ಕಾಲೇಜಿನ ಹಿತಾಸಕ್ತಿ ಕಾಯುವ ಕೆಲಸ ಮಾಡಿ: ಅನುಪಮಾ

KannadaprabhaNewsNetwork |  
Published : Oct 01, 2025, 01:01 AM IST
೨೦೨೫-೨೬ನೇ ಸಾಲಿನ ವಿದ್ಯಾರ್ಥಿ ಒಕ್ಕೂಟದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ | Kannada Prabha

ಸಾರಾಂಶ

ವಿದ್ಯಾರ್ಥಿ ಒಕ್ಕೂಟದಲ್ಲಿ ಆಯ್ಕೆಯಾಗಿರುವ ನಿಮಗೆ ಇದು ಅಧಿಕಾರದ ಕುರ್ಚಿ ಅಲ್ಲ. ಇದು ಸೇವೆಯನ್ನು ಮಾಡಲು ಕಲಿಯಲು ಸಿಕ್ಕಿರುವ ಕುರ್ಚಿ. ಆ ಮೂಲಕ ಕಾಲೇಜಿನ ಹಿತಾಸಕ್ತಿಯನ್ನು ಕಾಯುವ ಕೆಲಸವನ್ನು ಮಾಡಬೇಕು.

೨೦೨೫-೨೬ನೇ ಸಾಲಿನ ವಿದ್ಯಾರ್ಥಿ ಒಕ್ಕೂಟದ ಉದ್ಘಾಟನೆ, ಪದಗ್ರಹಣ ಸಮಾರಂಭಕನ್ನಡಪ್ರಭ ವಾರ್ತೆ ಹೊನ್ನಾವರ

ವಿದ್ಯಾರ್ಥಿ ಒಕ್ಕೂಟದಲ್ಲಿ ಆಯ್ಕೆಯಾಗಿರುವ ನಿಮಗೆ ಇದು ಅಧಿಕಾರದ ಕುರ್ಚಿ ಅಲ್ಲ. ಇದು ಸೇವೆಯನ್ನು ಮಾಡಲು ಕಲಿಯಲು ಸಿಕ್ಕಿರುವ ಕುರ್ಚಿ. ಆ ಮೂಲಕ ಕಾಲೇಜಿನ ಹಿತಾಸಕ್ತಿಯನ್ನು ಕಾಯುವ ಕೆಲಸವನ್ನು ಮಾಡಬೇಕು ಎಂದು ಸಾಹಿತಿ, ಧಾರವಾಡದ ಕವಿವಿಯ ಸಿಂಡಿಕೇಟ್ ಸದಸ್ಯೆ ಡಾ. ಎಚ್.ಎಸ್. ಅನುಪಮಾ ಹೇಳಿದರು.

ಮಲ್ನಾಡ್ ಪ್ರೊಗ್ರೆಸ್ಸಿವ್ ಎಜ್ಯುಕೇಶನ್ ಸೊಸೈಟಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಆರ್.ಎಸ್. ಹೆಗಡೆ ಸಭಾಭವನದಲ್ಲಿ ನಡೆದ ೨೦೨೫-೨೬ನೇ ಸಾಲಿನ ವಿದ್ಯಾರ್ಥಿ ಒಕ್ಕೂಟದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.

ವಿದ್ಯಾರ್ಥಿನಿಯರು ಹಿಂಜರಿಕೆ ಸ್ವಭಾವ ಬಿಡಬೇಕು. ತಮ್ಮ ಧ್ವನಿ ಎತ್ತರಿಸಬೇಕು. ವಿದ್ಯಾರ್ಥಿಗಳು ಕೇವಲ ಅಂಕಗಳಿಗಾಗಿ ಇರುವ ಯಂತ್ರಗಳಲ್ಲ. ಬದುಕಿನ ಸಮಗ್ರತೆಯನ್ನು ಅರ್ಥ ಮಾಡಿಕೊಂಡಿರಬೇಕು. ಸಮಾಜಕ್ಕೆ ಉದಾತ್ತ ಮಾದರಿ ಕೊಡಬೇಕು. ಯಾವುದೋ ಸೆಲೆಬ್ರೇಟಿಯನ್ನು ನೋಡಲು ಹೋಗಿ ಯಾರದ್ದೋ ಚಪ್ಪಲಿ ಅಡಿಯಲ್ಲಿ ಸಿಲುಕಿ ಸಾಯುವ ಹಂತಕ್ಕೆ ಬಂದಿದ್ದೇವೆ. ನಾವು ಬೌದ್ಧಿಕವಾಗಿ ಬಡವರಾಗುತ್ತಿದ್ದೇವೆ. ಸಮಾಜವನ್ನು ಒಡೆಯುವ ಕೆಲಸ ಆಗುತ್ತಿದೆ. ನಿರ್ಭಿತಿಯಿಂದ ಮಾತಾಡುವ ಕೆಲಸ ಆಗಬೇಕು. ಸ್ತೋತ್ರ ಪಠಿಸುವುದನ್ನು ಬಿಟ್ಟು ಹೊಸ ವಿಚಾರಗಳಿಗೆ ಹೊಂದಿಕೊಳ್ಳಿ ಎಂದರು.

ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್. ಮಾತನಾಡಿ, ನಾವು ಮಾತಾಡುವ ಧ್ವನಿ ಸ್ಪಷ್ಟವಾಗಿರಬೇಕು. ಒಳ್ಳೆಯ ನಾಯಕತ್ವ ಬೆಳೆಸಿಕೊಳ್ಳಲು ನಾವು ಮೊದಲು ಜನರನ್ನು ಮ್ಯಾನೆಜ್ ಮಾಡಲು ಕಲಿಯಬೇಕು. ಇದು ಯಾವ ಪಠ್ಯದಲ್ಲೂ ಸಿಗುವುದಿಲ್ಲ. ನಾಯಕತ್ವ, ಧೈರ್ಯ ಹಾಗೂ ಆತ್ಮವಿಶ್ವಾಸ ಬೆಳೆಸಿಕೊಳ್ಳಲು ಕಾಲೇಜಿನ ಯೂನಿಯನ್ ಸಹಾಯ ಮಾಡುತ್ತದೆ. ಯಶಸ್ಸನ್ನು ಪಡೆಯಲು ಯಾವುದೇ ಶಾರ್ಟ್ಕಟ್ ಇಲ್ಲ. ಒಂದೊಂದೆ ಹಂತವನ್ನು ದಾಟಿ ನಾವು ಯಶಸ್ಸಿಗೆ ಏರಬೇಕು. ಆಸಕ್ತಿಯನ್ನು ಇಟ್ಟುಕೊಂಡರೆ ನಾವು ಹೊಸತನ್ನು ಹುಡುಕಲು ಸಾಧ್ಯ ಎಂದರು.

ಎಂಪಿಇ ಸೊಸೈಟಿಯ ಜಂಟಿ ಕಾರ್ಯದರ್ಶಿ ಜಿ.ಪಿ. ಹೆಗಡೆ ಮಾತನಾಡಿ, ಕಾಲೇಜಿನ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಸರಿಯಾಗಿ ಬಳಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪದವಿ ಕಾಲೇಜಿನ ಪ್ರಾಚಾರ್ಯ ಡಾ. ಡಿ.ಎಲ್. ಹೆಬ್ಬಾರ್ ಮಾತನಾಡಿದರು.

ಎಂ.ಪಿ. ಸೊಸೈಟಿಯ ಕಾರ್ಯದರ್ಶಿ ಎಸ್.ಎಂ. ಭಟ್ ಹಾಗೂ ಕಲಾ ವಿಭಾಗದ ಸಲಹೆಗಾರ ರಾಮನಾಥ್ ಭಟ್ ವೇದಿಕೆ ಮೇಲೆ ಉಪಸ್ಥಿತರಿದ್ದರು.

ಸಂಗೀತ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥಿಸಿದರು .ಯೂನಿಯನ್ ಉಪಾಧ್ಯಕ್ಷ ಡಾ. ಎಂ.ಜಿ. ಹೆಗಡೆ ಸ್ವಾಗತಿಸಿದರು. ಯೂನಿಯನ್ ಸಲಹೆಗಾರ ಡಾ. ಸುರೇಶ್ ಎಸ್, ಪರಿಚಯಿಸಿದರು. ಕ್ರೀಡಾ ಸಲಹೆಗಾರ ಆರ್.ಕೆ. ಮೇಸ್ತ ಪ್ರತಿಜ್ಞಾ ವಿಧಿ ಬೋಧಿಸಿದರು. ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಗೌಡ ವಂದಿಸಿದರು. ಪ್ರಶಾಂತ್ ಹೆಗಡೆ ಹಾಗೂ ಬಿಂದು ಅವಧಾನಿ ನಿರೂಪಿಸಿದರು.

PREV

Recommended Stories

ಇಂದಿನಿಂದ ಮಹಿಳಾ ಏಕದಿನ ವಿಶ್ವಕಪ್‌ : 8 ತಂಡ, 31 ಪಂದ್ಯ
ಅಕ್ರಮ ತಡೆಗೆ ‘ಡಿಜಿಟಲ್‌’ ಭೂಸ್ವಾಧೀನ: ಬೈರೇಗೌಡ