ಕನ್ನಡಪ್ರಭ ವಾರ್ತೆ ಭಾರತೀನಗರ
ಕಾರ್ಕಹಳ್ಳಿ ಶ್ರೀಬಸವೇಶ್ವರ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.ತಹಸೀಲ್ದಾರ್ ಸೋಮಶೇಖರ್ ಶ್ರೀಬಸವೇಶ್ವರ ದೇವರಿಗೆ ಪೂಜೆ ಸಲ್ಲಿಸಿ ರಥ ಎಳೆಯುವುದರ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ಭಕ್ತರ ಹರ್ಷೋದ್ಗಾರ, ಪಟಾಕಿಗಳ ಚಿತ್ತಾರ, ತಮಟೆ ವಾದ್ಯಗಳ ನಡುವೆ ಪೂಜಾ ಕುಣಿತದ ಕಲಾಮೇಳದೊಂದಿಗೆ ರಥೋತ್ಸವ ಅದ್ಧೂರಿಯಾಗಿ ಜರುಗಿತು.
ರಥೋತ್ಸವ ನಡೆಯುವ ಮುನ್ನ ಚಿಕ್ಕರಸಿನಕೆರೆ ಕಾಲಭೈರವೇಶ್ವರ, ಕಾರ್ಕಹಳ್ಳಿ ಬಸವೇಶ್ವರ ಬಸಪ್ಪ ಹಾಗೂ ಪಟ್ಟಲದಮ್ಮ ಸೇರಿದಂತೆ ಇತರೆ ದೇವತೆಗಳ ಮೆರವಣಿಗೆ ಮೂಲಕ ಬಸವೇಶ್ವರ ದೇವರ ವಿಗ್ರಹವನ್ನು ರಥೋತ್ಸವ ಸ್ಥಳಕ್ಕೆ ಕರೆತರಲಾಯಿತು. ನಂತರ ಸಂಪ್ರಾದಾಯಿಕ ಪೂಜೆಯೊಂದಿಗೆ ದೇವರ ಮೂರ್ತಿಯನ್ನು ರಥೋತ್ಸವಕ್ಕೆ ಅರ್ಚಕರು ಪೂಜಾ ವಿಧಿವಿಧಾನಗಳನ್ನು ಸಲ್ಲಿಸಿದರು. ನಂತರ ನಡೆದ ರಥೋತ್ಸವದಲ್ಲಿ ಸಾವಿರಾರು ಭಕ್ತಾಧಿಗಳು ಪಾಲ್ಗೊಂಡು ಹಣ್ಣುಜವನಗಳನ್ನು ಎಸೆದು ತಮ್ಮ ಭಕ್ತಿಪ್ರದರ್ಶಿಸಿದರು.ರಥೋತ್ಸವದಲ್ಲಿ ಪೂಜಾ ಕುಣಿತ, ಡೊಳ್ಳುಕುಣಿತ ತಂಡಗಳ ಕಲಾ ಪ್ರದರ್ಶನ ಗಮನ ಸೆಳೆಯಿತು. ರಥೋತ್ಸವದ ವೇಳೆ ಅಹಿತಕರ ಘಟಕ ನಡೆಯದಂತೆ ಕೆ.ಎಂ.ದೊಡ್ಡಿ ಪೊಲೀಸರಿಂದ ಬಿಗಿಭದ್ರತೆ ಏರ್ಪಡಿಸಲಾಗಿತ್ತು.
ನಾಳೆ ಶ್ರೀಸಣ್ಣಕ್ಕಿರಾಯಸ್ವಾಮಿ ಬಸವಪ್ಪನ ಆರಾಧನ ಮಹೋತ್ಸವಭಾರತೀನಗರ:ದೊಡ್ಡರಸಿನಕೆರೆ ಗ್ರಾಮದಲ್ಲಿ ಶ್ರೀಸಣ್ಣಕ್ಕಿರಾಯಸ್ವಾಮಿ ಬಸವಪ್ಪ ನಿಧನಗೊಂಡ ಹಿನ್ನೆಲೆಯಲ್ಲಿ ಮಾ.29 ರಂದು 11 ನೇ ದಿನದ ಆರಾಧನಾ ಮಹೋತ್ಸವ ನಡೆಯಲಿದೆ ಎಂದು ದೇಗುಲದ ಸಮಿತಿ ಸದಸ್ಯ ಡಿ.ಎಂ.ಮಂಚೇಗೌಡ ತಿಳಿಸಿದ್ದಾರೆ.ನಡೆದಾಡುವ ದೇವರು ಶ್ರೀಸಣ್ಣಕ್ಕಿರಾಯಸ್ವಾಮಿ ಬಸವಪ್ಪ ನಿಧನವಾಗಿರುವುದು ನಮ್ಮೆಲ್ಲರಿಗೂ ನೋವು ತಂದಿದೆ. ಆರಾಧನಾ ಮಹೋತ್ಸವವನ್ನು ನಡೆಸಲು ಸಮಿತಿ ತೀರ್ಮಾನ ನಡೆಸಲಾಗಿದೆ. ಆರಾಧನಾ ಪೂಜಾ ಮಹೋತ್ಸವದಲ್ಲಿ ಶ್ರೀರಂಗಪಟ್ಟಣ ಬೇಬಿಮಠ ಚಂದ್ರವನ ಆಶ್ರಮದ ಪೀಠಾಧ್ಯಕ್ಷ ತ್ರೀನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ಕನಕಪುರ ಗುರುವಿನ ಪುರ ಮಠದ ಜಗದೀಶ್ ಶಿವಾಚಾರ್ಯ ಸ್ವಾಮೀಜಿ, ಮಡೇನಹಳ್ಳಿ ತೋಂಟದಾರ್ಯ ಮಠದ ಅರುಣಾಚಲ ಸ್ವಾಮೀಜಿ ಅವರು ಭಾಗವಹಿಸಲಿದ್ದಾರೆ. ಈ ವೇಳೆ ಸಾವಿರಾರು ಭಕ್ತಾದಿಗಳಿಗೆ ಅನ್ನಸಂತರ್ಪಣೆ, ಮಳವಳ್ಳಿ ಡಾ.ಎಂ.ಮಹದೇವಸ್ವಾಮಿ ತಂಡದವರಿಂದ ಗೀತ ನಮನ ನಡೆಯಲಿದೆ.