ಮಾವಿನ ಮರಗಳಿಗೆ ಮತ್ತೆ ಚಿಗುರುವಿಕೆಯ ಕಾಟ

KannadaprabhaNewsNetwork |  
Published : Mar 04, 2025, 12:33 AM IST
ಮಾವಿನ ಮರದಲ್ಲಿರುವ ಹೂವುಗಳು ಒಣಗಿರುವುದು. | Kannada Prabha

ಸಾರಾಂಶ

ಗಿಡಗಳ ಮೈತುಂಬ ಮಿಡಿಗಾಯಿಗನ್ನು ಹೊತ್ತು ನಳನಳಿಸಬೇಕಿದ್ದ ಮಾವಿನ ಗಿಡಗಳು ಹೂವುಗಳೆಲ್ಲ ಮುದುಡಿಕೊಂಡು ಉದುರುತ್ತಿವೆ.

ಅಜೀಜಅಹ್ಮದ ಬಳಗಾನೂರ/ಬಸವರಾಜ ಹಿರೇಮಠ

ಹುಬ್ಬಳ್ಳಿ: ಹಣ್ಣುಗಳ ರಾಜನಿಗೂ ಈ ಬಾರಿ ಸೂರ್ಯನ ಕೆಂಗಣ್ಣು ಬಿದ್ದಿದೆ. ಕಳೆದ ಡಿಸೆಂಬರ್‌ನಲ್ಲಿ ಹೂವುಗಳನ್ನು ಹೊದ್ದು ಕಂಗೊಳಿಸುತ್ತಿದ್ದ ಮಾವಿನ ಮರಗಳು ಎರಡೇ ತಿಂಗಳಲ್ಲಿ ಹೂವುಗಳೆಲ್ಲ ಉದುರಿ ಮತ್ತೆ ಚಿಗುರೊಡೆಯುತ್ತಿರುವುದು ಬೆಳಗಾರರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಕಳೆದ 8-10 ವರ್ಷಗಳಿಂದ ಜಿಲ್ಲೆಯ ಮಾವಿನ ಬೆಳೆಗಾರರಿಗೆ ಒಂದಿಲ್ಲೊಂದು ಕಂಟಕ ಎದುರಾಗುತ್ತಲೇ ಸಾಗಿದೆ. ಗಿಡಗಳ ಮೈತುಂಬ ಮಿಡಿಗಾಯಿಗನ್ನು ಹೊತ್ತು ನಳನಳಿಸಬೇಕಿದ್ದ ಮಾವಿನ ಗಿಡಗಳು ಹೂವುಗಳೆಲ್ಲ ಮುದುಡಿಕೊಂಡು ಉದುರುತ್ತಿವೆ. ಇನ್ನು ಬಿಟ್ಟಿರುವ ಅಲ್ಪಪ್ರಮಾಣದ ಮಿಡಿಗಾಯಿಗಳೂ ಕಂದುಬಣ್ಣಕ್ಕೆ ತಿರುಗಿ ಬೆಳವಣಿಗೆಯಾಗದೇ ಒಣಗಿ ಹೋಗುತ್ತಿರುವುದು ಜಿಲ್ಲೆಯ ಮಾವು ಬೆಳೆಗಾರರರನ್ನು ಸಂಕಷ್ಟಕ್ಕೀಡು ಮಾಡಿದೆ.ನೆಲಕ್ಕುರುಳುತ್ತಿರುವ ಹೂ

ಜಿಲ್ಲೆಯಲ್ಲಿ ಮಾವು ಅದರಲ್ಲೂ ಆಪೂಸ್ (ಅಲ್ಫಾನ್ಸೋ) ಪ್ರಮುಖ ಬೆಳೆ. ಪ್ರಸಕ್ತ ಸಾಲಿನಲ್ಲಿ 8500 ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಬೆಳೆಯಲಾಗಿದೆ. ಈ ಬಾರಿ ಅಗತ್ಯಕ್ಕೆ ತಕ್ಕಂತೆ ಮಳೆಯಾದ ಪರಿಣಾಮ ಡಿಸೆಂಬರ್‌, ಜನವರಿಯಲ್ಲಿ ಶೇ. 70ರಷ್ಟು ಮಾವಿನ ಗಿಡಗಳು ಹೂ ಬಿಟ್ಟಿದ್ದವು. ಅಂದುಕೊಂಡಂತೆ ಎಲ್ಲವೂ ಸರಿಯಾಗಿದ್ದರೆ ಈ ವೇಳೆ ಕಾಯಿಯಾಗಿ ಮಾಗುವ ಹಂತಕ್ಕೆ ಬರುತ್ತಿತ್ತು. ಆದರೆ, ಇದ್ದ ಮಿಡಿಗಾಯಿಯೂ ಒಣಗಿ ಹಾಳಾಗುತ್ತಿದೆ.ಮಿಡಿಗಾಯಿಗೂ ಆತಂಕ

ಕಳೆದ ಡಿಸೆಂಬರ್‌, ಜನವರಿ ತಿಂಗಳಲ್ಲಿ ಬೆಳಗಿನ ಜಾವ ಹೆಚ್ಚಿನ ಪ್ರಮಾಣದಲ್ಲಿ ಇಬ್ಬನಿ(ಮಂಜು) ಬಿದ್ದ ಪರಿಣಾಮ ಮಾವಿನ ಹೂಗಳು ಉದುರಲು ಹಾಗೂ ಫೆಬ್ರವರಿ ತಿಂಗಳಲ್ಲಿ ಒಮ್ಮಿಂದೊಮ್ಮೆಲೆ ಏರಿಕೆಯಾದ ತಾಪಮಾನದಿಂದಾಗಿ ಮಿಡಿಗಾಯಿಗಳು ಕಂದುಬಣ್ಣಕ್ಕೆ ತಿರುಗಿದ್ದು, ಕಾಯಿ ಹಿಡಿಯದೇ ಮತ್ತೇ ಚಿಗುರೊಡೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಮಿಡಿಗಾಯಿ ಹಿಡಿದ ವೇಳೆ ಮರ ಚಿಗುರೊಡೆಯಲು ಆರಂಭಿಸಿದರೆ ಮರಗಳಲ್ಲಿರುವ ಮಿಡಿಗಾಯಿಗಳು ಹಣ್ಣಾಗದೇ ಉದುರಿ ಬೀಳುವುದೇ ಹೆಚ್ಚು.

ಹುಳುಗಳ ಕಾಟವೂ ಕಾರಣ

ಇದರೊಂದಿಗೆ ಪ್ರಸಕ್ತ ವರ್ಷ ಕೆಲವು ಮಾವಿನ ತೋಟಗಳಲ್ಲಿ ಹೂವು, ಮಿಡಿಗಾಯಿ ಬಿಡುವ ವೇಳೆ ಹೊಸ ಚಿಗುರು ಬಂದಿದ್ದರಿಂದ ಕೀಟ ಮತ್ತು ರೋಗ ಹೆಚ್ಚಾಗಿ ಹೂವು ಮತ್ತು ಮಿಡಿಕಾಯಿಗಳು ಉದುರುತ್ತಿವೆ. ಮಾವಿಗೆ ಬರುವ ಸಾಂಪ್ರದಾಯಿಕ ಕೀಟ ಜಿಗಿಹುಳು, ಕಾಂಡಕೊರೆಯುವ ಹುಳುಗಳ ಹಾವಳಿ ಹೆಚ್ಚಾಗಿರುವುದು ಪ್ರಮುಖ ಕಾರಣವಾಗಿದೆ. ಇನ್ನು ಕೆಲವು ಗಿಡಗಳಲ್ಲಿ ಫೆಬ್ರವರಿ ನಂತರವೂ ಹೂವು ಬಿಡುತ್ತಿರುವುದರಿಂದ ಗಿಡಗಳಲ್ಲಿ ಬಿಸಿಲಿನ ತಾಪಕ್ಕೆ ಹೂವುಗಳ ಪರಾಗಸ್ಪರ್ಶವಾಗಿರುವುದಿಲ್ಲ. ಇದರಿಂದ ಸರಿಯಾಗಿ ಮಾವಿನಮಿಡಿ ಆಗುತ್ತಿಲ್ಲ ಎಂಬುದು ಕೆಲ ಬೆಳೆಗಾರರ ಮಾತು.

ಶೀಘ್ರ ಸಮಸ್ಯೆ ಪರಿಹರಿಸಲು ಕ್ರಮ

ಈಗಾಗಲೇ ಡಿಸೆಂಬರ್‌ ತಿಂಗಳಿನಿಂದ ಬಿಟ್ಟಿದ್ದ ಹೂವುಗಳಲ್ಲಿ ಶೇ. 70ರಷ್ಟು ಕಾಯಿ ಹಿಡಿಯದೇ ಹಾಳಾಗುತ್ತಿರುವುದು ಗಮನಕ್ಕೆ ಬಂದಿದೆ. ಜತೆಗೆ ಮರವು ಚಿಗುರೊಡೆಯುತ್ತಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಈಗಾಗಲೇ ಜಿಲ್ಲೆಯ ಅಳ್ನಾವರ, ಕಲಘಟಗಿ ಸೇರಿದಂತೆ ಹಲವು ತಾಲೂಕುಗಳಿಗೆ ತೆರಳಿ ಪರಿಶೀಲಿಸಲಾಗಿದೆ. ಎಲ್ಲೆಡೆಯೂ ಇದೇ ಸಮಸ್ಯೆ ಕಂಡುಬರುತ್ತಿದೆ. 2-3 ದಿನಗಳಲ್ಲಿ ವಿಜ್ಞಾನಿಗಳ ತಂಡ ಕರೆದುಕೊಂಡು ಹೋಗಿ ಸಮಸ್ಯೆಗೆ ಏನು ಕಾರಣ ಎಂಬುದರ ಕುರಿತು ಸಮಗ್ರವಾಗಿ ಪರಿಶೀಲಿಸಲಾಗುವುದು. ಜತೆಗೆ ಸಮಸ್ಯೆ ಪರಿಹರಿಸುವ ಕಾರ್ಯ ಮಾಡುವುದಾಗಿ ಜಿಲ್ಲಾ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕಾಶಿನಾಥ ಭದ್ರಣ್ಣವರ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.ಹೂವುಗಳೆಲ್ಲ ಉದುರುತ್ತಿವೆ

ಕಳೆದ 4-5 ವರ್ಷಗಳಿಂದ ಇದೇ ಸಮಸ್ಯೆ ಅನುಭವಿಸುತ್ತಿದ್ದೇವೆ. ಮೊದಮೊದಲು ಮಾವಿನ ಗಿಡಗಳ ತುಂಬ ಹೂ ಹಿಡಿಯುತ್ತದೆ. ನಂತರ ಕಾಯಿಯಾಗದೇ ಹೂವುಗಳೆಲ್ಲ ಉದುರಿ ಹೋಗುತ್ತಿದೆ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಹೂವುಗಳು ಉದುರುತ್ತಿವೆ.

- ಯಲ್ಲಪ್ಪ ಉಪ್ಪಾರ, ಕುರುವಿನಕೊಪ್ಪದ ಮಾವಿನ ಬೆಳೆಗಾರ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮದ್ದೂರು ನಗರಸಭೆ ವ್ಯಾಪ್ತಿಗೆ ಗ್ರಾಪಂಗಳ ಸೇರ್ಪಡೆ ಕೈ ಬಿಡುವಂತೆ ಆಗ್ರಹ
ಸಮಾಜದಲ್ಲಿ ಮಹಿಳೆಯರನ್ನು ಪ್ರಬಲಗೊಳಿಸುವ ಕೆಲಸ ಮಾಡಲಾಗುತ್ತಿದೆ: ಶಾಸಕ