ಹಾವೇರಿಯೊಂದಿಗೆ ಗುರುಲಿಂಗ ಕಾಪಸೆ ನಂಟು

KannadaprabhaNewsNetwork | Published : Mar 28, 2024 12:51 AM

ಸಾರಾಂಶ

ಮಾ. 27ರಂದು ನಿಧನರಾದ ನಾಡಿನ ಹಿರಿಯ ಲೇಖಕ ಡಾ. ಗುರುಲಿಂಗ ಕಾಪಸೆ ಅವರು ಹಾವೇರಿಯೊಂದಿಗೆ ನಂಟು ಹೊಂದಿದ್ದರು. ಇಲ್ಲಿ ಹಲವು ಕಾರ್ಯಕ್ರಮಗಳನ್ನು ಸಂಘಟಿಸಿ, ಯಶಸ್ವಿಗೊಳಿಸಿದ್ದರು.

ಹಾವೇರಿ: ನಾಡಿನ ಹಿರಿಯ ಲೇಖಕ ಡಾ. ಗುರುಲಿಂಗ ಕಾಪಸೆ (೯೬) ಅವರು ಧಾರವಾಡದಲ್ಲಿ ನಿಧನರಾಗಿದ್ದು, ಜಿಲ್ಲೆಯ ಸಾಹಿತಿಗಳ ಬಳಗ ಕಂಬನಿ ಮಿಡಿದಿದೆ.

ಸಹೃದಯಿ ಹಿರಿಯರಾದ ಕಾಪಸೆ ಅವರಿಗೆ ಹಾವೇರಿಯೊಂದಿಗೆ ವಿಶೇಷವಾದ ಸಂಬಂಧ ಹೊಂದಿದ್ದರು. ೨೦೦೦ದಿಂದ ೨೦೦೩ರ ವರೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ ೨೦೦೨ರಲ್ಲಿ ಮೊದಲ ಬಾರಿ ಹಾವೇರಿಯಲ್ಲಿ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪ್ರದಾನ ಸಮಾರಂಭ ಇಲ್ಲಿಯ ಶಿವಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಸಿ ಕೊಟ್ಟಿದ್ದರು. ಮತ್ತೊಬ್ಬ ಖ್ಯಾತ ಸಾಹಿತಿ ಡಾ. ಕೀರ್ತಿನಾಥ ಕುರ್ತಕೋಟಿ ಪ್ರಶಸ್ತಿ ಪ್ರದಾನ ಮಾಡಿದ್ದರು. ಆಗ ಹಿರಿಯ ಸಾಹಿತಿ ಸಾಹಿತಿ ಸತೀಶ ಕುಲಕರ್ಣಿ ಅಕಾಡೆಮಿಯ ಸದಸ್ಯರಾಗಿದ್ದರು.

ವಿಶೇಷವೆಂದರೆ ಇಲ್ಲಿಯ ತಾರಾಪ್ಲಾಜಾದಲ್ಲಿ ಪ್ರಶಸ್ತಿ ಪುರಸ್ಕೃತರ ಕುರಿತು ವಿಚಾರ ಸಂಕಿರಣ ಮತ್ತು ಅಕಾಡೆಮಿಯ ಸರ್ವಸದಸ್ಯರ ಸಭೆ ಕೆ.ಇ.ಬಿ.ಯ ಸೊಸೈಟಿಯಲ್ಲಿ ಹಿಂದಿನ ದಿನ ಜರುಗಿತ್ತು. ಕಾಪಸೆ ಅವರು ತಮ್ಮ ಅವಧಿಯ ಮೊದಲ ಕಾರ್ಯಕ್ರಮವನ್ನು ''''''''ಕಾವ್ಯ ಕಟ್ಟುವ ಬಗೆ'''''''' ಎಂಬ ಕಾವ್ಯ ಕಮ್ಮಟವನ್ನು ಶರೀಫರ ಶಿಶುವಿನಾಳದಲ್ಲಿ ನಡೆಸಿದ್ದರು. ನಾಡಿನ ೩೦ಕ್ಕೂ ಹೆಚ್ಚು ಯುವ ಬರಹಗಾರರು ತರಬೇತಿ ಪಡೆದಿದ್ದರು. ಬಿ.ಎ. ಸನದಿ, ಡಾ. ಸುಮತೀಂದ್ರ ನಾಡಿಗ, ಜಯಂತ ಕಾಯ್ಕಿಣಿ, ಶ್ಯಾಮಸುಂದರ ಬಿದರಕುಂದಿ ಹಾಗೂ ಸತೀಶ ಕುಲಕಲರ್ಣಿ ಕಮ್ಮಟ ನಡೆಸಿದ್ದರು.

ಕರ್ನಾಟಕ ಸಾಹಿತ್ಯ ಆಕಾಡೆಮಿ, ವಾರಂಬಳ್ಳಿ ಪ್ರತಿಷ್ಠಾನ ಹಾಗೂ ಹಾವನೂರು ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ಬರಗೂರು ರಾಮಚಂದ್ರಪ್ಪನವರ ಬದುಕು ಬರಹ ಕುರಿತು ಒಂದು ದಿನದ ವಿಚಾರ ಸಂಕಿರಣ ನಡೆದಾಗಲೂ ಡಾ. ಗುರುಲಿಂಗ ಕಾಪಸೆ ಮತ್ತು ವಿವೇಕ ರೈ ಹಾವೇರಿಗೆ ಬಂದಿದ್ದರು. ಬರಗೂರ ಅವರು ಲೇಖಕರೊಂದಿಗೆ ಸಂವಾದವನ್ನು ನಡೆಸಿದ್ದು ಅವಿಸ್ಮರಣೀಯ.

ಖ್ಯಾತ ಲಲಿತ ಪ್ರಬಂಧಕಾರ ಹಾವೇರಿ ರಾ.ಕು. (ರಾಮಚಂದ್ರ ವೆಂಕಟೇಶ ಕುಲಕರ್ಣಿ) ಅವರಿಗೆ ಅಕಾಡೆಮಿಯ ಗೌರವ ಪ್ರಶಸ್ತಿಯನ್ನು ಅವರ ಅನಾರೋಗ್ಯದ ಕಾರಣದಿಂದಾಗಿ ಇಲ್ಲಿಗೆ ಬಂದು (ಗೆಳೆಯರ ಬಳಗದ ಮಣಿಬಾಯಿ ಲೋಡಾಯಾ ಸಭಾಂಗಣದಲ್ಲಿ) ಪ್ರಶಸ್ತಿ ಪ್ರದಾನ ೨೦೦೩ರಲ್ಲಿ ಮಾಡಿದ್ದರು. ಸಜ್ಜನಿಕೆಯ ಸ್ವರೂಪವಾಗಿದ್ದ ಕಾಪಸೆ ಗುರುಗಳು ನನ್ನಂತಹ ಅನೇಕ ಲೇಖಕರಿಗೆ ಕೈ ಹಿಡಿದು ಮುನ್ನಡಿಸಿದ ಸಹೃದಯಿ ದೊಡ್ಡ ಲೇಖಕ ಎಂದು ಸತೀಶ ಕುಲಕರ್ಣಿ ನೆನಪಿನ ಬುತ್ತಿ ತೆರೆದಿಟ್ಟಿದ್ದಾರೆ.

Share this article