ಉತ್ಸವದ ಪೋಸ್ಟರ್ ಬಿಡುಗಡೆಗೊಳಿಸಿದ ಜಿಲ್ಲಾ ಉಸ್ತುವಾರಿ ಸಚಿವ
ಮುರುಡೇಶ್ವರದಲ್ಲಿ ಶಿವರಾತ್ರಿ ಪ್ರಯುಕ್ತ ಫೆ. 15ರಂದು ಸಂಜೆ 6 ಗಂಟೆಯಿಂದ ಬೆಳಗಿನ ಜಾವ 6 ರವರೆಗೆ ಶಿವರಾತ್ರಿ ಜಾಗರಣೆ ಉತ್ಸವ ಅದ್ಧೂರಿಯಾಗಿ ನಡೆಸಲು ನಿರ್ಧರಿಸಲಾಗಿದ್ದು, ಹೆಚ್ಚಿನ ಜನರು ಪಾಲ್ಗೊಳ್ಳುವುದರ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಹೇಳಿದರು.
ಮುರುಡೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಭಾನುವಾರ ಮಧ್ಯಾಹ್ನ ಅಧಿಕಾರಿಗಳು ಮತ್ತು ಊರ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಿಂದ ಮುರುಡೇಶ್ವರದಲ್ಲಿ ಶಿವರಾತ್ರಿ ಜಾಗರಣೆ ಉತ್ಸವ ಯಶಸ್ವಿಯಾಗಿ ನಡೆಸಲಾಗಿದೆ. ಆರಂಭದ ವರ್ಷದಲ್ಲಿ ಸರಕಾರದಿಂದ ಹಣ ಬಂದಿರಲಿಲ್ಲ. ಆದರೆ ಕಳೆದ ವರ್ಷ ಸರಕಾರದಿಂದ ಶಿವರಾತ್ರಿ ಜಾಗರಣೆ ಉತ್ಸವಕ್ಕೆ ₹50 ಲಕ್ಷ ಅನುದಾನ ಬಂದಿದೆ. ಈ ಸಲವೂ ಸಹ ಸರಕಾರದಿಂದ ಅನುದಾನ ಬರುವ ನಿರೀಕ್ಷೆ ಇದೆ. ಮುರುಡೇಶ್ವರ ಪ್ರಸಿದ್ಧ ಶಿವಕ್ಷೇತ್ರವಾಗಿದ್ದು, ಶಿವನ ಸನ್ನಿದ್ಧಿಯಲ್ಲಿ ಉತ್ಸವ ಮಾಡಬೇಕೆಂಬ ಆಶಯದಿಂದ ಶಿವರಾತ್ರಿ ಜಾಗರಣೆ ಉತ್ಸವ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮ ಉತ್ತಮ ಉದ್ದೇಶ ಇಟ್ಟುಕೊಂಡು ಆಯೋಜಿಸಲಾಗಿದೆ ಎಂದರು.ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಮಾತನಾಡಿ, ಮುರುಡೇಶ್ವರದಲ್ಲಿ ಶಿವರಾತ್ರಿ ಜಾಗರಣೆ ಉತ್ಸವವಕ್ಕೆ ಸಾರಿಗೆ, ವಸತಿ, ಸುರಕ್ಷತೆ, ಭದ್ರತೆ ಹಾಗೂ ಸ್ವಚ್ಛತೆಗೆ ಪ್ರಮುಖ ಆದ್ಯತೆ ಕೊಡಲಾಗಿದೆ. ಕಾರ್ಯಕ್ರಮದ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯವೆಂದರು.
ಹಿರಿಯ ಮುಖಂಡ ಎಸ್.ಎಸ್. ಕಾಮತ್ ಮಾತನಾಡಿ, ಮುರುಡೇಶ್ವರದ ಸ್ವಚ್ಛತೆಗೆ ಎಲ್ಲರೂ ಗಮನ ಹರಿಸಬೇಕು. ಶಿವರಾತ್ರಿ ಪೂರ್ವಭಾವಿಯಾಗಿ ಮುರುಡೇಶ್ವರದಲ್ಲಿ ಫೆ. 9 ರಂದು ಸ್ವಚ್ಛತಾ ಅಭಿಯಾನ ನಡೆಸಲು ನಿರ್ಧರಿಸಲಾಗಿದ್ದು, ಅಧಿಕಾರಿಗಳು, ಸಾರ್ವಜನಿಕರು, ಸಂಘ ಸಂಸ್ಥೆಗಳು ಸಹಕಾರ ನೀಡಬೇಕೆಂದರು.
ಸಭೆಯಲ್ಲಿ ಎಸ್ಪಿ ದೀಪನ್ ಎಂ.ಎನ್., ಪ್ರವಾಸೋದ್ಯಮ ಇಲಾಖೆ ನಿರ್ದೇಶಕಿ ಮಂಗಳಗೌರಿ ಭಟ್, ಮುರುಡೇಶ್ವರ ದೇವಸ್ಥಾನದ ವ್ಯವಸ್ಥಾಪಕ ಮಂಜುನಾಥ ಶೆಟ್ಟಿ, ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ಆಡಳಿತ ನಿರ್ದೇಶಕಿ ಪುಷ್ಪಲತಾ ವೈದ್ಯ, ಮಾವಳ್ಳಿ ಗ್ರಾಪಂ1ರ ಅಧ್ಯಕ್ಷೆ ನಯನಾ ನಾಯ್ಕ, ಮಾವಳ್ಳಿ ಗ್ರಾಪಂ 2ರ ಅಧ್ಯಕ್ಷೆ ನಾಗರತ್ನ ಪಡಿಯಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಪ್ರಮುಖರಾದ ಮಂಜುನಾಥ ನಾಯ್ಕ, ಗಜಾನನ ನಾಯ್ಕ, ಸುಬ್ರಾಯ ನಾಯ್ಕ, ನಾಗೇಶ ನಾಯ್ಕ, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.