ಬತ್ತ ಖರೀದಿಗೆ ನೋಂದಣಿ ಕೇಂದ್ರ ತೆರೆಯಿರಿ: ಜಿಲ್ಲಾಧಿಕಾರಿ

KannadaprabhaNewsNetwork |  
Published : Oct 01, 2025, 01:01 AM IST
ಜಿಲ್ಲಾಧಿಕಾರಿ ಮಾತನಾಡಿದರು  | Kannada Prabha

ಸಾರಾಂಶ

ಪ್ರಸಕ್ತ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ ರೈತರಿಂದ ಬತ್ತ ಖರೀದಿಸಲು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ರೈತರನ್ನು ನೊಂದಣಿ ಮಾಡಲು ನೋಂದಣಿ ಕೇಂದ್ರಗಳನ್ನು ತೆರೆಯುವಂತೆ ಸೂಚನೆ

ಬೆಂಬಲ ಬೆಲೆಯಲ್ಲಿ ಬತ್ತ ಖರೀದಿಸುವ ಬಗ್ಗೆ ಜಿಲ್ಲಾ ಮಟ್ಟದ ಟಾಸ್ಕ್ ಪೋರ್ಸ್ ಸಭೆ

ಕನ್ನಡಪ್ರಭ ವಾರ್ತೆ ಕಾರವಾರ

ಪ್ರಸಕ್ತ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ ರೈತರಿಂದ ಬತ್ತ ಖರೀದಿಸಲು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ರೈತರನ್ನು ನೊಂದಣಿ ಮಾಡಲು ನೋಂದಣಿ ಕೇಂದ್ರಗಳನ್ನು ತೆರೆಯುವಂತೆ ಆಹಾರ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಬೆಂಬಲ ಬೆಲೆಯಲ್ಲಿ ಬತ್ತ ಖರೀದಿಸುವ ಬಗ್ಗೆ ಜಿಲ್ಲಾ ಮಟ್ಟದ ಟಾಸ್ಕ್ ಪೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸರ್ಕಾರವು ಪ್ರಸಕ್ತ ಸಾಲಿಗೆ ಬೆಂಬಲ ಬೆಲೆ ಯೋಜನೆಯಡಿ ಸಾಮಾನ್ಯ ಬತ್ತ ಪ್ರತೀ ಕ್ವಿಂಟಲ್ ಗೆ ₹2369 ಮತ್ತು ಗ್ರೇಡ್‌ ಎ ಬತ್ತಕ್ಕೆ ₹2389 ನಿಗದಿಪಡಿಸಿದ್ದು, ಜಿಲ್ಲೆಯ ರೈತರಿಂದ ಹೆಚ್ಚಿನ ಪ್ರಮಾಣದಲ್ಲಿ ಬತ್ತವನ್ನು ಖರೀದಿಸಲು ಅನುಕೂಲವಾಗುವಂತೆ ಎಲ್ಲಾ ತಾಲೂಕುಗಳಲ್ಲಿ ನೋಂದಣಿ ಕೇಂದ್ರಗಳನ್ನು ತೆರೆಯುವಂತೆ ತಿಳಿಸಿದರು.

ಟಿಎಪಿಸಿಎಂಎಸ್ ಕೇಂದ್ರಗಳ ಮುಖಾಂತರ ಬತ್ತ ಖರೀದಿಸಲು ಅನುಕೂಲವಾಗುವಂತೆ ನೋಂದಣಿ ಕೇಂದ್ರ ತೆರೆಯಬೇಕು, ಖರೀದಿ ಕೇಂದ್ರಗಳು ಸೂಕ್ತ ಗೋದಾಮು ಮತ್ತು ಅಗತ್ಯ ಮೂಲ ಸೌಕರ್ಯಗಳನ್ನು ಹೊಂದಿರುವ ಬಗ್ಗೆ ಪರಿಶೀಲನೆ ನಡೆಸಬೇಕು. ಎಫ್‌ಎಕ್ಯೂ ಗುಣಮಟ್ಟವನ್ನು ದೃಢೀಕರಿಸಲು ಪ್ರತೀ ಕೇಂದ್ರದಲ್ಲಿ ಗುಣಟ್ಟ ಪರೀಕ್ಷಕರನ್ನು ನೇಮಿಸಬೇಕು ಮತ್ತು ಖರೀದಿ ಅಧಿಕಾರಿಗಳನ್ನು ನೇಮಿಸಬೇಕು ಎಂದರು.

ರೈತರಿಂದ ಪ್ರತೀ ಎಕರೆಗೆ 25 ಕ್ವಿಂಟಲ್ ನಂತೆ ಗರಿಷ್ಠ 50 ಕ್ವಿಂಟಲ್ ಬತ್ತವನ್ನು ಖರೀದಿಸಬಹುದಾಗಿದ್ದು, ರೈತರಿಂದ ಖರೀದಿಸಿದ ಭತ್ತದ ಹಣವನ್ನು ಡಿಬಿಟಿ ಮೂಲಕ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಪಾವತಿಸಲಾಗುವುದು ಎಂದ ಅವರು, ಖರೀದಿ ಕೇಂದ್ರಗಳಲ್ಲಿ ಸಂಗ್ರಹವಾದ ಭತ್ತವನ್ನು ಹಲ್ಲಿಂಗ್ ಮಾಡಲು ಗಿರಣಿ ಮಾಲೀಕರನ್ನು ಗುರುತಿಸಬೇಕು ಎಂದರು.

ಕೃಷಿ ಇಲಾಖೆಯ ಮಾಹಿತಿಯಂತೆ ಜಿಲ್ಲೆಯಲ್ಲಿ 40626.30 ಹೆಕ್ಟೇರ್ ಪ್ರದೇಶದಲ್ಲಿ ಬತ್ತವನ್ನು ಬೆಳೆಯಲಾಗಿದ್ದು, ಅಂದಾಜು 10,95058 ಕ್ವಿಂಟಲ್ ಬತ್ತದ ಇಳುವರಿಯ ನಿರೀಕ್ಷೆಯಿದ್ದು ಇದಕ್ಕೆ ಅನುಗುಣವಾಗಿ ನೋಂದಣಿ ಕೇಂದ್ರ ಮತ್ತು ಖರೀದಿ ಕೇಂದ್ರಗಳನ್ನು ತೆರೆಯಲು ಅಗತ್ಯ ಸಿದ್ದತೆ ಮಾಡಿಕೊಳ್ಳುವಂತೆ ಸೂಚಿಸಿದರು.

ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವಪ್ರಸಾದ್ ಗಾಂವಕರ್, ಆಹಾರ ಇಲಾಖೆ ಉಪ ನಿರ್ದೇಶಕ ಮಂಜುನಾಥ್ ರೇವಣ್‌ಕರ್ ಮತ್ತಿತರರು ಇದ್ದರು.

PREV

Recommended Stories

ಇಂದಿನಿಂದ ಮಹಿಳಾ ಏಕದಿನ ವಿಶ್ವಕಪ್‌ : 8 ತಂಡ, 31 ಪಂದ್ಯ
ಅಕ್ರಮ ತಡೆಗೆ ‘ಡಿಜಿಟಲ್‌’ ಭೂಸ್ವಾಧೀನ: ಬೈರೇಗೌಡ