ಲಕ್ಷ್ಮೇಶ್ವರದಲ್ಲಿ ಮೆಕ್ಕೆಜೋಳ ಖರೀದಿಗೆ ನೋಂದಣಿ ಆರಂಭ

KannadaprabhaNewsNetwork |  
Published : Jan 14, 2026, 03:30 AM IST
ಲಕ್ಷ್ಮೇಶ್ವರದ ಎಪಿಎಂಸಿಯಲ್ಲಿ ಮೆಕ್ಕೆಜೋಳದ ನೋಂದಣಿ ಆರಂಭವಾಗಿರುವುದು. | Kannada Prabha

ಸಾರಾಂಶ

ರಾಜ್ಯ ಸರ್ಕಾರ ಮೆಕ್ಕೆಜೋಳ ಬೆಳೆದ ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ₹250 ಪ್ರೋತ್ಸಾಹಧನ ನೀಡುವ ಯೋಜನೆ ರೂಪಿಸಿದ್ದು, ರೈತರ ಪಾಲಿಗೆ ವರದಾನವಾಗಿದೆ.

ಲಕ್ಷ್ಮೇಶ್ವರ: ಪಟ್ಟಣದ ಎಪಿಎಂಸಿಯಲ್ಲಿ ಮೆಕ್ಕೆಜೋಳ ಖರೀದಿಗೆ ನೋಂದಣಿ ಕಾರ್ಯ ಆರಂಭಿಸಿದ್ದು, ಕಳೆದ 3 ದಿನಗಳಿಂದ ರೈತರು ಮೆಕ್ಕೆಜೋಳ ಬೆಳೆದ ದಾಖಲೆಗಳನ್ನು ತಂದು ಸರತಿ ಸಾಲಿನಲ್ಲಿ ನಿಂತು ಹೆಸರು ನೋಂದಾಯಿಸುತ್ತಿರುವ ದೃಶ್ಯ ಮಂಗಳವಾರ ಕಂಡುಬಂದಿತು.

ರಾಜ್ಯ ಸರ್ಕಾರ ಮೆಕ್ಕೆಜೋಳ ಬೆಳೆದ ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ₹250 ಪ್ರೋತ್ಸಾಹಧನ ನೀಡುವ ಯೋಜನೆ ರೂಪಿಸಿದ್ದು, ರೈತರ ಪಾಲಿಗೆ ವರದಾನವಾಗಿದೆ. ತಾಲೂಕಿನಲ್ಲಿ ಮೆಕ್ಕೆಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸುವಂತೆ ಸಮಗ್ರ ರೈತಪರ ಹೋರಾಟ ವೇದಿಕೆಯು ಸುಮಾರು 18 ದಿನಗಳ ಕಾಲ ಪ್ರತಿಭಟನೆ ನಡೆಸಿದ್ದರ ಫಲವಾಗಿ ಸರ್ಕಾರ ರಾಜ್ಯದಲ್ಲಿ ಬೆಂಬಲ ಬೆಲೆಯ ಖರೀದಿ ಕೇಂದ್ರ ಆರಂಭಿಸಿದ್ದು ಇತಿಹಾಸ.

ಆದರೆ ಬೆಂಬಲ ಬೆಲೆ ಖರೀದಿ ಕೇಂದ್ರಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಿದಿರುವ ಹಿನ್ನೆಲೆ ರೈತರು ಮತ್ತೆ ಭ್ರಮನಿರಸನಕ್ಕೆ ಒಳಗಾಗಿದ್ದರು. ಅಲ್ಲದೆ ಮೆಕ್ಕೆಜೋಳದ ಬೆಲೆ ಕ್ವಿಂಟಲ್‌ಗೆ ₹1600- 1800 ಕುಸಿದು ರೈತರು ಮತ್ತೆ ಸಂಕಷ್ಟಕ್ಕೆ ಒಳಗಾಗಿ ದಿಕ್ಕು ತೋಚದಂತಾಗಿದ್ದರು.

ಇತ್ತ ಬೆಂಬಲ ಬೆಲೆ ಖರೀದಿ ಕೇಂದ್ರಗಳು ಗೊಂದಲದ ಗೂಡಾಗಿ ಪರಿಣಮಿಸಿದ್ದರಿಂದ ಸರ್ಕಾರ ರೈತರ ಸಂಕಷ್ಟ ದೂರ ಮಾಡುವ ನಿಟ್ಟಿನಲ್ಲಿ ₹250 ಪ್ರೋತ್ಸಾಹಧನ ನೀಡುವ ಯೋಜನೆ ರೂಪಿಸಿದ್ದು, ರೈತರ ಪಾಲಿಗೆ ವರದಾನವಾಗಿದೆ.

ಅಕೌಂಟ್‌ಗೆ ನೇರವಾಗಿ ಜಮೆ: ಮೆಕ್ಕೆಜೋಳ ಬೆಳೆದ ರೈತರು ತಾವು ಬೆಳೆದ ಎಫ್‌ಐಡಿ ಹೊಂದಿರುವ ಪಹಣಿ ಪತ್ರ, ಬ್ಯಾಂಕ್ ಪಾಸ್ ಬುಕ್ ತರುವ ಜತೆಗೆ ಮೆಕ್ಕೆಜೋಳದ ಸ್ಯಾಂಪಲ್ ತಂದು ತೋರಿಸಿ ಪರೀಕ್ಷೆಗೆ ಒಳಪಡಿಸಿದ ನಂತರ ಅಂತಹ ಮೆಕ್ಕೆಜೋಳವನ್ನು ಎಪಿಎಂಸಿಯಲ್ಲಿನ ಯಾವುದಾದರೂ ದಲಾಲಿ ಅಂಗಡಿಗೆ ತಮ್ಮ ಮೆಕ್ಕೆಜೋಳವನ್ನು ಮಾರಾಟ ಮಾಡಬೇಕು. ನಂತರ ಮೆಕ್ಕೆಜೋಳದ ಬೆಲೆಯಲ್ಲಿನ ವ್ಯತ್ಯಾಸಕ್ಕೆ ತಕ್ಕಂತೆ ₹250 ಪ್ರೋತ್ಸಾಹಧನವನ್ನು ರೈತರ ಬ್ಯಾಂಕ್ ಅಕೌಂಟ್‌ಗೆ ನೇರವಾಗಿ ಜಮೆ ಮಾಡುವ ಕಾರ್ಯವನ್ನು ಸರ್ಕಾರ ಮಾಡಲಿದೆ ಎಂದು ಎಪಿಎಂಸಿ ಕಾರ್ಯದರ್ಶಿ ರುದ್ರಗೌಡ ಪಾಟೀಲ ತಿಳಿಸಿದರು.

ಸಂತಸದ ಸಂಗತಿ: ತಾಲೂಕಿನಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಸಾವಿರಾರು ಮೆಟ್ರಿಕ್ ಟನ್ ಮೆಕ್ಕೆಜೋಳ ಬೆಳೆದಿದ್ದಾರೆ. ಈಗ ಸರ್ಕಾರ ₹250 ಪ್ರೋತ್ಸಾಹಧನ ನೀಡುವ ಮೂಲಕ ರೈತರಿಗೆ ನೆರವಾಗುತ್ತಿರುವುದು ಸಂತಸದ ಸಂಗತಿ ಎಂದು ಗೊಜನೂರ ಗ್ರಾಮದ ರೈತ ಹೊಳಲಪ್ಪ ಕರೆಣ್ಣವರ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತುಂಗಭದ್ರಾ ಜಲಾಶಯಕ್ಕೆ ಕ್ರಸ್ಟ್ ಗೇಟ್ ಅಳವಡಿಕೆ ಯಶಸ್ವಿ
ಸಂಪುಟ ಸಭೆಯಲ್ಲಿ ಚರ್ಚಿಸಿ ರಿತ್ತಿ ಕುಟುಂಬಕ್ಕೆ ನೆರವು: ಸಚಿವ ಎಚ್.ಕೆ ಪಾಟೀಲ