ರಾಷ್ಟ್ರೀಯ ಪಕ್ಷಗಳು ರಾಜ್ಯದ ಹಿತ ಕಡೆಗಣೆಸುತ್ತಿರುವುದರಿಂದ ನಾಡು-ನುಡಿಯ ಹಿತಕ್ಕಾಗಿ ಪ್ರಾದೇಶಿಕ ಪಕ್ಷದ ಅಗತ್ಯವಿದೆ: ವೀರಭದ್ರಪ್ಪ

KannadaprabhaNewsNetwork | Updated : Aug 26 2024, 05:29 AM IST

ಸಾರಾಂಶ

ರಾಷ್ಟ್ರೀಯ ಪಕ್ಷಗಳು ರಾಜ್ಯದ ಹಿತ ಕಡೆಗಣೆಸುತ್ತಿರುವುದರಿಂದ ನಾಡು-ನುಡಿಯ ಹಿತಕ್ಕಾಗಿ ಹೋರಾಡುವ ಪ್ರಾದೇಶಿಕ ಪಕ್ಷದ ಅಗತ್ಯವಿದೆ. ಇದಕ್ಕಾಗಿ ಕನ್ನಡಿಗರು ಗಟ್ಟಿ ನಿರ್ಧಾರ ಮಾಡಬೇಕು ಎಂದು ಸಾಹಿತಿ ಕುಂ.ವೀರಭದ್ರಪ್ಪ ಹೇಳಿದರು.

 ಬೆಂಗಳೂರು :  ರಾಷ್ಟ್ರೀಯ ಪಕ್ಷಗಳು ರಾಜ್ಯದ ಹಿತ ಕಡೆಗಣೆಸುತ್ತಿರುವುದರಿಂದ ನಾಡು-ನುಡಿಯ ಹಿತಕ್ಕಾಗಿ ಹೋರಾಡುವ ಪ್ರಾದೇಶಿಕ ಪಕ್ಷದ ಅಗತ್ಯವಿದೆ. ಇದಕ್ಕಾಗಿ ಕನ್ನಡಿಗರು ಗಟ್ಟಿ ನಿರ್ಧಾರ ಮಾಡಬೇಕು ಎಂದು ಸಾಹಿತಿ ಕುಂ.ವೀರಭದ್ರಪ್ಪ ಹೇಳಿದರು.

ಬಸವ ಸಮಿತಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ‘ನಮ್ಮ ನಾಡು ನಮ್ಮ ಆಳ್ವಿಕೆ’ ಚಿಂತನಾ ಸಭೆಯಲ್ಲಿ ಮಾತನಾಡಿದ ಅವರು, ಈಗ ಒಂದು ಪಕ್ಷ ಅಸ್ತಿತ್ವಕ್ಕೆ ಬಂದರೆ ಮುಂದಿನ ಹತ್ತು ವರ್ಷದಲ್ಲಿ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಲಿದೆ. ಕನ್ನಡದ ನಿಜವಾದ ಸಂರಕ್ಷಕರು ಹಳ್ಳಿಯಲ್ಲಿದ್ದು ಪ್ರಾದೇಶಿಕ ಪಕ್ಷದ ಉದಯಕ್ಕೆ ಸಂಬಂಧಿಸಿದಂತೆ ಕನ್ನಡಿಗರು ಗಟ್ಟಿ ನಿರ್ಧಾರ ಮಾಡಬೇಕು ಎಂದರು.

ದೆಹಲಿಯಲ್ಲಿ ಹೈಕಮಾಂಡ್‌ ಕೇಂದ್ರಿತ ರಾಜಕೀಯ ಪಕ್ಷಗಳು ನಮಗೆ ಅಪಾಯಕಾರಿಯಾಗಿವೆ. ಆದ್ದರಿಂದ ಇವನ್ನು ಧಿಕ್ಕರಿಸಿ ಸ್ವಂತ ಪಕ್ಷ ಕಟ್ಟಬೇಕು. ಕನ್ನಡಿಗರ ಸ್ವಾಭಿಮಾನದ ಉಳಿವಿಗಾಗಿ ದೇವರಾಜ ಅರಸರು ಕಾಂಗ್ರೆಸ್‌ನಿಂದ ಹೊರಬಂದು ಸ್ವಂತ ಪಕ್ಷ ಸ್ಥಾಪಿಸಿದರು. ಆದರೆ ಇದಕ್ಕೆ ಜನಮನ್ನಣೆ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಅತಿವೃಷ್ಟಿ-ಅನಾವೃಷ್ಟಿ ಉಂಟಾದರೂ ಕೇಂದ್ರ ಸರ್ಕಾರದ ಬಳಿ ನಮ್ಮ ಸಂಸದರೂ ಧ್ವನಿ ಎತ್ತುತ್ತಿಲ್ಲ. ವಿಧಾನ ಮಂಡಲ ಅಧಿವೇಶನದಲ್ಲಿ ಶಾಸಕರೂ ಸಹ ಕನ್ನಡಿಗರ ಪರವಾಗಿ ಮಾತನಾಡುತ್ತಿಲ್ಲ. ವಿಧಾನಸೌಧದ ಮುಂದೆ ಚಳವಳಿ ಹಮ್ಮಿಕೊಳ್ಳದಿದ್ದರೆ ಕನ್ನಡ ಉಳಿಯಲು ಸಾಧ್ಯವಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ ಎಂದು ತಿಳಿಸಿದರು.

ಸಂಗೀತ ನಿರ್ದೇಶಕ ಹಂಸಲೇಖ ಮಾತನಾಡಿ, ನಾಡು-ನುಡಿಯ ಅಭಿವೃದ್ಧಿಗಾಗಿ ಹೊಸ ಪಕ್ಷ ಸ್ಥಾಪಿಸಬೇಕಿದೆ. ಇದು ಕಷ್ಟಕರವಾದರೂ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು. ಕನ್ನಡವೆಂದರೆ ಆವೇಶಪಡುವ, ಹೋರಾಟಕ್ಕೆ ಮುನ್ನುಗ್ಗುವ ಒಂದು ಸಮೂಹವಿದ್ದು ಅವರಿಗೆ ಮಾರ್ಗಸೂಚಿಗಳನ್ನು ಹಾಕಿಕೊಟ್ಟು ಪಕ್ಷದ ಹಿತಕ್ಕೆ ಬಳಸಬಹುದು ಎಂದು ಸಲಹೆ ನೀಡಿದರು. ಪತ್ರಕರ್ತ ಬಿ.ಎಂ.ಹನೀಫ್‌, ಗೀತರಚನೆಕಾರ ಕವಿರಾಜ್‌, ಚಿಂತಕ ಆನಂದ್‌ ಗುರು ಮತ್ತಿತರರು ಉಪಸ್ಥಿತರಿದ್ದರು.

Share this article