ಮಾನ್ಯುಯಲ್ ಸ್ಕ್ಯಾವೆಂಜರ್ಸ್ ವೃತ್ತಿ ನಿರ್ವಹಿಸುತ್ತಿದ್ದವರಿಗೆ ಪುನರ್ವಸತಿ: ಜಿಲ್ಲಾಧಿಕಾರಿ ಸೂಚನೆ

KannadaprabhaNewsNetwork |  
Published : Jul 11, 2025, 01:47 AM IST
10ಕರ್ಮಚಾರಿ | Kannada Prabha

ಸಾರಾಂಶ

ತೋಟಿ (ಮಾನ್ಯುಯಲ್ ಸ್ಕ್ಯಾವೆಂಜರ್ಸ್) ವೃತ್ತಿಯನ್ನು ಈ ಹಿಂದೆ ನಿರ್ವಹಿಸುತ್ತಿದ್ದವರಿಗೆ ಸರ್ಕಾರದ ವಿವಿಧ ಸೌಲಭ್ಯಗಳು ಸೇರಿದಂತೆ ಪುನರ್ವಸತಿ ಯೋಜನೆಗಳನ್ನು ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಉಡುಪಿ

ತೋಟಿ (ಮಾನ್ಯುಯಲ್ ಸ್ಕ್ಯಾವೆಂಜರ್ಸ್) ವೃತ್ತಿಯನ್ನು ಈ ಹಿಂದೆ ನಿರ್ವಹಿಸುತ್ತಿದ್ದವರಿಗೆ ಸರ್ಕಾರದ ವಿವಿಧ ಸೌಲಭ್ಯಗಳು ಸೇರಿದಂತೆ ಪುನರ್ವಸತಿ ಯೋಜನೆಗಳನ್ನು ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಸೂಚನೆ ನೀಡಿದರು.

ಗುರುವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಸಫಾಯಿ ಕರ್ಮಚಾರಿಗಳ ಜಿಲ್ಲಾ ಜಾಗೃತ ಸಮಿತಿಯ ದ್ವಿತೀಯ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಮಲತ್ಯಾಜ್ಯ ನಿರ್ವಹಿಸುವ ತೋಟಿ ಪದ್ಧತಿಗೆ ಈಗಾಗಲೇ ದೇಶಾದ್ಯಂತ ನಿಷೇಧವಿದೆ. ನಗರ ಹಾಗೂ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಇಂತಹ ತೋಟಿಗಳನ್ನು ನೇಮಿಸಿಕೊಂಡು ಕೆಲಸ ಕಾರ್ಯವನ್ನು ಮಾಡಿಸಿದ್ದಲ್ಲಿ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದರು.ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮಲತ್ಯಾಜ್ಯ ನಿರ್ವಹಣೆಗೆ ಕಡ್ಡಾಯವಾಗಿ ಸಕ್ಕಿಂಗ್ ಹಾಗೂ ಜೆಟ್ಟಿಂಗ್ ಯಂತ್ರಗಳ ಬಳಸಬೇಕು, ಮಲ ತ್ಯಾಜ್ಯವನ್ನು ವೈಜ್ಞಾನಿಕ ರೀತಿಯಲ್ಲಿ ಎಫ್.ಎಸ್.ಎಂ.ಎಸ್. ಘಟಕಗಳಲ್ಲಿ ವಿಲೇವಾರಿ ಮಾಡಬೇಕು ಎಂದ ಅವರು, ಜಿಲ್ಲೆಯಲ್ಲಿ ಕೈಗೊಂಡಿರುವ ಎಫ್.ಎಸ್.ಎಂ.ಎಸ್ ಘಟಕ ಯೋಜನೆಗಳ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಪೂರ್ಣಗೊಳಿಸಿ ಅವುಗಳ ಬಳಕೆಯಾಗಲು ಸ್ಥಳೀಯ ಸಂಸ್ಥೆಗಳು ಕ್ರಮವಹಿಸಬೇಕು ಎಂದರು.

ಪೌರ ಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ಅರ್ಹರಿಗೆ ವಸತಿ ಸೌಲಭ್ಯಗಳನ್ನು ಆದ್ಯತೆಯ ಮೇಲೆ ನೀಡಬೇಕು. ಜಿಲ್ಲೆಯಲ್ಲಿ ಕೆಲ ಪೌರಕಾರ್ಮಿಕರು ನಗರ ವ್ಯಾಪ್ತಿಯಿಂದ ಹೊರ ಭಾಗದಲ್ಲಿ ನಿವೇಶನವನ್ನು ಹೊಂದಿದ್ದಾರೆ. ಇವರುಗಳಿಗೆ ವಸತಿ ಸೌಲಭ್ಯ ಕಲ್ಪಿಸಲು ನಿಯಮಾವಳಿಗಳಲ್ಲಿ ಬದಲಾವಣೆ ಅವಶ್ಯವಿದ್ದು, ಈ ಬಗ್ಗೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಿ, ಅನುಮತಿ ಪಡೆದು ಅವರುಗಳಿಗೆ ವಸತಿ ಸೌಲಭ್ಯ ಕಲ್ಪಿಸಿಕೊಡಲು ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.ಸಫಾಯಿ ಕರ್ಮಚಾರಿಗಳಿಗೆ ವಿಶ್ರಾಂತಿ ಪಡೆಯಲು ಅನುಕೂಲವಾಗುವಂತೆ ವಿಶ್ರಾಂತಿ ಗೃಹಗಳ ನಿರ್ಮಾಣ ಹಾಗೂ ಅವುಗಳ ಬಳಕೆಯ ಬಗ್ಗೆ ಮಾಹಿತಿ ಪಡೆದ ಅವರು, ಪ್ರತಿ ಮೂರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಹಾಗೂ ಮಾಸ್ಟರ್ ಹೆಲ್ತ್ ಚೆಕ್‌ಅಪ್ ಮಾಡಿಸಬೇಕು. ಅವರುಗಳಿಗೆ ವಿತರಿಸುವ ಉಪಾಹಾರವು ಪೌಷ್ಟಿಕತೆಯಿಂದ ಕೂಡಿರಬೇಕು ಎಂದರು.ಪೌರಕಾರ್ಮಿಕರುಗಳ ಮಕ್ಕಳು ಉತ್ತಮ ಶಿಕ್ಷಣ ಹೊಂದಿ ಉನ್ನತ ಸ್ಥಾನಗಳನ್ನು ಹೊಂದಲು ಅನುಕೂಲವಾಗಲು ವಸತಿ ಶಾಲೆಗಳಿಗೆ ನೇರ ಪ್ರವೇಶಾತಿಗೆ ಅವಕಾಶ ಕಲ್ಪಿಸಲಾಗಿದೆ. ಈ ಬಗ್ಗೆ ಪೌರಕಾರ್ಮಿಕರಲ್ಲಿ ಅರಿವು ಮೂಡಿಸಿ, ಇದರ ಸದ್ಬಳಕೆ ಆಗುವಂತೆ ಕ್ರಮವಹಿಸಬೇಕು. ಮುಂದಿನ ಸಭೆಯಲ್ಲಿ ಎಷ್ಟು ಜನ ವಿದ್ಯಾರ್ಥಿಗಳು ಇದರ ಸದ್ಭಳಕೆ ಮಾಡಿಕೊಂಡಿರುವ ಬಗ್ಗೆ ಮಾಹಿತಿ ನೀಡಬೇಕು ಎಂದರು.

ಪ್ರತಿಯೊಬ್ಬ ಪೌರಕಾರ್ಮಿಕರು ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಗಳನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು. ಇದರಿಂದ ಭವಿಷ್ಯದಲ್ಲಿ ಅನುಕೂಲವಾಗಲಿದೆ ಎಂದರು.

ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾರಾಯಣ ಸ್ವಾಮಿ, ಸಮಿತಿಯ ಸದಸ್ಯರಾದ ಪ್ರಶಾಂತಿ ವಸಂತ, ನಾಗರಾಜ ರಮಾನಾಥ, ಕೊಟ್ರಿಬಾಯಿ ಹಾಗೂ ಶಂಕರ, ವಿವಿಧ ಜಿಲ್ಲಾ ಮಟ್ಟದ ಅನುಷ್ಠಾನ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ