ್  | Kannada Prabha

ಸಾರಾಂಶ

ಚಿತ್ರದುರ್ಗದಲ್ಲಿ ನಡೆಯಲಿರುವ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ನಾಲ್ಕು ಜಿಲ್ಲೆಗಳ ಸಂವಾದ ಕುರಿತ ಪೂರ್ವಸಿದ್ಧತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.

ತುಮಕೂರು, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಜಿಲ್ಲೆಗಳ ಜನಪ್ರತಿನಿಧಿಗಳು ಭಾಗಿಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಬೆಂಗಳೂರು ವಿಭಾಗ ಮಟ್ಟದ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಸಂವಾದ ಸಭೆ ಏ.28 ರಂದು ಬೆಳಗ್ಗೆ 11 ಗಂಟೆಗೆ ಚಿತ್ರದುರ್ಗ ಜಿಪಂ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದು, ಪ್ರೊ.ಎಂ.ಗೋವಿಂದರಾವ್ ಅಧ್ಯಕ್ಷತೆ ವಹಿಸುವರು. ತುಮಕೂರು, ದಾವಣಗೆರೆ, ಚಿತ್ರದುರ್ಗ ಮತ್ತು ಶಿವಮೊಗ್ಗ ಜಿಲ್ಲೆಗಳ ಜನಪ್ರತಿನಿಧಿಗಳು, ಅಧಿಕಾರಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಳ್ಳುವರು.

ಈ ಸಂಬಂಧ ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಪೂರ್ವ ಸಿದ್ಧತಾ ಸಭೆ ನಡೆಸಿದ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಸಂವಾದ ಸಭೆಯನ್ನು ವ್ಯವಸ್ಥಿತವಾಗಿ ಕೈಗೊಳ್ಳಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ತಾಕೀತು ಮಾಡಿದರು.

ಚಿತ್ರದುರ್ಗ ಜಿಲ್ಲೆಯವರೇ ಆದ ಡಾ.ಡಿ.ಎಂ.ನಂಜುಂಡಪ್ಪ ವರದಿಗೆ ಸುಮಾರು 22 ವರ್ಷಗಳಷ್ಟು ಹಳೆಯದಾಗಿದ್ದು, ಆ ಸಂದರ್ಭದಲ್ಲಿ ಇದ್ದಂತಹ 175 ತಾಲೂಕುಗಳ ಸಂಖ್ಯೆ ಈಗ 240ಕ್ಕೆ ಹೆಚ್ಚಳ ಆಗಿದೆ. ಕಳೆದ 2023ರ ಬೆಳಗಾವಿ ಅಧಿವೇಶನದಲ್ಲಿ ಮುಖ್ಯಮಂತ್ರಿಗಳು ಘೋಷಿಸಿದಂತೆ, ಡಾ.ಡಿ.ಎಂ.ನಂಜುಂಡಪ್ಪ ವರದಿಯ ಅನುಷ್ಠಾನದಿಂದ ಅಭಿವೃದ್ಧಿ ಸಾಧ್ಯೆತೆಗಳ ಅವಲೋಕಿಸಬೇಕು. ಹಾಗೊಂದು ವೇಳೆ ಅಭಿವೃದ್ಧಿ ಹೊಂದದಿರುವ ಬಗ್ಗೆ ಹೊಸದಾಗಿ ಸೂಚ್ಯಂಕ ಕಂಡು ಹಿಡಿದು ಪ್ರಾದೇಶಿಕ ಅಸಮತೋಲನ ನಿವಾರಣೆ ಮಾಡುವ ಆಲೋಚನೆ ನಡೆಸಲಾಗಿತ್ತು. ಆರ್ಥಿಕ ತಜ್ಞ ಪ್ರೊ.ಎಂ.ಗೋವಿಂದರಾವ್ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ರಚಿಸಲಾಗಿತ್ತು ಎಂದರು.

ಸಮಿತಿ ಕೈಗೊಂಡ ತೀರ್ಮಾನದಂತೆ ಜಿಲ್ಲಾ ಹಂತದಲ್ಲಿ ಕ್ಷೇತ್ರ ಭೇಟಿಗಳನ್ನು ಹಮ್ಮಿಕೊಂಡು ಪ್ರಾಥಮಿಕ ಮಾಹಿತಿ ಕಲೆ ಹಾಕಲು ಸಭೆಗಳನ್ನು ಏರ್ಪಡಿಸಿ, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು, ಉದ್ದಿಮೆದಾರರು, ವರ್ತಕರು ಮತ್ತು ಸಾರ್ವಜನಿಕರಿಂದ ಮನವಿ ಆಲಿಸಿ, ಅಭಿಪ್ರಾಯ ಹಾಗೂ ಸಲಹೆಗಳನ್ನು ಪಡೆಯಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಬೆಂಗಳೂರು ವಿಭಾಗದಲ್ಲಿ ಬರುವ ತುಮಕೂರು, ದಾವಣಗೆರೆ, ಚಿತ್ರದುರ್ಗ ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ಸಂವಾದ ಸಭೆಯನ್ನು ಏ.28 ರಂದು ಚಿತ್ರದುರ್ಗದಲ್ಲಿ ನಡೆಯಲಿದೆ.

ಸಭೆಗೆ ನಾಲ್ಕೂ ಜಿಲ್ಲೆಗಳ ಲೋಕಸಭೆ, ರಾಜ್ಯಸಭೆ ಸದಸ್ಯರು, ವಿಧಾನಸಭೆ, ವಿಧಾನಪರಿಷತ್ ಸದಸ್ಯರು, ಉನ್ನತ ಅಧಿಕಾರಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಚೇಂಬರ್ ಆಫ್ ಕಾಮರ್ಸ್‍ನವರು ಆಗಮಿಸಲಿದ್ದಾರೆ.

ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅವರ ಇಲಾಖೆಗೆ ಸಂಬಂಧಿಸಿದ ಕಾರ್ಯಕ್ರಮ ಇದಾಗಿದೆ. ಎಲ್ಲ ಜನಪ್ರತಿನಿಧಿಗಳು, ಉನ್ನತ ಅಧಿಕಾರಿಗಳು, ಸಂಘ ಸಂಸ್ಥೆಗಳನ್ನು ಜಿಲ್ಲೆಗೆ ಗೌರವಯುತವಾಗಿ ಬರಮಾಡಿಕೊಂಡು, ಅವರಿಗೆ ಉತ್ತಮ ವ್ಯವಸ್ಥೆ ಕಲ್ಪಿಸಿಕೊಡಬೇಕಿದೆ. ಈ ನಿಟ್ಟಿನಲ್ಲಿ ಪ್ರತಿ ಜಿಲ್ಲೆಗೂ ಪ್ರತ್ಯೇಕವಾಗಿ ಜಿಲ್ಲಾ ಮಟ್ಟದ ಅಧಿಕಾರಿಯನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗುವುದು. ಈ ಅಧಿಕಾರಿಗಳು ಆಯಾ ಜಿಲ್ಲೆಯ ಜಿಲ್ಲಾಡಳಿತದೊಂದಿಗೆ ಸಮನ್ವಯ ಸಾಧಿಸಿಕೊಂಡು, ಜನಪ್ರತಿನಿಧಿಗಳು, ಉನ್ನತ ಅಧಿಕಾರಿಗಳು, ಸಂಘ ಸಂಸ್ಥೆಗಳ ಬರುವಿಕೆ ಬಗ್ಗೆ ಮಾಹಿತಿ ಸಂಗ್ರಹಿಸಬೇಕು, ಹಾಗೂ ಅವರ ವಾಸ್ತವ್ಯಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಕ್ರಮ ವಹಿಸಬೇಕು. ಯಾವುದೇ ಕೊರತೆ ಆಗದ ರೀತಿ ಸಿದ್ಧತೆ ಮಾಡಿಕೊಳ್ಳಬೇಕು, ಶಿಷ್ಟಾಚಾರ ಪಾಲನೆಯಲ್ಲಿ ಯಾವುದೇ ಲೋಪದೋಷಗಳು ಆಗಬಾರದು ಎಂದು ಸೂಚನೆ ನೀಡಿದರು.

ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯು ಪ್ರಮುಖವಾಗಿ ಆಯಾ ಜಿಲ್ಲೆಯಲ್ಲಿ ತಾಲೂಕುವಾರು ಅಭಿವೃದ್ಧಿ ಕುರಿತಂತೆ ಅಂಕಿ-ಅಂಶ ಸಂಗ್ರಹಣೆಗೆ ಹೆಚ್ಚು ಒತ್ತು ನೀಡುವುದರಿಂದ, ಸಂಬಂಧಿಸಿದ ಅಧಿಕಾರಿಗಳು ಆಯಾ ತಾಲೂಕು ವ್ಯಾಪ್ತಿಯಲ್ಲಿನ ಹಾಗೂ ಜಿಲ್ಲಾ ಮಟ್ಟದಲ್ಲಿನ ಜನಸಂಖ್ಯೆ, ಸಾಕ್ಷರತೆ ಪ್ರಮಾಣ, ಎಸ್‍ಸಿಪಿ/ಟಿಎಸ್‍ಪಿ ಯೋಜನೆಗಳ ಅನುಷ್ಠಾನ, ಅನುದಾನ ಹಂಚಿಕೆ, ಅನುದಾನ ಖರ್ಚು-ವೆಚ್ಚಗಳ ವಿವರ, ಆರೋಗ್ಯ ಸೂಚ್ಯಂಕ, ವಿವಿಧ ಯೋಜನೆಗಳ ಅನುಷ್ಠಾನ ಸೇರಿದಂತೆ ಸಮಗ್ರ ವಿವರವನ್ನು ಸಂಗ್ರಹಿಸಿ, ಪಿಪಿಟಿ ಮೂಲಕ ಮಾಹಿತಿಯನ್ನು ಸಭೆಗೆ ಒದಗಿಸುವಂತಾಗಬೇಕು. ಚಿತ್ರದುರ್ಗ ಸೇರಿದಂತೆ ಎಲ್ಲ 4 ಜಿಲ್ಲೆಗಳ ಅಂಕಿ-ಅಂಶಗಳನ್ನು ಆಯಾ ಜಿಲ್ಲಾಡಳಿತದಿಂದ ಸಂಗ್ರಹಿಸಿ, ಪಿಪಿಟಿ ವರದಿ ಸಿದ್ಧಪಡಿಸಿಕೊಂಡು, ಸಮಿತಿ ಸಭೆಯಲ್ಲಿ ಕೇಳಲಾಗುವ ಎಲ್ಲ ಮಾಹಿತಿಯೂ ಒಂದೆಡೆ ದೊರೆಯುವ ರೀತಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಸಿಇಒ ಎಸ್.ಜೆ ಸೋಮಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ ಬಂಡಾರು, ಅಪರ ಜಿಲ್ಲಾಧಿಕಾರಿ ಬಿ.ಟಿ ಕುಮಾರಸ್ವಾಮಿ, ಜಿಪಂ ಮುಖ್ಯ ಯೋಜನಾಧಿಕಾರಿ ಗಾಯತ್ರಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಚೇಂಬರ್ ಆಫ್ ಕಾಮರ್ಸ್‍ನ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!