ಚಂದ್ರು ಕೊಂಚಿಗೇರಿ
ಹೂವಿನಹಡಗಲಿ: ಇಲ್ಲಿನ ಸಿಂಗಟಾಲೂರು ಏತ ನೀರಾವರಿ ಯೋಜನೆಯ ವಿವಿಧ ಕಾಮಗಾರಿಗಳಿಗೆ, ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಬಂದಿದೆ. ಆದರೆ, ಉಪ ನೋಂದಣಿ ಇಲಾಖೆಯ ಮಾರುಕಟ್ಟೆ ಮಾರ್ಗಸೂಚಿಯ ಅಂಕಿ-ಅಂಶ ಮತ್ತು ತೋಟಗಾರಿಕೆ ಇಲಾಖೆ ಮೌಲ್ಯಮಾಪನ ವರದಿ ನೀಡಲು ವಿಳಂಬ ಮಾಡುತ್ತಿರುವುದರಿಂದ ಪರಿಹಾರ ವಿತರಣೆಯಾಗಿಲ್ಲ ಎಂದು ಹೇಳಲಾಗುತ್ತಿದೆ.ತಾಲೂಕಿನ ಮಾಗಳ, ಹಿರೇಹಡಗಲಿ, ಹಗರನೂರು, ಮಹಾಜನದಹಳ್ಳಿ, ಶಿವಲಿಂಗನಹಳ್ಳಿ, ವರಕನಹಳ್ಳಿ, ಸೋಗಿ, ದೇವಗೊಂಡನಹಳ್ಳಿ, ನಾಗತಿ ಬಸಾಪುರ ಸೇರಿದಂತೆ 9 ಹಳ್ಳಿಗಳ 99 ಎಕರೆ ಜಮೀನು ಸಿಂಗಟಾಲೂರು ಏತ ನೀರಾವರಿ ಯೋಜನೆಗೆ ಭೂ ಸ್ವಾಧೀನ ಮಾಡಿಕೊಳ್ಳಲಾಗಿದೆ. ಇತ್ತ ಪರಿಹಾರ ವಿತರಣೆಗೆ ಇಲ್ಲಿನ ವಿಶೇಷ ಭೂಸ್ವಾಧೀನಾಧಿಕಾರಿಗಳ ಕಚೇರಿಗೆ ಉಪ ನೋಂದಣಾಧಿಕಾರಿ ಕಚೇರಿಯಿಂದ ಅಂಕಿ-ಅಂಶ ಮತ್ತು ಮಾರುಕಟ್ಟೆ ಮಾರ್ಗಸೂಚಿ ಪ್ರಕಾರ ಬೆಲೆ ದೃಢೀಕರಣ ಮಾಹಿತಿ ನೀಡುತ್ತಿಲ್ಲ, 11(1) ನೋಟಿಸ್ ನಂತರದಲ್ಲಿ ಗೆಜೆಟ್ ಆದ ನಂತರದ ಹಿಂದಿನ 3 ವರ್ಷದ ಮಾರುಕಟ್ಟೆ ಮಾರ್ಗಸೂಚಿಯಂತೆ ಅಂಕಿ ಅಂಶಗಳ ಮಾಹಿತಿ ನೀಡುತ್ತಿಲ್ಲ. 6 ಹಳ್ಳಿಯ ವ್ಯಾಪ್ತಿಯ 32 ಎಕರೆಯ 350 ಸರ್ವೇ ನಂಬರ್‌ಗಳ 800 ಜನ ರೈತರಿಗೆ ಪರಿಹಾರ ನೀಡಬೇಕಿದೆ. 2ನೇ ಹಂತದ 67 ಎಕರೆಯ 155 ಸರ್ವೇ ನಂಬರ್‌ಗಳ 250 ರೈತರಿಗೆ ಪರಿಹಾರ ನೀಡಬೇಕಿದೆ.
ನಿಗದಿತ ಸಮಯದೊಳಗೆ ಮಾಹಿತಿ ನೀಡದಿದ್ದರೇ ಅಸಿಂಧು (ವಿಸೆಟ್) ಆಗುತ್ತದೆ. ಆಗ ಮತ್ತೆ ಮೊದಲಿನಿಂದ ಮಾಹಿತಿ ಸಂಗ್ರಹಿಸುವ ಕೆಲಸ ಮಾಡಬೇಕಾದ ಒತ್ತಡ ಬರುತ್ತದೆ ಎನ್ನುತ್ತಾರೆ ಅಧಿಕಾರಿಗಳು.ತಾಂತ್ರಿಕ ತೊಂದರೆವಿಶೇಷ ಭೂ ಸ್ವಾಧೀನಾಧಿಕಾರಿ ಕಚೇರಿಗೆ ಈಗಾಗಲೇ ಅವರು ಕೇಳಿದ ಮಾಹಿತಿ ನೀಡಿದ್ದೇವೆ. ನಮ್ಮಲ್ಲಿ 2023ರ ವರೆಗೂ ಮಾತ್ರ ಮಾಹಿತಿ ಇದೆ. ಉಳಿದಂತೆ ಈ ಹಿಂದೆ ಕಾವೇರಿ-1 ತಂತ್ರಾಂಶ ಇದ್ದಾಗ ಅವರು ಕೇಳಿದ ಹಾಗೆ ಮಾಹಿತಿ ಸಿಗುತ್ತಿತ್ತು. ಈಗ ಕಾವೇರಿ-2 ತಂತ್ರಾಂಶವಾಗಿ ಮಾರ್ಪಟ್ಟಿದೆ. ಇದರಲ್ಲಿ ದಿನಾಂಕ ಮತ್ತು ವರ್ಷ ನಮೂದು ಆಗುತ್ತಿಲ್ಲ, ಹಿಂದಿನ 3 ವರ್ಷದ ಮಾಹಿತಿಯನ್ನು ಸಂಗ್ರಹಿಸಿ ನೀಡುತ್ತೇವೆ ಎಂದು ಉಪ ನೋಂದಣಾಧಿಕಾರಿ ಬಿ. ನಾಗೇಂದ್ರಪ್ಪ ತಿಳಿಸಿದ್ದಾರೆ.
ಮೌಲ್ಯಮಾಪನವಿಶೇಷ ಭೂ ಸ್ವಾಧೀನಾಧಿಕಾರಿ ಕಚೇರಿ ಮಾಹಿತಿ ಪತ್ರಕ್ಕೆ ರೈತರ ಜಮೀನುಗಳಿಗೆ ತೆರಳಿ ಮಾಹಿತಿ ಸಂಗ್ರಹಿಸಿ, ನಮ್ಮ ಮೇಲಾಧಿಕಾರಿಗಳಿಗೆ ಕಳಿಸುತ್ತೇವೆ. ಅಲ್ಲಿಂದ ಬಂದ ಕೂಡಲೇ ಮೌಲ್ಯ ಮಾಪನ ಮಾಹಿತಿ ನೀಡುತ್ತಿದ್ದೇವೆ. ಬಾಕಿ ಇರುವ ಮಾಹಿತಿಯನ್ನು ನೀಡಲು ಕ್ರಮ ಕೈಗೊಳ್ಳುತ್ತೇವೆ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ನಾಗರಾಜ ಹೇಳಿದ್ದಾರೆ.ಅಸಿಂಧು
ತಾಲೂಕಿನ 9 ಹಳ್ಳಿಯ 99 ಎಕರೆಗೆ ಪರಿಹಾರ ನೀಡಬೇಕಿದೆ. ಇದಕ್ಕಾಗಿ ಉಪ ನೋಂದಣಿ ಇಲಾಖೆಯ ಮಾರುಕಟ್ಟೆ ಮಾರ್ಗಸೂಚಿ ಅಂಕಿ ಅಂಶ, ತೋಟಗಾರಿಕೆ ಇಲಾಖೆ ಮೌಲ್ಯ ಮಾಪನ ವರದಿ ವಿಳಂಬವಾಗುತ್ತಿದೆ. ಇದರಿಂದ ರೈತರಿಗೆ ಪರಿಹಾರ ನೀಡಲು ಅಡ್ಡಿಯಾಗುತ್ತಿದೆ. ನಿಗದಿತ ಸಮಯದೊಳಗೆ ನೀಡದಿದ್ದರೆ ರೈತರ ಫೈಲ್ ಅಸಿಂಧುವಾಗುತ್ತಿವೆ ಎಂದು ಸಿಂಗಟಾಲೂರು ಏತ ನೀರಾವರಿ ಯೋಜನೆ ಇಇ ಜಿ.ಆರ್.ಶಿವಮೂರ್ತಿ ತಿಳಿಸಿದ್ದಾರೆ.