ಅಮರೇಶ್ವರಸ್ವಾಮಿ ಕಂದಗಲ್ಲಮಠ ಕುಕನೂರು
ಐತಿಹಾಸಿ ಹಾಗೂ ಪುರಾತನ ಐತಿಹ್ಯ ಹೊಂದಿರುವ ಕುಕನೂರು ದ್ಯಾಮಮ್ಮನೆಂದೇ ಪ್ರಸಿದ್ಧಿ ಪಡೆದಿರುವ ಮಹಾಮಾಯಾದೇವಿಯ ಮಹಾರಥೋತ್ಸವ ಅ.1 ರ ಸಂಜೆ 4 ಗಂಟೆಗೆ ಅಪಾರ ಭಕ್ತಸಮೂಹ ಮಧ್ಯೆ ಜರುಗಲಿದೆ. ಮಹಾರಥೋತ್ಸವಕ್ಕೆ ಜಿಲ್ಲೆ ಸೇರಿದಂತೆ ಹೊರ ರಾಜ್ಯದಿಂದಲೂ ಭಕ್ತರು ಆಗಮಿಸುತ್ತಿದ್ದಾರೆ.ಮಹಾಮಾಯಾ ನೆಲೆಸಲು ಪುರಾಣದಲ್ಲಿ ಒಂದು ಪ್ರಸಂಗವಿದೆ. ಕುಂತಳಪುರ ನಗರವನ್ನು ಚಂದ್ರಹಾಸ ರಾಜ ಆಳುತ್ತಿದ್ದ. ಆಗ ಆತನು ಒಮ್ಮೆ ಉಗ್ರ ತಪಸ್ಸು ಮಾಡಿ ಈ ದೇವಿಯ ಸಾಕ್ಷಾತ್ಕಾರ ಪಡೆದನಂತೆ, ಆ ನಂತರ ದೇವಿಯ ಮೂರ್ತಿ ಪ್ರತಿಷ್ಠಾಪಿಸುತ್ತಾನೆ. ಆಗಿನಿಂದ ಸರ್ವ ಮಂಗಳೆಯಾಗಿ ಭಕ್ತರನ್ನು ದೇವಿ ಪೊರೆಯುತ್ತಿದ್ದಾಳೆ.
ದೇವಸ್ಥಾನದಲ್ಲಿ ನವರಾತ್ರಿ ಆರಂಭದ ದಿನದಿಂದ ಪೂಜಾ ಅಲಂಕಾರ ದೇವಿಗೆ ಸಲ್ಲುತ್ತವೆ.ದೇವಸ್ಥಾನದ ಆವರಣದಲ್ಲಿ ನವಲಿಂಗೇಶ್ವರ ಮೂರ್ತಿ ಪ್ರತಿಷ್ಠಾಪಿಸಲ್ಪಟ್ಟಿವೆ. ದೇವಸ್ಥಾನದಲ್ಲಿರುವ ಪುಸ್ಕರಣಿ ಅಭಿವೃದ್ಧಿ, ಶುದ್ದ ಕುಡಿವ ನೀರಿನ ಘಟಕ ಸ್ಥಾಪಿಸಲಾಗಿದೆ.
೭ರಿಂದ ೧೬ನೇ ಶತಮಾನಗಳ ನಡುವಿನ ೧೭ ಶಾಸನಗಳಲ್ಲಿ ತನ್ನ ಐತಿಹ್ಯ ಹೊಂದಿದೆ. ಕುಂತಳಪುರ ಹೆಸರಿನ ಕುಕನೂರು ಪಟ್ಟಣವು ತನ್ನ ಸುತ್ತಮುತ್ತಲಿನ ಹತ್ತಾರು ಪುರಾತನ ದೇವಾಲಯ, ಮಂಟಪ ಮತ್ತು ೧೪ ಶಿಲಾ ಶಾಸನ ಹೊಂದಿದ್ದು, ಇಂದೊಂದು ಭವ್ಯ ಪರಂಪರೆಯ ನಾಡು ಎಂದೇ ಬಿಂಬಿತ. ಪುರಾತನ ಕಾಲದ ರಾಜರ ಆಡಳಿತಾವಧಿಯಲ್ಲಿ ಇದೊಂದು ಅಗ್ರಹಾರವಾಗಿದ್ದು, ತನ್ನದೆಯಾದ ಕೆಲವೊಂದು ವಿಶೇಷತೆ ಒಳಗೊಂಡು ನಂಬಿಕೆಗೆ ಪಾತ್ರವಾಗಿದೆ. ದುಷ್ಟರ ಅಟ್ಟಹಾಸ ಸಹಿಸದೇ ಆತಂಕದಲ್ಲೇ ಜೀವನ ಸಾಗಿಸುತ್ತಿದ್ದ ಗ್ರಾಮದ ಜನರ ಶಾಂತಿ ಬದುಕಿಗಾಗಿ ದೇವತೆಗಳು ವಿವಿಧ ರೂಪದಲ್ಲಿ ಅವತಾರ ಎತ್ತಿ ದುಷ್ಟ ಶಕ್ತಿಗಳನ್ನು ಸಂಹರಿಸಿದ ಪುರಾವೆಗಳು ಇಲ್ಲಿವೆ. ರಾಜ ಮಹಾರಾಜರ ಆಳ್ವಿಕೆಗೆ ಒಳಪಟ್ಟ ಈ ಭಾಗ ಹಿಂದೆ ಯಲಂಬರಗಿ ಎನ್ನುವ ಇಂದಿನ ಯಲಬುರ್ಗಾ ರಾಜಧಾನಿಯಾದ ಕುಕನೂರು ಸ್ಥಳದಲ್ಲಿ ಆಳ್ವಿಕೆ ನಡೆಸಿದ ಸಿಂಧಕುಲದ ಮಹಾಮಂಡಲೇಶ್ವರ ಶ್ರೀಮಹಾಮಾಯಾ ದೇವಿಗೆ ಜೇಷ್ಠಾದೇವಿ, ಗ್ರಾಮದ ಅನುಷ್ಠಾನ ದೇವತೆ, ಭಗವತೆ ಪ್ರತ್ಯಕ್ಷ ಜಗದಂಬಿಕೆ ಎಂಬ ನಾನಾ ರೀತಿಯಲ್ಲಿ ವರ್ಣಿಸಿ ಪೂಜಿಸಿ ಪುನೀತರಾಗಿದ್ದಾರೆ ಎನ್ನುವುದನ್ನು ಇತಿಹಾಸ ಹೇಳುತ್ತದೆ. ಮಹಾಮಾಯಾ ಮಂದಿರಕ್ಕೆ ಪೂರ್ವದ್ವಾರವಿದ್ದರೂ ದೇವಿ ದಕ್ಷಿಣಾಭಿಮುಖವಾಗಿ ನಿಂತಿದ್ದಾಳೆ. ಸಾಕ್ಷಾತ್ ಪರಮೇಶ್ವರನೆ ಪಾರ್ವತಿ ಹಾಗೂ ಕ್ಷೇತ್ರಪಾಲಕನೊಂದಿಗೆ ಈ ಸ್ಥಳಕ್ಕೆ ಆಗಮಿಸಿದ್ದರೆಂದು ಪುರಾಣಗಳು ಕೊಂಡಾಡುತ್ತವೆ.ದೇವಸ್ಥಾನದ ಆವರಣದಲ್ಲಿ ಶಿವನ ೧೧ ರೂಪಗಳು. ದೇವಿಯ ೧೮ ರೂಪಗಳನ್ನು ಕಾಣಬಹುದು. ಒಂದೇ ಕಡೆ ಎರಡು ಶಕ್ತಿಶಾಲಿ ದೇವತೆಗಳು ನೆಲೆಸಿರುವುದು ವಿರಳ. ಆದರೆ ಈ ಮಹಾಮಾಯಾ ಪಕ್ಕದಲ್ಲಿ ಮಹಾಕಾಳಿ ಎಂಬ ಹೆಸರಿನ ಸಂರಕ್ಷಕ ಇದ್ದಾನೆಂದು ಇಲ್ಲಿನ ಶಾಸನ ಪ್ರಸ್ತುತಪಡಿಸುತ್ತಿದೆ.
ಈ ದೇವಾಲಯದ ವೈಶಿಷ್ಟ್ಯವೆಂದರೆ ವರ್ಷಾವಧಿ ಪೂರ್ತಿ ಶೀಥಿಳೀಕರಿಸಿದಂತೆ ತಂಪು ವಾತಾವರಣ ಇರುತ್ತದೆ. ೯ ಜ್ಯೋರ್ತಿಲಿಂಗ ಇರುವ ಐತಿಹಾಸಿಕ, ಪುರಾತನ ದೇವಸ್ಥಾನ ಸಿಗುವುದು ಅಪರೂಪ. ನವಲಿಂಗೇಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿ ಶ್ರೀತ್ರಯಂಬಕೇಶ್ವರ, ಕಾಶಿ ವಿಶ್ವನಾಥ, ಸೋಮನಾಥ, ಕೇದರನಾಥ, ಭೀಮಶಂಕರ, ರಾಮೇಶ್ವರ, ಪೂಷ್ಮೇಶ್ವರ, ಮಹಾಕಾಲೇಶ್ವರ ಮತ್ತು ಮಾರ್ಕಂಡೇಶ್ವರ ಒಂಬತ್ತು ದೇವಸ್ಥಾನಗಳಿವೆ. ಐತಿಹಾಸಿಕ ಪರಂಪರೆ ಸಾರುತ್ತದೆ.ಶ್ರೀಮಹಾಮಾಯಾ ದೇವಿ ಶಕ್ತಿ ವಿಶಿಷ್ಟ. ಅ.೧ರಂದು ಬುಧವಾರ ಸಂಜೆ ೪ ಗಂಟೆಗೆ ಸಾವಿರಾರೂ ಭಕ್ತ ಸಮೂಹದ ಮಧ್ಯೆ ವಿಜೃಂಭಣೆಯಿಂದ ರಥೋತ್ಸವ ನಡೆಯಲಿದೆ. ಮಹಾಮಾಯಾ ದೇವಸ್ಥಾನ ಭಕ್ತಕೋಟಿಯ ಶ್ರದ್ಧಾ ಕೇಂದ್ರವಾಗಿದ್ದು, ಶರಣೆಂದು ಸತ್ಯ ಸಂಕಲ್ಪದಿಂದ ಆರಾಧಿಸುವ ಭಕ್ತರಿಗೆ ಮಹಾಮಾಯಾ ಸನ್ಮಂಗಲದಾತೆ ಆಗಿದ್ದಾಳೆ ಎಂದು ಕುಕನೂರು ಪಪಂ ಅಧ್ಯಕ್ಷೆ ಲಲಿತಮ್ಮ ರಮೇಶ ಯಡಿಯಾಪೂರ ತಿಳಿಸಿದ್ದಾರೆ.