ಕನ್ನಡಪ್ರಭ ವಾರ್ತೆ ವಿಜಯಪುರ
ಕರ್ನಾಟಕ ರಾಜ್ಯ ಸರ್ಕಾರದಿಂದ ರಚನೆ ಆಗಿರುವ ರೈತ ಉತ್ಪಾದಕರ ಸಂಸ್ಥೆಗಳ ಬಾಕಿ ಹಣ ಬಿಡುಗಡೆಗೊಳಿಸಲು ಆಗ್ರಹಿಸಿ ಭಾರತೀಯ ಜನತಾ ಪಾರ್ಟಿ, ನಗರ ಮಂಡಲ ರೈತ ಮೋರ್ಚಾ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.ಬಿಜೆಪಿ ರೈತಮೋರ್ಚಾ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದಿರುವ ಕಾಂಗ್ರೆಸ್ ಸರ್ಕಾರದ ಸಾಧನೆ ಮಾತ್ರ ರೈತರ ಪಾಲಿಗೆ ಶೂನ್ಯವಾಗಿದೆ. ಗ್ಯಾರಂಟಿ ಗುಂಗಿನಲ್ಲಿರುವ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು ಅಭಿವೃದ್ಧಿಯನ್ನು ಸಂಪೂರ್ಣ ಮರೆತಿದ್ದಾರೆ. ತಮ್ಮದೆ ಪಕ್ಷದ ಶಾಸಕರು ಕೂಡ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಅದೇ ಅವರ ಕಳಪೆ ಆಡಳಿತ ತೋರಿಸುತ್ತದೆ. ಅಭಿವೃದ್ಧಿ ಕಾಮಗಾರಿಗೆ ಹಣ ನೀಡದ ಸರ್ಕಾರ, ರೈತರ ಏಳಿಗಾಗಿ ರಚನೆಗೊಂಡಿರುವ ರೈತ ಉತ್ಪಾದಕರ ಸಂಸ್ಥೆಗಳಿಗೆ ನೀಡಬೇಕಾದ ಹಣ ಬಾಕಿ ಉಳಿಸಿಕೊಳ್ಳುವ ಮೂಲಕ ಅನ್ನದಾತರಿಗೂ ಅನ್ಯಾಯ ಮಾಡಿದೆ ಎಂದರು.
ಹಣ ನೀಡದೇ ಇರುವುದರಿಂದ 10 ಲಕ್ಷ ರೈತರಿಗೆ ಹಾಗೂ 12 ಸಾವಿರ ರೈತ ಉತ್ಪಾದಕ ಸಂಸ್ಥೆಗಳ ನಿರ್ದೇಶಕರಿಗೆ ತೊಂದರೆ ಆಗುತ್ತಿದೆ. ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಬಾಕಿ ಹಣ ಬಿಡುಗಡೆ ಗೊಳಿಸದಿದ್ದರೆ, ರಾಜ್ಯದಾದ್ಯಂತ ಉಗ್ರವಾದ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಈ ವೇಳೆ ನಗರ ಮಂಡಲ ಅಧ್ಯಕ್ಷ ಶಂಕರ ಹೂಗಾರ, ರೈತ ಮೋರ್ಚಾ ಅಧ್ಯಕ್ಷ ರಾಚು ಬಿರಾದಾರ, ಪ್ರಧಾನ ಕಾರ್ಯದರ್ಶಿ ಆನಂದ ಪಡಗಾನೂರ, ಕಾರ್ಯದರ್ಶಿ ಬಸನಗೌಡ ಬಿರಾದಾರ, ಸದಸ್ಯರಾದ ಕುಮಾರ ನಿಡೋಣಿ, ಜಗದೀಶ ಪಚ್ಯಾಪುರ, ರಮೇಶ ಚಿಕ್ಕಲಕಿ, ಸಿದ್ದು ಬಿರಾದಾರ, ಹಣಮಂತ ಹಡಪದ, ರೋಹಿಣಿ ಚಾಮೇಕರ, ರೇಣುಕಾ ಪರಸಪ್ಪಗೋಳ ಮತ್ತಿತರರು ಉಪಸ್ಥಿತರಿದ್ದರು.