ಬೆಂಬಲ ಬೆಲೆಯಡಿ ಕಡಲೆಕಾಳು ಖರೀದಿಗೆ ನೋಂದಣಿ ಆರಂಭ

KannadaprabhaNewsNetwork | Published : Jan 30, 2025 1:46 AM

ಸಾರಾಂಶ

ಹಿಂಗಾರು ಹಂಗಾಮಿನಲ್ಲಿ ಬೆಳೆದ ಕಡಲೆಕಾಳು ಉತ್ಪನ್ನವನ್ನು ರೈತರಿಂದ ನೇರವಾಗಿ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ಸರ್ಕಾರ ಆದೇಶಿಸಿದ್ದು, ಖರೀದಿಗೆ ನೋಂದಣಿ ಪ್ರಾರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ತಿಳಿಸಿದ್ದಾರೆ.

- ಉತ್ತಮ ಗುಣಮಟ್ಟದ ಕಡಲೆಕಾಳಿಗೆ ಕ್ವಿಂ.ಗೆ ₹5650 ನಿಗದಿ

- - - ದಾವಣಗೆರೆ: ಹಿಂಗಾರು ಹಂಗಾಮಿನಲ್ಲಿ ಬೆಳೆದ ಕಡಲೆಕಾಳು ಉತ್ಪನ್ನವನ್ನು ರೈತರಿಂದ ನೇರವಾಗಿ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ಸರ್ಕಾರ ಆದೇಶಿಸಿದ್ದು, ಖರೀದಿಗೆ ನೋಂದಣಿ ಪ್ರಾರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ತಿಳಿಸಿದ್ದಾರೆ.

ಬೆಂಬಲ ಬೆಲೆಯಡಿ ಕಡಲೆಕಾಳು ಖರೀದಿ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಏರ್ಪಡಿಸಿದ್ದ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಉತ್ತಮ ಗುಣಮಟ್ಟದ ಕಡಲೆಕಾಳಿಗೆ ಸರ್ಕಾರ ಪ್ರತಿ ಕ್ವಿಂಟಲ್‌ಗೆ ₹5650 ನಿಗದಿಪಡಿಸಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಕಡಲೆಕಾಳಿನ ಬೆಲೆ ಕುಸಿದಿದೆ. ರೈತರು ನಷ್ಟಕ್ಕೆ ಒಳಗಾಗುತ್ತಿದ್ದಾರೆ. ಹೀಗಾಗಿ ರೈತರ ಹಿತಕಾಯಲು ಸರ್ಕಾರದ ವತಿಯಿಂದ ಜಿಲ್ಲೆಯಲ್ಲಿ ಕೂಡಲೇ ಬೆಂಬಲ ಬೆಲೆಯಲ್ಲಿ ಕಡಲೆಕಾಳು ಖರೀದಿಗೆ ಜಗಳೂರು ಮತ್ತು ಚನ್ನಗಿರಿ ಎಪಿಎಂಸಿ ಆವರಣದಲ್ಲಿ ರೈತರ ನೋಂದಣಿ ಕಾರ್ಯ ಪ್ರಾರಂಭಿಸಬೇಕು ಎಂದು ಸೂಚಿಸಿದ್ದಾರೆ.

ನೋಂದಣಿಗೂ ಮುನ್ನ ರೈತರು ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಿರಬೇಕು. ಖರೀದಿ ಕೇಂದ್ರಕ್ಕೆ ಅವಶ್ಯಕವಿರುವ ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳಬೇಕು. ಖರೀದಿಗೆ ಸಂಬಂಧಿಸಿದಂತೆ ಎಲ್ಲ ಅಗತ್ಯ ಪೂರ್ವಸಿದ್ಧತೆ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

- - -

ಬಾಕ್ಸ್‌

* 80 ದಿನ ನೋಂದಣಿ, 90 ದಿನ ಖರೀದಿ

ಎಫ್‌ಎಕ್ಯೂ ಗುಣಮಟ್ಟದ ಕಡಲೆಕಾಳಿಗೆ ಪ್ರತಿ ಕ್ವಿಂಟಲ್ ₹5650 ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ನಾಫೆಡ್ ಸಂಸ್ಥೆಯನ್ನು ಕೇಂದ್ರದ ಖರೀದಿ ಏಜೆನ್ಸಿಯಾಗಿ ಹಾಗೂ ಕರ್ನಾಟಕ ಸಹಕಾರ ಮಾರಾಟ ಮಹಾಮಂಡಳಿ ರಾಜ್ಯದ ವತಿಯಿಂದ ಖರೀದಿ ಏಜೆನ್ಸಿಯಾಗಿದೆ. ಜ.27 ರಿಂದ 80 ದಿನಗಳ ಕಾಲ ರೈತರಿಂದ ನೋಂದಣಿ ಕಾರ್ಯ ನಡೆಯಲಿದೆ. ಖರೀದಿ ಕೂಡ 90 ದಿನಗಳ ಕಾಲ ನಡೆಯಲಿದೆ. ಪ್ರತಿ ಎಕರೆಗೆ 4 ಕ್ವಿಂ, ಪ್ರತಿ ರೈತರಿಂದ ಗರಿಷ್ಠ 20 ಕ್ವಿಂ. ಕಡಲೆಕಾಳು ಖರೀದಿಗೆ ಮಿತಿ ನಿಗದಿಪಡಿಸಲಾಗಿದೆ. ರೈತರು ಸದುಪಯೋಗ ಮಾಡಿಕೊಳ್ಳಲು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

- - - -28ಕೆಡಿವಿಜಿ43: ಜಿ.ಎಂ.ಗಂಗಾಧರ ಸ್ವಾಮಿ

Share this article