ರಾಮನಗರ: ರೈತ ಉತ್ಪಾದಕ ಸಂಸ್ಥೆಗಳಿಗೆ ಬಾಕಿ ಹಣ ಬಿಡುಗಡೆ ಮಾಡುವಂತೆ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಬಿ.ಪಿ.ಪ್ರಕಾಶ್ ನೇತೃತ್ವದ ನಿಯೋಗ ಗುರುವಾರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿತು.
ಈ ವೇಳೆ ಮಾತನಾಡಿದ ಬಿ.ಪಿ.ಪ್ರಕಾಶ್, ರಾಜ್ಯದಲ್ಲಿ 2015 -16ರಿಂದ 2024-25ರವರೆಗೆ ನಬಾರ್ಡ್ ಪ್ರಾಯೋಜಿತ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಮತ್ತು ಪ್ರಧಾನಮಂತ್ರಿಗಳು 10 ಸಾವಿರ ರೈತ ಉತ್ಪಾದಕ ಯೋಜನೆಯಡಿ ಒಟ್ಟು 3 ಯೋಜನೆಗಳಿಂದ 710 ರೈತ ಉತ್ಪಾದಕರ ಸಂಸ್ಥೆಗಳು ಪ್ರಾರಂಭವಾಗಿದ್ದು, ಅಂದಾಜು ಅನುದಾನ 200 ಕೋಟಿ ರುಪಾಯಿಗಳಲ್ಲಿ 182 ಬಿಡುಗಡೆಯಾಗಿದೆ. ಆದರೆ, ರಾಜ್ಯ ಸರ್ಕಾರದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸ್ಮರಣಾರ್ಥ ಅಮೃತ ರೈತ ಉತ್ಪಾದಕರ ಸಂಸ್ಥೆಗಳ ಬಿಜೆಪಿ ಸರ್ಕಾರದಲ್ಲಿ ಘೋಷಣೆಯಾಗಿದ್ದು 2021 - 22ರಿಂದ 2024-25ರವರೆಗೆ 490 ರೈತ ಉತ್ಪಾದಕರ ಸಂಸ್ಥೆಗಳು ರಚನೆಯಾಗಿವೆ. ಅಂದಾಜು ಅನುದಾನ 150 ಕೋಟಿ ರುಪಾಯಿಗಳಿದ್ದು, ಶೇ.12ರಷ್ಟು ಮಾತ್ರ ಅನುದಾನ ಬಿಡುಗಡೆಯಾಗಿದ್ದು ಶೇ. 82ರಷ್ಟು ಬಾಕಿ ಇದೆ ಎಂದು ದೂರಿದರು.ಸದ್ಯ ಬಿಡುಗಡೆಗೊಂಡಿರುವ ಅನುದಾನ ಕಳೆದ ಬಿಜೆಪಿ ಸರ್ಕಾರದಲ್ಲಿ ಬಿಡುಗಡೆಯಾಗಿದ್ದು, ಈಗಿನ ಕಾಂಗ್ರೆಸ್ ಸರ್ಕಾರ ರೈತ ಉತ್ಪಾದಕ ಸಂಸ್ಥೆಗಳಿಗೆ ಯಾವುದೇ ಅನುದಾನ ಬಿಡುಗಡೆ ಮಾಡದಿರುವುದರಿಂದ ಸಂಸ್ಥೆಗಳ ಅಭಿವೃದ್ಧಿ ಕುಂಠಿತಗೊಂಡಿದೆ. ಇದರಿಂದ 10 ಲಕ್ಷ ರೈತರಿಗೆ ಮತ್ತು 12 ಸಾವಿರ ರೈತ ಉತ್ಪಾದಕ ಸಂಸ್ಥೆಗಳ ನಿರ್ದೇಶಕರಿಗೆ ತೊಂದರೆಗಳಾಗುತ್ತಿದೆ ಎಂದು ಹೇಳಿದರು.
ಬಾಕಿ ಉಳಿಸಿಕೊಂಡಿರುವ ಅನುದಾನವನ್ನು ರೈತ ಉತ್ಪಾದಕರ ಸಂಸ್ಥೆಗಳಿಗೆ ಶೀಘ್ರವಾಗಿ ಬಿಡುಗಡೆ ಮಾಡಿ ಅವುಗಳ ಅಭಿವೃದ್ಧಿಗೆ ಸಹಾಯ ಮಾಡಬೇಕು. ತಪ್ಪಿದಲ್ಲಿ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿಯ ವಿರುದ್ಧ ರಾಜ್ಯಾದ್ಯಂತ ಹೋರಾಟ ರೂಪಿಸಲಾಗುವುದು. ಷೇರುದಾರರಿಗೆ, ಸದಸ್ಯರಿಗೆ ಪ್ರೋತ್ಸಾಹಕ ಮತ್ತು ಸಾಮಾನ್ಯ ಲಾಭಾಂಶದ ಹಂಚಿಕೆ. ವಿವಿಧ ಇಲಾಖೆಗಳಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ರೈತ ಉತ್ಪಾದಕರ ಕಂಪನಿ ಮುಖಾಂತರ ಪಡೆಯಲು ಹೆಚ್ಚಿನ ಅವಕಾಶ. ಸಕಾಲದಲ್ಲಿ ಅದರಲ್ಲೂ ಮುಖ್ಯವಾಗಿ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಅಗತ್ಯ ಕೃಷಿ ಉಪಕರಣಗಳ ಸೇವೆ ವಿವಿಧ ಅಭಿವೃದ್ಧಿ ಇಲಾಖೆಗಳಲ್ಲಿ ರೈತ ಉತ್ಪಾದಕರ ಸಂಸ್ಥೆಗಳಿಗೆ ಲಭ್ಯವಿರುವ ಆರ್ಥಿಕ ನೆರವನ್ನು ಪಡೆದು ಮೂಲ ಸೌಕರ್ಯಗಳನ್ನು ರಚಿಸಿ ಅವುಗಳ ಸೇವೆಗಳನ್ನು ಸದಸ್ಯ ರೈತರಿಗೆ ಒದಗಿಸುವ ಉದ್ದೇಶ ಹೊಂದಿರುತ್ತವೆ ಎಂದು ಪ್ರಕಾಶ್ ಹೇಳಿದರು.ನಿಯೋಗದಲ್ಲಿ ರೈತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗಾನಂದ, ಖಜಾಂಚಿ ಕಾಂತರಾಜು, ನಗರ ಘಟಕದ ಅಧ್ಯಕ್ಷ ದರ್ಶನ್, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಮುರಳೀಧರ್, ಎಸ್.ಆರ್.ನಾಗರಾಜು, ಚಂದ್ರೇಗೌಡ, ನಾಗರಾಜು, ಶಿವಕುಮಾರ್, ಅನಿಲ್, ಬಿಜೆಪಿ ಮಂಜು, ಪ್ರದೀಪ್ ಕನಕಪುರ, ಎಸ್.ಜಯಣ್ಣ ಮತ್ತಿತರರು ಹಾಜರಿದ್ದರು.23ಕೆಆರ್ ಎಂಎನ್ 7.ಜೆಪಿಜಿ
ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಬಿ.ಪಿ.ಪ್ರಕಾಶ್ ನೇತೃತ್ವದ ನಿಯೋಗವು ಅಪರ ಜಿಲ್ಲಾಧಿಕಾರಿ ಬಿನೋಯ್ ಅವರಿಗೆ ಮನವಿ ಸಲ್ಲಿಸಿದರು.