ಕನ್ನಡಪ್ರಭ ವಾರ್ತೆ ಶಿವಮೊಗ್ಗ ಮೈಸೂರು ದಸರಾ ಆಚರಣೆ ಬಿಟ್ಟರೆ ಶಿವಮೊಗ್ಗದಲ್ಲೇ ಅದ್ದೂರಿಯಾಗಿ ದಸರಾ ಆಚರಣೆ ಮಾಡಲಾಗುತ್ತದೆ. ಮೈಸೂರು ಮಾದರಿಯಲ್ಲೆ ಶಿವಮೊಗ್ಗ ದಸರಾ ನಡೆಸಿಕೊಂಡು ಬರಲಾಗುತ್ತದೆ. ಆದರೆ, ಸರ್ಕಾರ ಈ ಬಾರಿ ಶಿವಮೊಗ್ಗ ದಸರಾಕ್ಕೆ ₹1 ಕೋಟಿ ನೀಡುವ ಬದಲು, ಕೇವಲ 20 ಲಕ್ಷ ಅನುದಾನ ನೀಡಿದೆ. ಇದು ಯಾವುದಕ್ಕೆ ಸಾಲುತ್ತದೆ ಎಂದು ಜೆಡಿಎಸ್ ಕೋರ್ ಕಮಿಟಿ ಸಂಚಾಲಕ ಹಾಗೂ ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪಾಲಿಕೆ ವತಿಯಿಂದ ದಸರಾ ಹಬ್ಬ ಶಿವಮೊಗ್ಗದಲ್ಲಿ ಹಲವು ವರ್ಷಗಳಿಂದ ಅತ್ಯಂತ ಸಡಗರ, ಸಂಭ್ರಮದಿಂದ ನಡೆಯುತ್ತಿದೆ. ಈ ಹಿಂದಿನ ಎಲ್ಲ ಸರ್ಕಾರಗಳು ಕೂಡ ಶಿವಮೊಗ್ಗ ದಸರಾ ಹಬ್ಬಕ್ಕೆ ₹1 ಕೋಟಿ ಅನುದಾನ ನೀಡುತ್ತಿವೆ. ನಾನು ಶಾಸಕನಾಗಿದ್ದಾಗ ಕೂಡ ₹1 ಕೋಟಿ ಅನುದಾನ ತಂದಿದ್ದೆ. ಆದರೆ, ಈಗಿನ ಕಾಂಗ್ರೆಸ್ ಸರ್ಕಾರ ಕೇವಲ ₹20 ಲಕ್ಷ ನೀಡಿದೆ. ಇದು ಯಾವುದಕ್ಕೂ ಸಾಲದು. ಆದ್ದರಿಂದ ತಕ್ಷಣವೇ ಸರ್ಕಾರ ಉಳಿದ ₹80 ಲಕ್ಷ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು. ಈಗಾಗಲೇ ಮಹಾನಗರ ಪಾಲಿಕೆಯಿಂದ ನಡೆಯುತ್ತಿರುವ ದಸರಾ ಹಬ್ಬ ವಿವಿಧ ಸಮಿತಿಗಳ ಸಹಭಾಗಿತ್ವದಲ್ಲಿ ವಿಜೃಂಭಣೆಯಿಂದ ನಡೆಯುತ್ತಿದೆ. ಪಾಲಿಕೆಯಿಂದ ಪೂರ್ತಿ ಹಣ ಖರ್ಚು ಮಾಡಿದರೆ ಅಭಿವೃದ್ಧಿ ಕಾರ್ಯಗಳಿಗೆ ತೊಂದರೆ ಆಗಲಿದೆ. ಶಿವಮೊಗ್ಗ ನಾಗರಿಕರ ತೆರಿಗೆ ಹಣ ಖರ್ಚಾಗಲಿದೆ. ಈ ನಿಟ್ಟಿನಲ್ಲಿ ಸರ್ಕಾರ ನೆರವು ನೀಡಬೇಕು ಎಂದರು. - - - ಬಾಕ್ಸ್ ಆರೋಪ-ಪ್ರತ್ಯಾರೋಪ ಬಿಟ್ಟರೆ ಶಿವಮೊಗ್ಗ ಶಾಂತಿ ಶಿವಮೊಗ್ಗ ಶಾಂತ ದಿಕ್ಕಿನತ್ತ ಸಾಗುತ್ತಿದೆ. ಇಂತಹ ಸಮಯದಲ್ಲಿ ಯಾವ ರಾಜಕಾರಣಿಗಳೂ ವ್ಯತಿರಿಕ್ತ ಹೇಳಿಕೆ ನೀಡದೇ ನಗರದ ಶಾಂತಿಗೆ ಶ್ರಮಿಸಬೇಕು ಎಂದು ಕೆ.ಬಿ.ಪ್ರಸನ್ನಕುಮಾರ್ ಮನವಿ ಮಾಡಿದರು. ಎಲ್ಲ ಧರ್ಮದ ಗೂಂಡಾವರ್ತನೆ ಖಂಡಿಸುತ್ತ ಶಾಂತಿ ಕಾಪಾಡಬೇಕಾದ ಹೊಣೆ ಎಲ್ಲ ಪಕ್ಷಗಳದ್ದಾಗಿದೆ. ನಾಯಕರು ಎನಿಸಿದವರು ಆರೋಪ -ಪ್ರತ್ಯಾರೋಪ ಮಾಡುವುದನ್ನು ಬಿಟ್ಟರೆ ಒಳ್ಳೆಯದು ಎಂದು ಸಲಹೆ ನೀಡಿದರು. ಜೆಡಿಎಸ್‍ನ ಬದಲಾದ ರಾಜಕೀಯ ವಿದ್ಯಮಾನದಲ್ಲಿ ಶಾಸಕಾಂಗ ಪಕ್ಷದ ನಾಯಕರಾದ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವುದು ಸಂತೋಷದ ವಿಷಯ. ಇದನ್ನು ಜಿಲ್ಲಾ ಜೆಡಿಎಸ್ ಸ್ವಾಗತಿಸುತ್ತದೆ. ಅವರನ್ನು ಆಯ್ಕೆ ಮಾಡಿದ ಎಲ್ಲ ಸದಸ್ಯರಿಗೆ ಅಭಿನಂದನೆಗಳು ಎಂದರು. ಸುದ್ದಿಗೋಷ್ಠಿಯಲ್ಲಿ ಕಾರ್ಯಾಧ್ಯಕ್ಷ ಕೆ.ಎನ್. ರಾಮಕೃಷ್ಣ, ಪ್ರಮುಖರಾದ ತ್ಯಾಗರಾಜ್, ಗೋವಿಂದಪ್ಪ, ಅಬ್ದುಲ್ ವಾಜೀದ್, ದೀಪಕ್ ಸಿಂಗ್ ಮೊದಲಾದವರು ಉಪಸ್ಥಿತರಿದ್ದರು. - - - -21ಎಸ್‌ಎಂಜಿಕೆಪಿ03: ಕೆ.ಬಿ.ಪ್ರಸನ್ನಕುಮಾರ್
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.