ಕನ್ನಡಪ್ರಭ ವಾರ್ತೆ ಬೆಳಗಾವಿ
ಜಿಲ್ಲೆಯಲ್ಲಿ ಬೆಳವಡಿ, ಬೈಲಹೊಂಗಲ, ನೇಸರಗಿಯಲ್ಲಿ 2, ದೇವಲಾಪುರ, ಸವದತ್ತಿ, ಮುರಗೋಡ, ಹೊಸೂರ, ಗೋಕಾಕ, ಮೂಡಲಗಿ, ಸಂಕೇಶ್ವರ, ನಿಪ್ಪಾಣಿಗಳಲ್ಲಿ ಒಟ್ಟು 13 ಖರೀದಿ ಕೇಂದ್ರಗಳನ್ನು ಸೆ.19ರಿಂದ ಪ್ರಾರಂಭಿಸಲಾಗಿತ್ತು. ಡಿ.17 ನೋಂದಣಿಗೆ ಕೊನೆಯ ದಿನವಾಗಿದ್ದು, 25ರವರೆಗೆ ನೋಂದಣಿ ಮಾಡಿಸಿದ ರೈತರ ಸೋಯಾಬೀನ್ ಖರೀದಿ ಮಾಡಲಾಗುತ್ತಿದೆ. ನೇಸರಗಿ, ಬೈಲಹೊಂಗಲ, ಬೆಳವಡಿ ಸೇರಿದಂತೆ ಮತ್ತಿತರರ ಕಡೆಗಳಲ್ಲಿ ಮಳೆಯಿಂದಾಗಿ ದಾರಿ ಇಲ್ಲದ್ದರಿಂದ ಹಾಗೂ ಮುಂಗಾರು ಹಂಗಾಮು ಬಿತ್ತನೆ ಕೆಲಸದಲ್ಲಿ ರೈತರು ಬ್ಯುಜಿಯಾದ ಕಾರಣ ಸೋಯಾಬೀನ್ ಕಿತ್ತು ಬಣವಿ ಹಾಕಿ ಡಿಸೆಂಬರ್, ಜನವರಿ ತಿಂಗಳಲ್ಲಿ ಒಕ್ಕಲು ಮಾಡಿ ಮಾರಾಟ ಮಾಡುತ್ತಾರೆ. ಹೀಗಾಗಿ ಕಳೆದ ಎರಡು ದಿನಗಳಿಂದ ಹೆಚ್ಚಿನ ಪ್ರಮಾಣದಲ್ಲಿ ರೈತರು ಖರೀದಿ ಕೇಂದ್ರಗಳಿಗೆ ಬಂದಿದ್ದರು.
ಆದರೆ, ಡಿ.17 ನೋಂದಣಿಗೆ ಕೊನೆಯ ದಿನ ಎಂದು ಗೊತ್ತಿಲ್ಲದ ಅನೇಕ ರೈತರು ಬೆಳಗ್ಗೆಯಿಂದಲೇ ಖರೀದಿ ಕೇಂದ್ರಗಳಿಗೆ ಆಗಮಿಸಿ ವಿಚಾರಿಸಿ ಅವಧಿ ಮುಗಿದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಕೇಂದ್ರದ ಸಿಬ್ಬಂದಿ ನೋಂದಣಿ ಕ್ಲೋಸ್ ಆಗಿದೆ. ಸರ್ಕಾರ ಅವಧಿ ವಿಸ್ತರಣೆ ಮಾಡುವ ಭರವಸೆ ಇದ್ದು, ವಿಸ್ತರಣೆ ಮಾಡಿದರೆ ರೈತರಿಗೆ ಮಾಹಿತಿ ನೀಡುವುದಾಗಿ ಹೇಳಿ ರೈತರನ್ನು ಹೊರಗೆ ಸಾಗಹಾಕಿದರು.----ಕೋಟ್--ಬೆಂಬಲ ಬೆಲೆಯಡಿ ಸೋಯಾಬೀನ್ ಖರೀದಿ ನೋಂದಣಿ ಅವಧಿ ಮುಗಿದಿದೆ ಎಂಬುದು ನಮಗೇ ಗೊತ್ತೇ ಇಲ್ಲ. ಅತಿವೃಷ್ಟಿ ಮಳೆಯಿಂದ ದಾರಿಯ ಸಮಸ್ಯೆಯಿಂದ ಅರ್ಧದಷ್ಟು ರೈತರು ಡಿಸೆಂಬರ್ ತಿಂಗಳಲ್ಲಿ ಒಕ್ಕಲು ಮಾಡುತ್ತಾರೆ. ಎರಡು ದಿನದಿಂದ ಎಲ್ಲ ಕೆಲಸ ಬಿಟ್ಟು ಒಕ್ಕಲು ಮಾಡಿ ನೋಂದಣಿ ಮಾಡಿಸಲು ಬಂದಿದ್ದೇವೆ. ಆದರೆ, ನೋಂದಣಿ ಅವಧಿ ಮುಗಿದಿದೆ ಎಂದು ಹೇಳುತ್ತಿದ್ದಾರೆ. ಖಾಸಗಿಯವರಿಗೆ ಕಡಿಮೆಗೆ ಬೆಲೆಗೆ ಮಾರಾಟ ಮಾಡುವ ಅನಿವಾರ್ಯತೆ ಬಂದಿದೆ. ಸರ್ಕಾರ ಇನ್ನು ಒಂದು ತಿಂಗಳು ಖರೀದಿ ಕೇಂದ್ರ ಮುಂದವರಿಸಬೇಕು.
- ಮಾಣಿಕ ಬುದ್ದನ್ನವರ, ರುದ್ರಪ್ಪ ತಣಗಿ, ಚೆನ್ನಹೊಸೂರ ಗ್ರಾಮದ ರೈತರು---ಕೋಟ್----
ಅನೇಕ ಪ್ರದೇಶಗಳಲ್ಲಿ ಡಿಸೆಂಬರ್, ಜನವರಿ ತಿಂಗಳಲ್ಲಿ ರೈತರು ಸೋಯಾಬೀನ್ ಒಕ್ಕಲು ಮಾಡುತ್ತಾರೆ. ವಾರದಿಂದ ಕೆಲವು ಕೇಂದ್ರಗಳಿಗೆ ಹೆಚ್ಚಿನ ರೈತರು ಖರೀದಿ ಕೇಂದ್ರಗಳಿಗೆ ಬಂದು ಸೋಯಾಬಿನ್ ಕೊಡುತ್ತಿದ್ದಾರೆ. ಇನ್ನೂ ಒಂದು ತಿಂಗಳು ಬೆಂಬಲ ಬೆಲೆಯಡಿ ಖರೀದಿ ದಿನಾಂಕ ಮುಂದುವರಿಸುವಂತೆ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಏನೆಂಬುದು ಒಂದೆರಡು ದಿನದಲ್ಲಿ ಗೊತ್ತಾಗಲಿದೆ.- ಮಹಾದೇವ ಚಬನೂರ, ಉಪನಿರ್ದೇಶಕರು ಕೃಷಿ ಮಾರಾಟ ಇಲಾಖೆ ಬೆಳಗಾವಿ