ಚಂದ್ರು ಕೊಂಚಿಗೇರಿ
ಹೂವಿನಹಡಗಲಿ: ರಾಜ್ಯ ಸರ್ಕಾರ ಪ್ರತಿವರ್ಷ ಅ. 2ರಂದು ಮಹಾತ್ಮ ಗಾಂಧೀಜಿ ಜಯಂತಿ ಅಂಗವಾಗಿ ರಾಜ್ಯದಲ್ಲಿ ಉತ್ತಮ ಸಾಧನೆ ಮಾಡಿದ ಗ್ರಾಮ ಪಂಚಾಯಿತಿಗಳಿಗೆ ಗಾಂಧಿ ಗ್ರಾಮ ಪುರಸ್ಕಾರ ನೀಡುತ್ತಿತ್ತು. ಗ್ರಾಪಂ ಸಾಧನೆ ಮೌಲ್ಯಮಾಪನ ನಡೆಯುತ್ತಿದ್ದು ಪ್ರತಿ ತಾಲೂಕಿಗೊಂದು ಗ್ರಾಪಂಗೆ ಗಾಂಧಿ ಗ್ರಾಮ ಪುರಸ್ಕಾರ ನೀಡಲಾಗುತ್ತಿತ್ತು, ಐದು ಲಕ್ಷ ರು.ಗ ವಿಶೇಷ ಅನುದಾನವನ್ನೂ ಸಹ ನೀಡಲಾಗುತ್ತಿತ್ತು. ಜೊತೆಗೆ ಗ್ರಾಪಂಗೆ ಪ್ರಶಸ್ತಿ ಪತ್ರ, ಸ್ಮರಣಿಕೆ ನೀಡಿ, ಮುಖ್ಯಮಂತ್ರಿ, ಗ್ರಾಮೀಣಾಭಿವೃದ್ಧಿ ಸಚಿವರಿಂದ ಪ್ರಶಸ್ತಿ ಪ್ರದಾನ ನಡೆಯುತ್ತಿತ್ತು.ಆದರೆ ಈ ಬಾರಿ ಈ ಪ್ರಶಸ್ತಿಗೆ ಸರ್ಕಾರ ಎಳ್ಳು ನೀರು ಬಿಟ್ಟಂತಿದೆ. ಇನ್ನೂ ಪ್ರಶಸ್ತಿಗೆ ಆಯ್ಕೆ ನಡೆದಿಲ್ಲ, ತಾಲೂಕು ಮಟ್ಟದಲ್ಲಿ ಗ್ರಾಪಂಗಳ ಸಾಧನೆಯ ಮೌಲ್ಯಮಾಪನವೂ ನಡೆದಿಲ್ಲ. ಪ್ರಶಸ್ತಿ ನೀಡುವ ಯಾವುದೇ ಸೂಚನೆ ಸಹ ಕಾಣುತ್ತಿಲ್ಲ.
ಪ್ರತಿವರ್ಷವೂ ಅ. 2 ಗಾಂಧಿ ಜಯಂತಿಗೂ ತಿಂಗಳ ಮೊದಲೇ, ರಾಜ್ಯದ 6022 ಗ್ರಾಮ ಪಂಚಾಯಿತಿಗಳ ಸಾಧನೆಯ ಮೌಲ್ಯಮಾಪನ ಪ್ರಕ್ರಿಯೆ ನಡೆಯುತ್ತಿತ್ತು. ಆದರೆ, ಈ ಬಾರಿ ಸರ್ಕಾರ ಗಾಂಧಿ ಗ್ರಾಮ ಪುರಸ್ಕಾರ ನೀಡಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಯಾವ ಆದೇಶವೂ ನೀಡಿಲ್ಲ. ಸಾಧನೆ ಮಾಡಿರುವ ಪಂಚಾಯಿತಿಗಳಿಗೆ ಪ್ರಶಸ್ತಿ ಪತ್ರ, ಸ್ಮರಣಿಕೆ ಮತ್ತು ₹5 ಲಕ್ಷ ರುಗಳ ವಿಶೇಷ ಅನುದಾನವೂ ಇಲ್ಲದಂತಾಗಿದೆ.ಕಳೆದ 2023-24ನೇ ಸಾಲಿನಲ್ಲಿ ಸರ್ಕಾರ ಗಾಂಧಿ ಗ್ರಾಮ ಪುರಸ್ಕಾರ ವಿತರಿಸಲು ಸಮಾರಂಭ ಆಯೋಜಿಸಿಲ್ಲ, ಅಂದು ಪುರಸ್ಕಾರಕ್ಕೆ ಆಯ್ಕೆಯಾಗಿದ್ದ ಗ್ರಾಮ ಪಂಚಾಯಿತಿಗಳಿಗೆ ಪ್ರಮಾಣ ಪತ್ರ, ಸ್ಮರಣಿಕೆ ನೀಡಿಲ್ಲ, ಆದರೆ, ₹5 ಲಕ್ಷಗಳ ವಿಶೇಷ ಅನುದಾನ ಮಾತ್ರ ನೀಡಿದ್ದಾರೆ.
₹5 ಲಕ್ಷ ವಿಶೇಷ ಅನುದಾನ: ಸರ್ಕಾರ ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ, ಉತ್ತರದಾಯಿತ್ವ ಮತ್ತು ಶೀಘ್ರತೆಯನ್ನು ತರುವ ಉದ್ದೇಶದಿಂದ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗುವ ಗ್ರಾಪಂಗಳಿಗೆ ₹5 ಲಕ್ಷ ವಿಶೇಷ ಅನುದಾನ ನೀಡಲಾಗುತ್ತಿತ್ತು. ಇದರ ಬಳಕೆಗೆ ಕೆಲ ಮಾರ್ಗಸೂಚಿಗಳನ್ನು ಸರ್ಕಾರ ಸಿದ್ದಪಡಿಸಿತ್ತು.ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ, ಆಟದ ಮೈದಾನಗಳಿಗೆ ಫ್ಲಡ್ ಲೈಟ್ ಅಳವಡಿಕೆ, ಗ್ರಾಮ ಪಂಚಾಯಿತಿ ಸಭೆಗಳ ನಡುವಳಿಗಳ ನೇರ ಪ್ರಸಾರ ಮಾಡುವ ವ್ಯವಸ್ಥೆ ಕಲ್ಪಿಸುವುದು. ಸೋಲಾರ್ ಬೀದಿ ದೀಪಗಳ ಅಳವಡಿಕೆ, ಗ್ರಾಮೀಣ ಗೌರವ ಯೋಜನೆ, ಸಮುದಾಯ ಶೌಚಾಲಯ ಸಂಕೀರ್ಣ ನಿರ್ಮಾಣ, ಕಸ ಸಂಸ್ಕರಣಾ ಘಟಕ ಸ್ಥಾಪನೆ, ಕಸ ವಿಲೇವಾರಿಗೆ ವಾಹನಗಳ ಖರೀದಿ, ಎಲ್.ಇ.ಡಿ ಬೀದಿ ದೀಪಗಳ ಅಳವಡಿಕೆ, ಬೀದಿ ದೀಪಗಳಿಗೆ ಸ್ವಯಂ ಚಾಲಿತ ನಿಯಂತ್ರಣಗಳನ್ನು ಅಳವಡಿಸುವುದು, ಗ್ರಾಪಂ ಕಚೇರಿಗೆ ಸಿಸಿ ಟಿವಿ ಅಳವಡಿಕೆ, ಗ್ರಾಪಂಗಳಿಗೆ ಅಗತ್ಯವಿರುವ ಪೀಠೋಪಕರಣ, ಕಂಪ್ಯೂಟರೀಕರಣಕ್ಕಾಗಿ ಕೊರತೆಯಾಗುವ ಅನುದಾನ ಭರಿಸುವುದು ಇಂತಹ ಕಾರ್ಯಕ್ರಮಗಳಿಗೆ ಮಾತ್ರ ₹5 ಲಕ್ಷ ವಿಶೇಷ ಅನುದಾನ ಬಳಕೆ ಮಾಡಬೇಕೆಂಬ ಸೂರ್ಗಸೂಚಿಗಳು ಇವೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಸಾಧನೆ ಮಾಡಿದ ಪಂಚಾಯಿತಿಗಳ ಮೌಲ್ಯಮಾಪನ ಕುರಿತು ನಮಗೆ ಯಾವುದೇ ಆದೇಶ ಬಂದಿಲ್ಲ. ಹಾಗಾಗಿ ನಮ್ಮಿಂದ ಯಾವುದೇ ಪ್ರಕ್ರಿಯೆ ನಡೆದಿಲ್ಲ ಎಂದು ಹೂವಿನಹಡಗಲಿ ತಾಪಂ ಇಒ ಜಿ. ಪರಮೇಶಪ್ಪ ಹೇಳಿದರು.ಕಳೆದ ಬಾರಿ ಹಿರೇಮಲ್ಲನಕೆರೆ ಗ್ರಾಪಂ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿತ್ತು. ಸರ್ಕಾರ ನಮ್ಮ ಗ್ರಾಪಂಗೆ ಈವರೆಗೂ ಪ್ರಮಾಣ ಪತ್ರ ಮತ್ತು ಸ್ಮರಣಿಕೆ ನೀಡಿಲ್ಲ, ₹5 ಲಕ್ಷ ಅನುದಾನ ನೀಡಿದ್ದಾರೆ. ಈ ಬಾರಿ ಇಂತಹ ಗಾಂಧಿ ಗ್ರಾಮ ಪುರಸ್ಕಾರ ನಡೆಯದಿರುವುದು ದುರಂತದ ಸಂಗತಿ ಎಂದು ಹಿರೇಮಲ್ಲನಕೆರೆ ಗ್ರಾಮದ ಮುಖಂಡ ಆಂಜನೇಯ ಧಾರವಾಡದ ಹೇಳಿದರು.