ಮುಂಡಗೋಡ: ತೀವ್ರವಾಗಿ ಆವರಿಸಿರುವ ಬೇಸಿಗೆ ಹಾಗೂ ಬರಗಾಲವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ನರೇಗಾ ಯೋಜನೆ ಸಹಕಾರಿಯಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಗ್ರಾಮೀಣ ಜನರಿಗೆ ಕೆಲಸ ಒದಗಿಸಲು ಮುಂದಾಗಬೇಕು. ಮನೆ- ಮನೆಗೆ ಭೇಟಿ ನೀಡಿ ಕೆಲಸದ ಬೇಡಿಕೆ ಅರ್ಜಿಗಳನ್ನು ಸಂಗ್ರಹಿಸಿ ಏ. 1ರಿಂದ ಬೇಡಿಕೆಗೆ ಅನುಗುಣವಾಗಿ ಕೆಲಸ ನೀಡಬೇಕು ಎಂದು ಮುಂಡಗೋಡ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಸೋಮಲಿಂಗಪ್ಪ ಛಬ್ಬಿ ತಿಳಿಸಿದರು.
ಬರಗಾಲ ಘೋಷಣೆಯಾದ ಕಾರಣ ನರೇಗಾದಡಿ ಕಾರ್ಯ ನಿರ್ವಹಿಸುವ ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಮಟ್ಟದ ಎಲ್ಲ ಅಧಿಕಾರಿಗಳು, ಸಿಬ್ಬಂದಿ ಪರಸ್ಪರ ಹೊಂದಾಣಿಕೆಯಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಗ್ರಾಮೀಣ ಪ್ರದೇಶದ ಸಕ್ರಿಯ ನರೇಗಾ ಕೂಲಿಕಾರರನ್ನು ಒಗ್ಗೂಡಿಸಿ ಕೆಲಸಕ್ಕೆ ಬರುವಂತೆ ಪ್ರೇರೇಪಿಸಬೇಕು. ನರೇಗಾದಲ್ಲಿ ಲಭ್ಯವಿರುವ ವೈಯಕ್ತಿಕ ಕಾಮಗಾರಿ ಹಾಗೂ ಸಮುದಾಯ ಕಾಮಗಾರಿಗಳಲ್ಲಿ ಸಿಗುವ ಕೂಲಿ ಕೆಲಸ ಮತ್ತು ಸೌಲಭ್ಯಗಳ ಕುರಿತು ಅರಿವು ಮೂಡಿಸಿ ಕೆಲಸಕ್ಕಾಗಿ ಗುಳೆ ಹೋಗದಂತೆ ಮನವರಿಕೆ ಮಾಡಬೇಕು ಎಂದರು.
2024- 2025ನೇ ಸಾಲಿನ ಆರ್ಥಿಕ ವರ್ಷದಲ್ಲಿ ನರೇಗಾ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ನರೇಗಾ ಕೂಲಿಕಾರರು ಕೆಲಸದ ಬೇಡಿಕೆ ಅರ್ಜಿ ಸಲ್ಲಿಸಿದರೆ ಕೆಲಸ ನೀಡಲಾಗುವುದು ಎಂದರು.ಇದೇ ವೇಳೆ ಲೋಕಸಭಾ ಚುನಾವಣೆ ಘೋಷಣೆ ನಿಮಿತ್ತ ಗ್ರಾಮಸ್ಥರಿಗೆ ಹಾಗೂ ಮತದಾರರಿಗೆ ಚುನಾವಣೆ ಮಹತ್ವ, ನಿಷ್ಪಕ್ಷಪಾತ ಮತದಾನ, ಮತದಾನ ಪ್ರಕ್ರಿಯೆ ಕುರಿತು ಮತದಾನ ಜಾಗೃತಿ ಮೂಡಿಸಲಾಯಿತು.