ಎಂ. ಪ್ರಹ್ಲಾದ್ ಕನಕಗಿರಿ
ದಶಕಗಳ ಹೋರಾಟದ ಫಲವಾಗಿ ತಾಲೂಕು ಕೇಂದ್ರವಾದ ಕನಕಗಿರಿಯಲ್ಲಿ ಪ್ರಮುಖವಾಗಿ ಉಪ ನೋಂದಣಿ ಕಚೇರಿ ಆರಂಭವಾಗಿರಲಿಲ್ಲ. ಆಸ್ತಿ ನೋಂದಣಿ ಸೇರಿದಂತೆ ವಿವಿಧ ದಾಖಲೆ ಪಡೆಯುವುದಕ್ಕಾಗಿ ೨೫ ಕಿಮೀ ದೂರದ ಗಂಗಾವತಿಗೆ ಹೋಗಿ ಹೋಗಬೇಕಿತ್ತು. ಇದೀಗ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಸ್ವತಃ ಮುತುವರ್ಜಿ ವಹಿಸಿ ನೋಂದಣಿ ಕಚೇರಿ ಕಾರ್ಯಾರಂಭಕ್ಕೆ ಅಣಿಯಾಗಿದ್ದಾರೆ.
ಕನಕಗಿರಿ ತಾಲೂಕು ಕೇಂದ್ರವಾಗಿ ೮ ವರ್ಷಗಳ ಬಳಿಕ ಉಪ ನೋಂದಣಿ ಕಚೇರಿಗೆ ಲೋಕಾರ್ಪಣೆ ಭಾಗ್ಯ ದೊರತಿದ್ದಕ್ಕೆ ತಾಲೂಕಿನ ಜನತೆ ಸಂತಸಗೊಂಡಿದೆ. ನೋಂದಣಿ ಕಚೇರಿ ಕಾರ್ಯಾರಂಭಕ್ಕೆ ಮುದ್ರಾಂಕ ಇಲಾಖೆಯಿಂದ ಸಿದ್ಧತೆಗಳು ಪೂರ್ಣಗೊಂಡಿವೆ.೨೦೧೮ರಲ್ಲಿ ಕನಕಗಿರಿ ತಾಲೂಕು ಕೇಂದ್ರವಾಗಿದ್ದರೂ ಸಹ ತಾಲೂಕಲ್ಲಿ ನೋಂದಣಿ ಕಚೇರಿ ಆರಂಭವಾಗಿರಲಿಲ್ಲ. ಇಲ್ಲಿನ ಆದಾಯಕ್ಕೆ ಮೂಲವಾಗಬೇಕಿದ್ದ ನೋಂದಣಿ ಕಚೇರಿ ಆರಂಭವಾಗದಿರುವುದು ಜನತೆಯ ಬೇಸರಕ್ಕೆ ಕಾರಣವಾಗಿತ್ತು. ಮೂರು ಕನಕಗಿರಿ ಹಾಗೂ ಹುಲಿಹೈದರ ಹೋಬಳಿಯ ಜನತೆ ಗಂಗಾವತಿಗೆ ಹಾಗೂ ಇದೇ ತಾಲೂಕಿನ ನವಲಿ ಹೋಬಳಿಯನ್ನು ಕಾರಟಗಿ ನೋಂದಣಿ ಕಚೇರಿಗೆ ಸೇರಿಸಲಾಗಿತ್ತು. ಇದು ತಾಲೂಕಿನ ಜನತೆಗೆ ಹೊರೆಯಾಗಿತ್ತಲ್ಲದೇ ನಾನಾ ಸಮಸ್ಯೆಗಳಿಗೂ ಕಾರಣವಾಗಿತ್ತು.
ಜನತೆಯ ಒತ್ತಡಕ್ಕೆ ಮಣಿದ ಸಚಿವ ಶಿವರಾಜ ತಂಗಡಗಿ ಕಳೆದ ವರ್ಷದ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದಾಗ ಇಲ್ಲಿನ ಕನಕಾಚಲ ದೇವಸ್ಥಾನದ ಯಾತ್ರಿ ನಿವಾಸದಲ್ಲಿಯೇ ಉಪನೋಂದಣಿ ಆರಂಭಿಸಲು ಮುಂದಾಗಿದ್ದರು. ಅಲ್ಲದೇ ೨೦೨೪ ಡಿ.೨೭ಕ್ಕೆ ಉದ್ಘಾಟನೆ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ಭರವಸೆ ನೀಡಿದ್ದರು. ಆದರೆ, ತಾಂತ್ರಿಕ ತೊಂದರೆಯ ಜತೆಗೆ ನೋಂದಣಿ ಕಚೇರಿಯನ್ನು ಶ್ರೀರುದ್ರಸ್ವಾಮಿ ಗ್ರಾಮೀಣ ವಿದ್ಯಾವರ್ಧಕ ಸಂಘದ ಬಾಡಿಗೆ ಕಟ್ಟಡದಲ್ಲಿ ಆರಂಭಿಸಲು ಮುಂದಾದ್ದರಿಂದ ಪತ್ರ ವ್ಯವಹಾರದ ಜತೆಗೆ ಬಾಡಿಗೆ,ತಾಂತ್ರಿಕ ಮಂಜೂರಾತಿಗೆ ತಡವಾಯಿತು.ಇಲಾಖೆಯಿಂದ ಬೇಕಾದ ಗಣಕಯಂತ್ರ, ಮುದ್ರಣ,ಸ್ಕ್ಯಾನರ್ ಸೇರಿ ಇತರೇ ಪರಿಕರಗಳು ಸರಬರಾಜಾಗಿದ್ದು, ಜೋಡಿಸಿಕೊಳ್ಳಲಾಗಿದೆ. ಇಂಟರ್‌ನೆಟ್ ವ್ಯವಸ್ಥೆ (ಕೆಎಸ್ ೧) ಕಲ್ಪಿಸಲಾಗಿದೆ. ಇಬ್ಬರು ಸಹಾಯಕರು ಕೆಲಸ ಮಾಡಲು ವ್ಯವಸ್ಥೆ ಮಾಡಲಾಗಿದೆ. ನಿಯೋಜನೆ ಮೇಲೆ ಉಪ ನೋಂದಣಾಧಿಕಾರಿ ನೇಮಿಸಲಾಗಿದೆ.
₹೪.೮೦ ಲಕ್ಷ ಶಾಸಕರ ಅನುದಾನ: ಇಲಾಖೆಯಿಂದ ಸರಬರಾಜಾದ ಪರಿಕರಗಳ ಜತೆಗೆ ಕಟ್ಟಡದಲ್ಲಿ ಒಳಾಂಗಣ ಸಿದ್ಧತೆಗಾಗಿ ಶಾಸಕರ ಅನುದಾನದಲ್ಲಿ ಸಚಿವ ಶಿವರಾಜ ತಂಗಡಗಿ ₹೪.೮೦ ಲಕ್ಷ ಅನುದಾನ ಮಂಜೂರು ಮಾಡಿದ್ದಾರೆ. ಈ ಅನುದಾನ ಬಳಕೆ ಮಾಡಿಕೊಂಡು ಸಬ್ ರೆಜಿಸ್ಟ್ರಾರ್ ಸಿದ್ಧಗೊಂಡಿದೆ.ನೋಂದಣಿ ಕಚೇರಿ ವ್ಯಾಪ್ತಿಗೆ ೬೪ ಗ್ರಾಮಗಳು : ಕನಕಗಿರಿ ಪಟ್ಟಣವೂ ಸೇರಿದಂತೆ ತಾಲೂಕಿನ ೬೪ ಗ್ರಾಮಗಳು ಕನಕಗಿರಿ ಉಪ ನೋಂದಣಿ ಕಚೇರಿಗೆ ವ್ಯಾಪ್ತಿಗೆ ಒಳಪಡಲಿದ್ದು, ನವಲಿ ಹೋಬಳಿ ಕಾರಟಗಿಯಿಂದ ಕನಕಗಿರಿಗೆ, ಗಂಗಾವತಿಯಿಂದ ಕನಕಗಿರಿ ಹಾಗೂ ಹುಲಿಹೈದರ ಹೋಬಳಿಗಳ ಗ್ರಾಮಗಳು ವ್ಯಾಪ್ತಿಗೆ ಒಳಪಡಲಿರುವ ಕುರಿತು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಇಲಾಖೆಯ ಮೇಲಾಧಿಕಾರಿಗಳ ಶ್ರಮದಿಂದ ಬಾಡಿಗೆ ಕಟ್ಟಡದಲ್ಲಿ ನೋಂದಣಿ ಕಚೇರಿ ಫೆ. ೯ಕ್ಕೆ ಉದ್ಘಾಟನೆಗೊಳ್ಳುತ್ತಿದೆ. ಕಚೇರಿ ಕೆಲಸಕ್ಕೆ ಬೇಕಾದ ಎಲ್ಲ ಸಿದ್ದತೆ ಪೂರ್ಣಗೊಂಡಿವೆ. ಗಂಗಾವತಿ, ಕಾರಟಗಿ ಅಲೆದಾಟಕ್ಕೆ ಬ್ರೇಕ್ ಹಾಕುವ ಕೆಲಸ ಸರ್ಕಾರ ಮಾಡಿದ್ದು, ಇನ್ಮುಂದೆ ಕನಕಗಿರಿಯಲ್ಲೇ ಆಸ್ತಿ ನೋಂದಣಿ ಮಾಡಿಸಿಕೊಳ್ಳುವುದಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದು ಕನಕಗಿರಿ ಉಪ ನೋಂದಣಾಧಿಕಾರಿ ಸಂತೋಷ ತಿಳಿಸಿದ್ದಾರೆ.